Skip to content
BibleKenya

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

ಮೀಕ 3

ಇಸ್ರಾಯೇಲಿನ ಮುಖಂಡರ ಖಂಡನೆ

ನಾನು ಹೀಗೆ ಸಾರಿದೆನು;

“ಯಾಕೋಬಿನ ಮುಖಂಡರೇ, ಇಸ್ರಾಯೇಲ್ ವಂಶದ ಅಧಿಪತಿಗಳೇ ಕಿವಿಗೊಟ್ಟು ಕೇಳಿರಿ.

ನ್ಯಾಯ ನೀತಿ ಪಾಲನೆ ನಿಮ್ಮ ಕರ್ತವ್ಯವಲ್ಲವೇ? ನಿಮ್ಮ ಧರ್ಮವಲ್ಲವೇ?

ಆಹಾ! ಇವರು ಒಳ್ಳೆಯದನ್ನು ದ್ವೇಷಿಸಿ ಕೆಟ್ಟದ್ದನ್ನು ಪ್ರೀತಿಸುತ್ತಾರೆ.

ಜನರ ಮೈಮೇಲಿಂದ ಚರ್ಮವನ್ನು ಸುಲಿಯುತ್ತಾರೆ.

ಅವರ ಎಲುಬುಗಳಿಂದ ಮಾಂಸವನ್ನು ಕಿತ್ತು ಬಿಡುತ್ತಾರೆ.

ನನ್ನ ಪ್ರಜೆಯ ಮಾಂಸವನ್ನು ತಿನ್ನುತ್ತಾರೆ.

ಅವರ ಚರ್ಮವನ್ನು ಸುಲಿದುಹಾಕಿ ಅವರ ಎಲುಬುಗಳನ್ನು ಮುರಿಯುತ್ತಾರೆ.

ಹಂಡೆಯಲ್ಲಿನ ತುಂಡುಗಳಂತೆ, ಕೊಪ್ಪರಿಗೆಯಲ್ಲಿನ 1

ಮಾಂಸದ ಹಾಗೆ ಅವರನ್ನು ಚೂರುಚೂರಾಗಿ ಕತ್ತರಿಸುತ್ತಾರೆ.

ಇಷ್ಟೆಲ್ಲಾ ನಡೆಸಿ ಇವರು ಯೆಹೋವನಿಗೆ ಮೊರೆಯಿಡಲು ಆತನು ಇವರಿಗೆ ಉತ್ತರಕೊಡನು.

ಇವರ ನಡತೆಯ ದುಷ್ಕೃತ್ಯಗಳಿಗೆ ತಕ್ಕ ಹಾಗೆ ಆ ಕಾಲದಲ್ಲಿ ಇವರಿಗೆ ವಿಮುಖನಾಗುವೆನು.”

ನನ್ನ ಜನರನ್ನು ಸನ್ಮಾರ್ಗದಿಂದ ತಪ್ಪಿಸುವವರೂ,

ತಿನ್ನುವುದಕ್ಕೆ ಕೊಡುವಂಥವರಿಗೆ, “ಸಮಾಧಾನವಿರುವುದು” ಎಂದು ಪ್ರಕಟಿಸುವರು

ಮತ್ತು ತಮ್ಮ ಬಾಯಿಗೆ ರುಚಿಯಾದ ತಿಂಡಿಯನ್ನು ಕೊಡದವನ ಮೇಲೆ ಯುದ್ಧವನ್ನು ನಿರ್ಧರಿಸುವ ಪ್ರವಾದಿಗಳ ವಿಷಯವಾಗಿ ಯೆಹೋವನು ಇಂತೆನ್ನುತ್ತಾನೆ,

“ನೀವು ಇಂಥವರಾದ ಕಾರಣ ನಿಮಗೆ ರಾತ್ರಿಯಾಗುವುದು,

ದಿವ್ಯದರ್ಶನವಾಗದು, ನಿಮಗೆ ಕತ್ತಲು ಕವಿಯುವುದು ಮತ್ತು ಕಣಿಹೇಳಲಾಗದು.

