Skip to content
BibleKenya

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

ಯೋಬ 26

ಯೋಬನ ಒಂಭತ್ತನೆಯ ಸಂಭಾಷಣೆ: ಬಿಲ್ದನಿಗೆ ನೀಡಿದ ಪ್ರತ್ಯುತ್ತರ

ಆಗ ಯೋಬನು ಹೀಗೆ ಉತ್ತರಕೊಟ್ಟನು,

“ನಿನ್ನಿಂದ ಅಶಕ್ತನಿಗೆ ಎಷ್ಟೋ ಸಹಾಯವಾಯಿತು!

ಬಲಹೀನವಾದ ಕೈಗೆ ಮಹಾ ಸಹಾಯ ದೊರಕಿತು.

ಬುದ್ಧಿಯಿಲ್ಲದವನಿಗೆ ನೀನು ಹೇಳಿದ ಬುದ್ಧಿಯನ್ನು ಎಷ್ಟೆಂದು ಹೇಳಲಿ!

ಸುಜ್ಞಾನವನ್ನು ಧಾರಾಳವಾಗಿ ಉಪದೇಶಿಸಿದ್ದಿ!

ಯಾರಿಗೆ ಮಾತುಗಳನ್ನು ಕಲಿಸಿದ್ದಿ?

ನಿನ್ನಿಂದ ಹೊರಟ ನುಡಿಗಳನ್ನು ಯಾವ ಆತ್ಮವು ಪ್ರೇರೇಪಿಸಿತು?”

ಬಿಲ್ದದನ ಪ್ರತ್ಯುತ್ತರ

ಅದಕ್ಕೆ ಬಿಲ್ದದನು, “ಜಲಚರಗಳಿಂದ ತುಂಬಿರುವ ಸಾಗರದ ಕೆಳಗಿನ ಲೋಕದಲ್ಲಿ,

ಪ್ರೇತಗಳು ಆತನ ಭಯದಿಂದ ಯಾತನೆಪಡುವವು.

ಪಾತಾಳವು ದೇವರ ದೃಷ್ಟಿಗೆ ತೆರೆದಿದೆ,

ನಾಶಲೋಕವು ಮರೆಯಾಗಿಲ್ಲ.

ಆತನು ಶೂನ್ಯದ ಮೇಲೆ ಆಕಾಶದ ಉತ್ತರ ದಿಕ್ಕನ್ನು ವಿಸ್ತರಿಸಿ,

ಭೂಲೋಕವನ್ನು ಯಾವ ಆಧಾರವೂ ಇಲ್ಲದೆ ತೂಗು ಹಾಕಿದ್ದಾನೆ.

ತನ್ನ ಮೇಘಗಳೊಳಗೆ ನೀರನ್ನು ತುಂಬಿ ಕಟ್ಟುವನು,

ಯಾವ ಮೋಡವೂ ಅದರ ಭಾರದಿಂದ ಒಡೆದು ಹೋಗದು.

ತನ್ನ ಸಿಂಹಾಸನಕ್ಕೆ ಮರೆಯಾಗಿ,

ಮುಂಭಾಗದಲ್ಲಿ ಮೋಡವನ್ನು ಕವಿಸಿರುವನು.

ಬೆಳಕು ಕತ್ತಲುಗಳ ಸಂಧಿಸ್ಥಾನದಲ್ಲಿ ಸಮುದ್ರದ ಮೇಲೆ,

ಸುತ್ತಲೂ ಮೇರೆಯನ್ನೂ ಹಾಕಿದ್ದಾನೆ.

ಆಕಾಶಮಂಡಲದ ಸ್ತಂಭಗಳು,

ಆತನ ಗದರಿಕೆಯಿಂದ ಬೆರಗಾಗಿ ಕದಲುವವು.

ಆತನು ತನ್ನ ವಿವೇಕ ಶಕ್ತಿಯಿಂದ ಘಟಸರ್ಪವನ್ನು ಹೊಡೆದುಹಾಕಿದನು;

ತನ್ನ ಪರಾಕ್ರಮದಿಂದ ಸಾಗರವನ್ನು ಶಾಂತಗೊಳಿಸಿದನು.

ಆತನ ಶ್ವಾಸವು ಆಕಾಶಮಂಡಲವನ್ನು ಶುಭ್ರಮಾಡುವುದು,

ಆತನ ಹಸ್ತವು ವೇಗವಾಗಿ ಓಡುವ ಸರ್ಪವನ್ನು ಇರಿಯುವುದು.

ಆಹಾ, ಈ ಅದ್ಭುತಗಳು ಆತನ ಮಾರ್ಗಗಳ ಕಟ್ಟಕಡೆಯಾಗಿವೆ.

ಆತನ ವಿಷಯವಾಗಿ ಸೂಕ್ಷ್ಮ ಶಬ್ದವನ್ನು ಮಾತ್ರ ಕೇಳಿದ್ದೇವೆ,

ಆತನ ಪ್ರಾಬಲ್ಯದ ಘನಗರ್ಜನೆಯನ್ನು ಯಾರು ಗ್ರಹಿಸಬಲ್ಲರು?”

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019. Copyright © 2017, 2019 Bridge Connectivity Solutions. Licensed under CC BY-SA 4.0. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.