ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019
ಅರಣ್ಯ 13
ಗೂಢಚಾರರನ್ನು ಕಾನಾನ್ ದೇಶಕ್ಕೆ ಕಳುಹಿಸಿದ್ದು
ಯೆಹೋವನು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ, “ನಾನು ಇಸ್ರಾಯೇಲರಿಗೆ ಕೊಡುವ ಕಾನಾನ್ ದೇಶವನ್ನು ಸಂಚರಿಸಿ ನೋಡುವುದಕ್ಕೆ ನೀನು ಒಂದೊಂದು ಕುಲದಿಂದ ಒಬ್ಬೊಬ್ಬ ಮುಖ್ಯಸ್ಥನನ್ನು ಕಳುಹಿಸಬೇಕು” ಎಂದು ಆಜ್ಞಾಪಿಸಿದನು.
ಯೆಹೋವನ ಅಪ್ಪಣೆಯ ಮೇರೆಗೆ ಮೋಶೆ ಪಾರಾನ್ ಅರಣ್ಯದಿಂದ ಇಸ್ರಾಯೇಲರ ಮುಖ್ಯಸ್ಥರನ್ನು ಕಳುಹಿಸಿದನು. ಅವರ ಹೆಸರುಗಳು ಯಾವುವೆಂದರೆ: ರೂಬೇನ್ ಕುಲದ ಜಕ್ಕೂರನ ಮಗನಾದ ಶಮ್ಮೂವ,
ಸಿಮೆಯೋನ್ ಕುಲದ ಹೋರಿಯನ ಮಗನಾದ ಶಾಫಾಟ್,
ಯೆಹೂದ ಕುಲದ ಯೆಫುನ್ನೆಯನ ಮಗನಾದ ಕಾಲೇಬ್,
ಇಸ್ಸಾಕಾರ್ ಕುಲದ ಯೋಸೇಫನ ಮಗನಾದ ಇಗಾಲ್,
ಎಫ್ರಾಯೀಮ್ ಕುಲದ ನೂನನ ಮಗನಾದ ಹೋಶೇಯ,
ಬೆನ್ಯಾಮೀನ್ ಕುಲದ ರಾಫೂವನ ಮಗನಾದ ಪಲ್ಟೀ,
ಜೆಬುಲೂನ್ ಕುಲದ ಸೋದೀಯನ ಮಗನಾದ ಗದ್ದೀಯೇಲ್,
ಯೋಸೇಫ್ ಅಂದರೆ ಮನಸ್ಸೆ ಕುಲದ ಸೂಸೀಯನ ಮಗನಾದ ಗದ್ದೀ,
ದಾನ್ ಕುಲದ ಗೆಮಲ್ಲೀಯನ ಮಗನಾದ ಅಮ್ಮೀಯೇಲ್,
ಆಶೇರ್ ಕುಲದ ಮೀಕಾಯೇಲನ ಮಗನಾದ ಸೆತೂರ್,
ನಫ್ತಾಲಿ ಕುಲದ ವಾಪೆಸೀಯನ ಮಗನಾದ ನಹಬೀ,
ಗಾದ್ ಕುಲದ ಮಾಕೀಯನ ಮಗನಾದ ಗೆಯೂವೇಲ್.
ದೇಶವನ್ನು ಸಂಚರಿಸಿ ನೋಡುವುದಕ್ಕೆ ಮೋಶೆ ಕಳುಹಿಸಿದ ಮನುಷ್ಯರ ಹೆಸರುಗಳು ಇವೇ. ಮೋಶೆ ನೂನನ ಮಗನಾದ ಹೋಶೇಯನಿಗೆ ಯೆಹೋಶುವನೆಂದು ಹೆಸರಿಟ್ಟನು. ಕಾನಾನ್ ದೇಶದಲ್ಲಿ ಸಂಚರಿಸಿ ನೋಡುವುದಕ್ಕೆ ಮೋಶೆ ಅವರನ್ನು ಕಳುಹಿಸುವಾಗ ಅವರಿಗೆ, “ನೀವು ಕಾನಾನ್ ದೇಶದ ದಕ್ಷಿಣ ಪ್ರಾಂತ್ಯದ ಮಾರ್ಗವಾಗಿ ಬೆಟ್ಟದ ಸೀಮೆಗೆ ಹತ್ತಿಹೋಗಿ ಆ ದೇಶದ ಸಂಗತಿಯನ್ನೆಲ್ಲಾ ನೋಡಿ ತಿಳಿದುಕೊಳ್ಳಬೇಕು. ಅಲ್ಲಿನ ನಿವಾಸಿಗಳು ಬಲಿಷ್ಠರೋ ಅಥವಾ ಬಲಹೀನರೋ, ಬಹಳ ಜನರೋ ಅಥವಾ ಸ್ವಲ್ಪ ಜನರೋ, ಅವರ ದೇಶವು ಒಳ್ಳೆಯದೋ ಅಥವಾ ಕೆಟ್ಟದ್ದೋ? ಅವರ ಪಟ್ಟಣಗಳು ಪಾಳೆಯಗಳೋ ಅಥವಾ ಕೋಟೆಗಳೋ? ಭೂಮಿಯು ಸಾರವಾದುದೋ ಅಥವಾ ನಿಸ್ಸಾರವಾದುದೋ, ಮರಗಳುಳ್ಳದ್ದೋ ಅಥವಾ ಬಯಲುಪ್ರದೇಶವೋ ಎಂದು ನೋಡಿ ತಿಳಿದುಕೊಳ್ಳಬೇಕು. ಅದಲ್ಲದೆ ನೀವು ಧೈರ್ಯವುಳ್ಳವರಾಗಿದ್ದು ಆ ದೇಶದ ಉತ್ಪನ್ನಗಳಲ್ಲಿ ಕೆಲವನ್ನು ತರಬೇಕು” ಎಂದು ಹೇಳಿದನು. ಆಗ ದ್ರಾಕ್ಷಾಲತೆಗಳ ಪ್ರಥಮ ಫಲದ ಕಾಲವಾಗಿತ್ತು.
