Skip to content
BibleKenya

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

ಕೀರ್ತ 108

ಜಯದ ವಾಗ್ದಾನ ನೆರವೇರಬೇಕೆಂಬ ಪ್ರಾರ್ಥನೆ

ದಾವೀದನ ಕೀರ್ತನೆ.

ದೇವರೇ, ನನ್ನ ಹೃದಯವು ಸ್ಥಿರವಾಗಿದೆ;

ನಾನು ನುಡಿಸುತ್ತಾ ಹಾಡುವೆನು; ನನ್ನ ಆತ್ಮವೇ, ಎಚ್ಚೆತ್ತುಕೋ!

ಸ್ವರಮಂಡಲವೇ, ಕಿನ್ನರಿಯೇ, ಎಚ್ಚರಗೊಳ್ಳಿರಿ.

ಸಂಕೀರ್ತನೆಯಿಂದ ಉದಯವನ್ನು ಎದುರುಗೊಳ್ಳುವೆನು.

ಯೆಹೋವನೇ, ಜನಾಂಗಗಳಲ್ಲಿ ನಿನ್ನನ್ನು ಸ್ತುತಿಸುವೆನು;

ಸರ್ವದೇಶದವರೊಳಗೆ ನಿನ್ನನ್ನು ಕೊಂಡಾಡುವೆನು.

ಏಕೆಂದರೆ ನಿನ್ನ ಕೃಪೆಯು ಆಕಾಶಕ್ಕಿಂತಲೂ ದೊಡ್ಡದಾಗಿದೆ,

ನಿನ್ನ ಸತ್ಯತೆಯು ಮುಗಿಲನ್ನು ನಿಲುಕುತ್ತದೆ.

ದೇವರೇ, ಮೇಲಣ ಲೋಕಗಳಲ್ಲಿ ನಿನ್ನ ಪ್ರಭಾವವು ಮೆರೆಯಲಿ;

ಭೂಮಂಡಲದ ಮೇಲೆಲ್ಲಾ ನಿನ್ನ ಮಹತ್ವವು ಹಬ್ಬಲಿ.

ನಿನ್ನ ಪ್ರಿಯರಾದ ನಮ್ಮ ಮೊರೆಯನ್ನು ಲಾಲಿಸಿ ರಕ್ಷಿಸು,

ನಿನ್ನ ಭುಜಬಲದಿಂದ ನಮ್ಮನ್ನು ಜಯಗೊಳಿಸು.

ದೇವರು ತನ್ನ ಪವಿತ್ರತ್ವವನ್ನು ಸಾಕ್ಷಿಮಾಡಿ ನುಡಿದಿದ್ದಾನೆ.

ಜಯಘೋಷಮಾಡುವೆನು; ಶೆಖೆಮ್ ಪ್ರದೇಶವನ್ನು ಹಂಚುವೆನು.

ಸುಖೋತ್ ಬಯಲನ್ನು ಅಳತೆಮಾಡಿ ಕೊಡುವೆನು.

ಗಿಲ್ಯಾದ್ ಸೀಮೆಯೂ, ಮನಸ್ಸೆಯ ದೇಶವೂ ನನ್ನವು.

ಎಫ್ರಾಯೀಮ್ ಗೋತ್ರವು ನನಗೆ ಶಿರಸ್ತ್ರಾಣ.

ನನ್ನ ರಾಜದಂಡವು ಯೆಹೂದ ಕುಲವೇ.

ಮೋವಾಬ್ ಪ್ರದೇಶವು ನನ್ನ ಸ್ನಾನಪಾತ್ರೆ;

ಎದೋಮ್ ಸೀಮೆಯು ನನ್ನ ಕೆರಗಳನ್ನು ಬಿಡುವ ಸ್ಥಳ.

ಫಿಲಿಷ್ಟಿಯದ ವಿಷಯವಾಗಿ ಜಯಘೋಷ ಮಾಡುವೆನು.

ಕೋಟೆಕೊತ್ತಲುಗಳುಳ್ಳ ನಗರಕ್ಕೆ ನನ್ನನ್ನು ಕರೆದುಕೊಂಡು ಹೋಗುವವರು ಯಾರು?

ಎದೋಮ್ ಪ್ರಾಂತ್ಯದೊಳಗೆ ನನ್ನನ್ನು ಸೇರಿಸುವವರು ಯಾರು?

ದೇವರೇ, ನೀನು ನಮ್ಮ ಸೈನ್ಯಗಳ ಸಂಗಡ ಬರಲಿಲ್ಲವಲ್ಲಾ!

ದೇವರೇ, ನಮ್ಮನ್ನು ಕೈಬಿಟ್ಟಿಯಾ?

ನಮಗೆ ಕೈನೀಡಿ ಶತ್ರುಬಾಧೆಯಿಂದ ಪಾರುಮಾಡು.

ಮನುಷ್ಯರ ಸಹಾಯವು ವ್ಯರ್ಥ.

ದೇವರಿಂದ ಶೂರಕೃತ್ಯಗಳನ್ನು ನಡೆಸುವೆವು;

ನಮ್ಮ ವೈರಿಗಳನ್ನು ತುಳಿದುಬಿಡುವವನು ಆತನೇ.

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019. Copyright © 2017, 2019 Bridge Connectivity Solutions. Licensed under CC BY-SA 4.0. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.