ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019
ಯೆರೆ 32
ಯೆರೆಮೀಯನು ಹೊಲವನ್ನು ಕೊಂಡುಕೊಂಡದ್ದು
ಯೆಹೂದದ ಅರಸನಾದ ಚಿದ್ಕೀಯನ ಆಳ್ವಿಕೆಯ ಹತ್ತನೆಯ ವರ್ಷದಲ್ಲಿ, ಅಂದರೆ ನೆಬೂಕದ್ನೆಚ್ಚರನ ಆಳ್ವಿಕೆಯ ಹದಿನೆಂಟನೆಯ ವರ್ಷದಲ್ಲಿ, ಯೆಹೋವನು ಯೆರೆಮೀಯನಿಗೆ ತನ್ನ ವಾಕ್ಯವನ್ನು ದಯಪಾಲಿಸಿದನು. ಆ ಕಾಲದಲ್ಲಿ ಬಾಬೆಲಿನ ಅರಸನ ಸೈನ್ಯವು ಯೆರೂಸಲೇಮನ್ನು ಮುತ್ತಿತು ಮತ್ತು ಪ್ರವಾದಿಯಾದ ಯೆರೆಮೀಯನು ಯೆಹೂದದ ರಾಜನ ಮನೆಗೆ ಸೇರಿದ ಕಾರಾಗೃಹದ ಅಂಗಳದಲ್ಲಿ ಸೆರೆಯಾಗಿದ್ದನು. ಯೆಹೂದದ ಅರಸನಾದ ಚಿದ್ಕೀಯನು ಯೆರೆಮೀಯನಿಗೆ, “ನೀನು ಪ್ರವಾದನೆ ಮಾಡುತ್ತಾ, ‘ಯೆಹೋವನು ಇಂತೆನ್ನುತ್ತಾನೆ, ನಾನು ಈ ಪಟ್ಟಣವನ್ನು ಬಾಬೆಲಿನ ಅರಸನ ಕೈಗೆ ಸಿಕ್ಕಿಸುವೆನು, ಅವನು ಇದನ್ನು ಆಕ್ರಮಿಸುವನು. ಮತ್ತು ಯೆಹೂದದ ಅರಸನಾದ ಚಿದ್ಕೀಯನು ಕಸ್ದೀಯರ ಕೈಯಿಂದ ತಪ್ಪಿಸಿಕೊಳ್ಳಲಾರದೆ ಬಾಬೆಲಿನ ಅರಸನ ವಶವಾಗುವುದು ಖಂಡಿತ, ಅವನಿಗೆ ಸಾಕ್ಷಾತ್ತಾಗಿ ನಿಂತು ಎದುರೆದುರಾಗಿ ಮಾತನಾಡುವನು. ಆ ಅರಸನು ಚಿದ್ಕೀಯನನ್ನು ಬಾಬಿಲೋನಿಗೆ ತೆಗೆದುಕೊಂಡು ಹೋಗುವನು, ನಾನು ಅವನಿಗೆ ದಯೆತೋರಿಸುವ ತನಕ ಅಲ್ಲೇ ಇರುವನು. ನೀವು ಕಸ್ದೀಯರೊಡನೆ ಯುದ್ಧಮಾಡಿದರೂ ನಿಮಗೆ ಜಯವಾಗದು; ಇದು ಯೆಹೋವನ ನುಡಿ ಎಂಬುದಾಗಿ ಏಕೆ ನುಡಿಯುತ್ತೀ?’” ಎಂದು ಹೇಳಿ ಅವನನ್ನು ಸೆರೆಯಲ್ಲಿ ಹಾಕಿಸಿದ್ದನು.