ಅವರು ಬೆಟ್ಟವನ್ನು ಹತ್ತಿ ಚಿನ್ ಅರಣ್ಯದಿಂದ ಹಮಾತಿನ ದಾರಿಯಲ್ಲಿರುವ ರೆಹೋಬಿನ ವರೆಗೆ ಆ ದೇಶವನ್ನು ಸಂಚರಿಸಿ ನೋಡಿದರು. ಅವರು ಬೆಟ್ಟವನ್ನು ಹತ್ತಿ ಕಾನಾನ್ ದೇಶದ ದಕ್ಷಿಣ ಪ್ರಾಂತ್ಯವನ್ನು ದಾಟಿ ಹೆಬ್ರೋನಿಗೆ ಬಂದರು. ಅಲ್ಲಿ ಅಹೀಮನ್, ಶೇಷೈ, ತಲ್ಮೈ ಎಂಬ ಉನ್ನತ ಪುರುಷರು ಇದ್ದರು. ಹೆಬ್ರೋನ್ ಪಟ್ಟಣವು ಐಗುಪ್ತ ದೇಶದಲ್ಲಿರುವ ಚೋವನ್ ಪಟ್ಟಣಕ್ಕಿಂತ ಏಳು ವರ್ಷ ಮೊದಲು ನಿರ್ಮಿಸಲಾಗಿತ್ತು. ಅವರು ಎಷ್ಕೋಲ್ ಎಂಬ ತಗ್ಗಿಗೆ ಬಂದು ಅಲ್ಲಿ ದ್ರಾಕ್ಷಾಲತೆಯಿಂದ ಒಂದೇ ಗೊಂಚಲುಳ್ಳ ಕೊಂಬೆಯನ್ನು ಕೊಯ್ದರು; ಇಬ್ಬರು ಅದನ್ನು ಅಡ್ಡಕೋಲಿನಿಂದ ಹೊತ್ತುಕೊಂಡು ಬಂದರು. ಕೆಲವು ದಾಳಿಂಬೆ ಮತ್ತು ಅಂಜೂರದ ಹಣ್ಣುಗಳನ್ನೂ ತಂದರು. ಇಸ್ರಾಯೇಲರು ಅಲ್ಲಿ ಆ ದ್ರಾಕ್ಷಿಯ ಗೊಂಚಲನ್ನು ಕೊಯ್ದದ್ದರಿಂದಲೇ ಆ ಸ್ಥಳಕ್ಕೆ “1ಎಷ್ಕೋಲ್” ಎಂದು ಹೆಸರು ಉಂಟಾಯಿತು.
ಗೂಢಚಾರರು ಸಲ್ಲಿಸಿದ ವರದಿ
ಅವರು ನಲ್ವತ್ತು ದಿನಗಳು ಆ ದೇಶವನ್ನು ಸಂಚರಿಸಿ ನೋಡಿದರು. ಆ ಮೇಲೆ ಪಾರಾನ್ ಅರಣ್ಯದಲ್ಲಿದ್ದ ಮೋಶೆ, ಆರೋನರು ಮತ್ತು ಇಸ್ರಾಯೇಲರ ಸರ್ವಸಮೂಹದವರ ಬಳಿಗೆ ಕಾದೇಶಿಗೆ ಬಂದು ಅವರಿಗೆ ಸಮಾಚಾರವನ್ನು ತಿಳಿಸಿ ಆ ದೇಶದ ಹಣ್ಣುಗಳನ್ನು ತೋರಿಸಿದರು. ಅವರು ಮೋಶೆಗೆ, “ನೀನು ನಮ್ಮನ್ನು ಕಳುಹಿಸಿದ ದೇಶಕ್ಕೆ ಹೋದೆವು; ಅದು ನಿಜವಾಗಿಯೂ 2ಹಾಲೂ ಮತ್ತು ಜೇನೂ ಹರಿಯುವ ದೇಶವೇ; ಅಲ್ಲಿನ ಹಣ್ಣುಗಳು ಇಂಥವು. ಆದರೆ ಆ ದೇಶದ ನಿವಾಸಿಗಳು ಬಲಿಷ್ಠರು: ಅವರಿರುವ ಪಟ್ಟಣಗಳು ದೊಡ್ಡದಾಗಿಯೂ, ಕೋಟೆ ಕೊತ್ತಲುಗಳುಳ್ಳದ್ದಾಗಿಯೂ ಇದೆ. ಅದಲ್ಲದೆ ಅಲ್ಲಿ ಉನ್ನತ ಪುರುಷರನ್ನು ನೋಡಿದೆವು. ದಕ್ಷಿಣ ಸೀಮೆಯಲ್ಲಿ ಅಮಾಲೇಕ್ಯರು, ಬೆಟ್ಟದ ಸೀಮೆಯಲ್ಲಿ ಹಿತ್ತಿಯರು, ಯೆಬೂಸಿಯರು, ಅಮೋರಿಯರು ಸಮುದ್ರತೀರದಲ್ಲಿ ಮತ್ತು ಯೊರ್ದನ್ ಹೊಳೆಯ ಬಳಿಯಲ್ಲಿ ಕಾನಾನ್ಯರೂ ವಾಸವಾಗಿದ್ದಾರೆ” ಎಂದು ತಿಳಿಸಿದರು.
ಇಸ್ರಾಯೇಲರು ಮೋಶೆಗೆ ವಿರುದ್ಧವಾಗಿ ಗುಣುಗುಟ್ಟಿದರು. ಕಾಲೇಬನು ಅವರನ್ನು ಸುಮ್ಮನಿರಿಸಿ, “ನಾವು ನಿರ್ಭಯವಾಗಿ ಆ ಬೆಟ್ಟದ ಸೀಮೆಗೆ ಹತ್ತಿಹೋಗಿ ಅದನ್ನು ಸ್ವಾಧೀನಪಡಿಸಿಕೊಳ್ಳೋಣ. ಅದನ್ನು ಜಯಿಸಲು ನಾವು ಶಕ್ತರಾಗಿದ್ದೇವೆ” ಎಂದು ಹೇಳಿದನು. ಆದರೆ ಅವನ ಜೊತೆಯಲ್ಲಿ ಹೋದವರು, “ಆ ಜನರು ನಮಗಿಂತ ಬಲಿಷ್ಠರು; ಅವರನ್ನು ಜಯಿಸಲು ನಮಗೆ ಶಕ್ತಿಸಾಲುವುದಿಲ್ಲ” ಎಂದು ಹೇಳಿದರು.
ಅದಲ್ಲದೆ ಇವರು ತಾವು ಸಂಚರಿಸಿ ನೋಡಿದ ದೇಶದ ವಿಷಯವಾಗಿ ಇಸ್ರಾಯೇಲರಿಗೆ ಅಶುಭ ಸಮಾಚಾರವನ್ನು ಹೇಳುವವರಾಗಿ, “ನಾವು ಸಂಚರಿಸಿ ನೋಡಿದ ದೇಶವು ತನ್ನಲ್ಲಿ ವಾಸಿಸುವವರನ್ನು ನುಂಗಿಬಿಡುತ್ತದೆ. ಅದಲ್ಲದೆ ನಾವು ಅದರಲ್ಲಿ ನೋಡಿದ ಜನರೆಲ್ಲರೂ ಬಹಳ ಎತ್ತರವಾದವರು. ಅಲ್ಲಿ ನೆಫೀಲಿಯರನ್ನು ಅಂದರೆ ನೆಫೀಲಿಯ3 ವಂಶದವರಾದ ಉನ್ನತ ಪುರುಷರನ್ನು ನೋಡಿದೆವು. ನಾವು ಅವರ ಮುಂದೆ ಮಿಡತೆಗಳಂತೆ ಇದ್ದೇವೆ ಎಂದು ತಿಳಿದುಕೊಂಡೆವು. ಅವರಿಗೂ ನಾವು ಹಾಗೆಯೇ ಕಾಣಿಸಿದೆವು” ಎಂದು ಹೇಳಿದರು.
Source notes (3)
- Footnote ದ್ರಾಕ್ಷಿಯ ಗೊಂಚಲು.
- Footnote ಬಹಳಷ್ಟು ಫಲವತ್ತಾದ ದೇಶ.
- Footnote ನೆಫೀಲಿಯ ರಾಕ್ಷಸಾಕಾರದವರು.
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019. Copyright © 2017, 2019 Bridge Connectivity Solutions. Licensed under CC BY-SA 4.0. Source: eBible.org. Typeset from the source files; no intended changes to scripture wording. BibleKenya is not endorsed by the rights holder.
Full source notice & licence · CC BY-SA 4.0 · SourceEdition imported 2026-10-25.