ಸೂರ್ಯನು ಪ್ರವಾದಿಗಳಿಗೆ ಮುಣುಗುವನು, ಹಗಲು ಅವರಿಗೆ ಕಾರ್ಗತ್ತಲಾಗುವುದು.

ದಿವ್ಯದರ್ಶಿಗಳು ಆಶಾಭಂಗಪಡುವರು,

ಕಣಿಯವರು ನಾಚಿಕೊಳ್ಳುವರು.

ಎಲ್ಲರೂ ಬಟ್ಟೆಯಿಂದ ಬಾಯಿಮುಚ್ಚಿಕೊಳ್ಳುವರು.

ಅವರಿಗೆ ದೈವೋತ್ತರವೇ ದೊರೆಯುವುದಿಲ್ಲ” ಎಂದು ನುಡಿಯುತ್ತಾನೆ.

ನಾನಾದರೋ ಯೆಹೋವನ ಆತ್ಮ ಪ್ರೇರಣೆಯಿಂದ,

ಬಲ ಪರಾಕ್ರಮ ಮತ್ತು ನ್ಯಾಯಭರಿತನಾಗಿ ಯಾಕೋಬಿಗೆ ಅದರ ದ್ರೋಹವನ್ನು,

ಇಸ್ರಾಯೇಲಿಗೆ ಅದರ ಪಾಪವನ್ನು ಸಾರಲು ಶಕ್ತನಾಗಿದ್ದೇನೆ.

ನ್ಯಾಯಕ್ಕೆ ಅಸಹ್ಯಪಟ್ಟು,

ನೆಟ್ಟಗಿರುವುದನ್ನು ಸೊಟ್ಟಗೆ ಮಾಡುವ ಯಾಕೋಬ ವಂಶದ ಮುಖಂಡರೇ,

ಇಸ್ರಾಯೇಲ್ ಮನೆತನದ ಅಧಿಪತಿಗಳೇ,

ಚೀಯೋನನ್ನು ನರಹತ್ಯದಿಂದಲೂ,

ಯೆರೂಸಲೇಮನ್ನು ಅನ್ಯಾಯದಿಂದಲೂ ಕಟ್ಟುವವರೇ,

ಇದನ್ನು ಕಿವಿಗೊಟ್ಟು ಕೇಳಿರಿ, ಕೇಳಿರಿ.

ಮುಖಂಡರು ಲಂಚಕ್ಕೆ ನ್ಯಾಯತೀರಿಸುತ್ತಾರೆ.

ಯಾಜಕರು ಸಂಬಳಕ್ಕಾಗಿ ಉಪದೇಶಿಸುತ್ತಾರೆ.

ಪ್ರವಾದಿಗಳು ಹಣಕ್ಕೋಸ್ಕರ ಕಣಿಹೇಳುತ್ತಾರೆ.

ಆದರೂ ಯೆಹೋವನ ಮೇಲೆ ಭಾರ ಹಾಕಿ,

“ಯೆಹೋವನು ನಮ್ಮ ಮಧ್ಯದಲ್ಲಿ ಇದ್ದಾನಲ್ಲಾ,

ನಮಗೆ ಯಾವ ಕೇಡೂ ಸಂಭವಿಸದು” ಅಂದುಕೊಳ್ಳುತ್ತಾರೆ.

ಹೀಗಿರಲು ನಿಮ್ಮ ದೆಸೆಯಿಂದ ಚೀಯೋನ್ ಪಟ್ಟಣವು ಹೊಲದಂತೆ ಉಳಲ್ಪಡುವುದು,

ಯೆರೂಸಲೇಮು ಹಾಳುದಿಬ್ಬಗಳಾಗುವುದು.

ಯೆಹೋವನ ಆಲಯದ ಪರ್ವತವು ಕಾಡುಗುಡ್ಡಗಳಂತಾಗುವುದು.

Source notes (1)
  1. Footnote ಕೊಪ್ಪರಿಗೆಯಲ್ಲಿನ ದೊಡ್ಡ ಕಡಾಯಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019. Copyright © 2017, 2019 Bridge Connectivity Solutions. Licensed under CC BY-SA 4.0. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.