ಅದಕ್ಕೆ ಯೆರೆಮೀಯನು, “ಯೆಹೋವನು ನನಗೆ ಈ ವಾಕ್ಯವನ್ನು ದಯಪಾಲಿಸಿದನು, ಇಗೋ, ನಿನ್ನ ಚಿಕ್ಕಪ್ಪನಾದ ಶಲ್ಲೂಮನ ಮಗನಾಗಿರುವ ಹನಮೇಲನು ನಿನ್ನ ಬಳಿಗೆ ಬಂದು ‘ಅನಾತೋತಿನಲ್ಲಿರುವ ನನ್ನ ಹೊಲವನ್ನು ಕೊಂಡುಕೋ; ಪರಾಧೀನವಾಗದಂತೆ ಅದನ್ನು ಕೊಂಡುಕೊಳ್ಳುವ ಹಕ್ಕು ನಿನ್ನದೇ ಎಂದು ಹೇಳುವನು’” ಎಂದು ತಿಳಿಸಿದನು. ಬಳಿಕ ಯೆಹೋವನ ವಾಕ್ಯಾನುಸಾರ ನನ್ನ ಚಿಕ್ಕಪ್ಪನ ಮಗನಾದ ಹನಮೇಲನು ಕಾರಾಗೃಹದ ಅಂಗಳದಲ್ಲಿ ನನ್ನ ಬಳಿಗೆ ಬಂದು, “ಬೆನ್ಯಾಮೀನ್ ಸೀಮೆಯ ಅನಾತೋತಿನಲ್ಲಿರುವ ನನ್ನ ಹೊಲವನ್ನು ದಯಮಾಡಿ ಕೊಂಡುಕೋ, ಅದಕ್ಕೆ ನೀನೇ ಬಾಧ್ಯನು. ಪರಾಧೀನವಾಗದಂತೆ ಕೊಂಡುಕೊಳ್ಳುವ ಹಕ್ಕೂ ನಿನ್ನದೇ; ನಿನಗಾಗಿಯೇ ಕೊಂಡುಕೋ” ಎಂದು ಹೇಳಿದನು. ಕೂಡಲೆ ಇದು ಯೆಹೋವನ ನುಡಿ ಎಂದು ನನಗೆ ಗೊತ್ತಾಯಿತು. ಆಗ ನನ್ನ ಚಿಕ್ಕಪ್ಪನ ಮಗನಾದ ಹನಮೇಲನಿಂದ ಅನಾತೋತಿನಲ್ಲಿರುವ ಹೊಲವನ್ನು ನಾನು ಕೊಂಡುಕೊಂಡು ಅದರ ಕ್ರಯವಾಗಿ ಹದಿನೇಳು ತೊಲಾ ಬೆಳ್ಳಿಯನ್ನು1 ತೂಕಮಾಡಿ ಅವನಿಗೆ ಕೊಟ್ಟೆನು. ಪತ್ರಕ್ಕೆ ಸಹಿ ಹಾಕಿ ಮುಚ್ಚಿ ಆ ಮುಚ್ಚಳಕ್ಕೆ ಸಾಕ್ಷಿಗಳನ್ನು ಹಾಕಿಸಿ, ತಕ್ಕಡಿಯಲ್ಲಿ ಆ ಬೆಳ್ಳಿಯನ್ನು ತೂಗಿ ಅವನಿಗೆ ಕೊಟ್ಟೆನು. ಆ ಮೇಲೆ ನಾನು ಕ್ರಯಪತ್ರವನ್ನು ಅಂದರೆ ನಿಯಮ ಮತ್ತು ಷರತ್ತುಗಳಿಂದ ಮುಚ್ಚಿದ್ದ ಪತ್ರವನ್ನೂ ಹಾಗು ಮುಚ್ಚಳದ ಪತ್ರವನ್ನೂ ತೆಗೆದುಕೊಂಡೆನು. ಅದನ್ನು ನನ್ನ ಚಿಕ್ಕಪ್ಪನ ಮಗನಾದ ಹನಮೇಲನ ಮುಂದೆ ಕ್ರಯಪತ್ರಕ್ಕೆ ಸಹಿಮಾಡಿದ ಸಾಕ್ಷಿಗಳ ಸಮಕ್ಷಮದಲ್ಲಿ, ಕಾರಾಗೃಹದ ಅಂಗಳದಲ್ಲಿ ಕುಳಿತಿದ್ದ ಎಲ್ಲಾ ಯೆಹೂದ್ಯರ ಎದುರಿನಲ್ಲಿ ಆ ಕ್ರಯಪತ್ರವನ್ನು ಮಹ್ಸೇಮನ ಮೊಮ್ಮಗನೂ ನೇರೀಯನ ಮಗನೂ ಆದ ಬಾರೂಕನ ಕೈಗೆ ಕೊಟ್ಟೆನು. ಅವರೆಲ್ಲರ ಮುಂದೆ ನಾನು ಬಾರೂಕನಿಗೆ, “ಇಸ್ರಾಯೇಲರ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ, ‘ನೀನು ಈ ಕ್ರಯಪತ್ರಗಳನ್ನು, ಅಂದರೆ ಮುಚ್ಚಿದ ಪತ್ರವನ್ನೂ ಮತ್ತು ಮುಚ್ಚಳಿಕೆಯ ಪತ್ರವನ್ನೂ ತೆಗೆದುಕೊಂಡು ಬಹು ದಿನ ಇರುವ ಹಾಗೆ ಅದನ್ನು ಮಡಿಕೆಯಲ್ಲಿ ಬಚ್ಚಿಡು. ಈ ದೇಶದಲ್ಲಿ ಜನರು ಮನೆ, ಹೊಲ ಮತ್ತು ದ್ರಾಕ್ಷಿತೋಟಗಳನ್ನು ಪುನಃ ಕೊಂಡುಕೊಳ್ಳುವರು, ಕೊಡುವರು. ಇದು ಇಸ್ರಾಯೇಲರ ದೇವರೂ ಸೇನಾಧೀಶ್ವರನೂ ಆದ ಯೆಹೋವನ ನುಡಿ’” ಎಂದು ಖಂಡಿತವಾಗಿ ಹೇಳಿದೆನು.
ಯೆರೆಮೀಯನ ವಿಜ್ಞಾಪನೆ
ಕ್ರಯಪತ್ರವನ್ನು ನೇರೀಯನ ಮಗನಾದ ಬಾರೂಕನ ಕೈಗೆ ಕೊಟ್ಟ ಮೇಲೆ ನಾನು ಯೆಹೋವನಿಗೆ, “ಆಹಾ! ಕರ್ತನಾದ ಯೆಹೋವನೇ! ನೀನು ಭುಜವನ್ನೆತ್ತಿ ನಿನ್ನ ಮಹಾ ಶಕ್ತಿಯಿಂದ ಭೂಮ್ಯಾಕಾಶಗಳನ್ನು ಸೃಷ್ಟಿಸಿದ್ದಿ; ಯಾವ ಕಾರ್ಯವೂ ನಿನಗೆ ಅಸಾಧ್ಯವಲ್ಲ. ನೀನು ಸಾವಿರಾರು ತಲೆಗಳವರೆಗೆ ದಯೆತೋರಿಸುವವನೂ, ತಂದೆಗಳ ದೋಷಫಲವನ್ನು ಅವರ ತರುವಾಯ ಮಕ್ಕಳ ಮಡಲಿಗೆ ಹಾಕುವವನೂ ಆಗಿದ್ದೀ. ನೀನು ಮಹಾ ಪರಾಕ್ರಮಿಯಾದ ದೇವರು; ಸೇನಾಧೀಶ್ವರನಾದ ಯೆಹೋವನೆಂಬುದು ನಿನ್ನ ಹೆಸರಾಗಿದೆ. ನೀನು ಆಲೋಚನೆಯಲ್ಲಿ ಶ್ರೇಷ್ಠನು, ಕಾರ್ಯದಲ್ಲಿ ಸಮರ್ಥನು; ನೀನು ಪ್ರತಿಯೊಬ್ಬನಿಗೂ ಅವನವನ ಕರ್ಮಕ್ಕೂ ನಡತೆಗೂ ತಕ್ಕ ಪ್ರತಿಫಲವನ್ನು ಕೊಡಬೇಕೆಂದು ನರಜನ್ಮದವರ ಮಾರ್ಗಗಳನ್ನೆಲ್ಲಾ ಕಣ್ಣಾರೆ ನೋಡುತ್ತೀ. ನೀನು ಐಗುಪ್ತದೇಶದಲ್ಲಿ ಮಹತ್ಕಾರ್ಯಗಳನ್ನೂ, ಅದ್ಭುತಗಳನ್ನೂ ನಡೆಸಿ ಈ ದಿನದವರೆಗೆ ಇಸ್ರಾಯೇಲರಲ್ಲಿಯೂ ಮತ್ತು ಇತರ ಜನರಲ್ಲಿಯೂ ಅವುಗಳನ್ನು ಮಾಡುತ್ತಾ ಬಂದು ಹೆಸರನ್ನು ಪಡೆದುಕೊಂಡಿದ್ದಿ. ಅದು ಈಗಲೂ ಸ್ಥಿರವಾಗಿದೆ; ನೀನು ಮಹತ್ಕಾರ್ಯಗಳನ್ನೂ, ಅದ್ಭುತಗಳನ್ನೂ ನಡೆಸಿ, ಭುಜಪರಾಕ್ರಮವನ್ನು ತೋರಿಸಿ, ಶಿಕ್ಷಾಹಸ್ತವನ್ನು ಎತ್ತಿ, ಮಹಾ ಭೀತಿಯನ್ನುಂಟುಮಾಡಿ ನಿನ್ನ ಜನರಾದ ಇಸ್ರಾಯೇಲರನ್ನು ಐಗುಪ್ತದೇಶದೊಳಗಿಂದ ಬರಮಾಡಿದಿ. ಅವರ ಪೂರ್ವಿಕರಿಗೆ ವಾಗ್ದಾನಮಾಡಿದ ಪ್ರಕಾರ ಹಾಲೂ ಮತ್ತು ಜೇನೂ ಹರಿಯುವ ಈ ದೇಶವನ್ನು ಅವರಿಗೆ ಅನುಗ್ರಹಿಸಿದಿ. ಅವರು ಅದನ್ನು ಸೇರಿ ಅನುಭವಿಸಿದರೂ ನಿನ್ನ ಮಾತಿಗೆ ಕಿವಿಗೊಡಲಿಲ್ಲ, ನಿನ್ನ ಧರ್ಮಾನುಸಾರ ನಡೆಯಲಿಲ್ಲ; ನೀನು ಆಜ್ಞಾಪಿಸಿದವುಗಳಲ್ಲೆಲ್ಲಾ ಒಂದನ್ನೂ ಮಾಡಲಿಲ್ಲ. ಆದಕಾರಣ ನೀನು ಈ ಕೇಡನ್ನೆಲ್ಲಾ ಅವರ ಮೇಲೆ ಬರಮಾಡಿದ್ದಿ. ಇಗೋ, ಮುತ್ತಿಗೆಯ ದಿಬ್ಬಗಳು ಪಟ್ಟಣವನ್ನು ಆಕ್ರಮಿಸುವುದಕ್ಕೆ ಬಂದಿದ್ದಾರೆ; ಪಟ್ಟಣವು ಖಡ್ಗ, ಕ್ಷಾಮ ಮತ್ತು ವ್ಯಾಧಿಗಳಿಂದ ಕ್ಷೀಣವಾಗಿ ವಿರೋಧಿಗಳಾದ ಕಸ್ದೀಯರ ಕೈಗೆ ಸಿಕ್ಕಿದೆ; ನೀನು ನುಡಿದದ್ದು ನೆರವೇರಿದೆ, ಇಗೋ, ನೋಡುತ್ತಿದ್ದಿ. ಕರ್ತನಾದ ಯೆಹೋವನೇ, ನೀನು ನನಗೆ, ‘ಸಾಕ್ಷಿಗಳನ್ನು ಕರೆಯಿಸಿ ಕ್ರಯಕೊಟ್ಟು ಹೊಲವನ್ನು ಕೊಂಡುಕೋ’ ಎಂದು ಅಪ್ಪಣೆಕೊಟ್ಟೆ; ನೋಡು, ಪಟ್ಟಣವು ಕಸ್ದೀಯರ ಕೈಸೇರಿದೆಯಲ್ಲಾ” ಎಂದು ವಿಜ್ಞಾಪನೆ ಮಾಡಿದೆನು.
ಯೆಹೋವನ ಉತ್ತರ
ಆಗ ಯೆಹೋವನು ಯೆರೆಮೀಯನಿಗೆ ಈ ಮಾತನ್ನು ದಯಪಾಲಿಸಿದನು, “ಇಗೋ, ನಾನು ಯೆಹೋವನು, ನರಪ್ರಾಣಿಗೆಲ್ಲಾ ದೇವರು; ನನಗೆ ಅಸಾಧ್ಯವಾದದ್ದುಂಟೋ? ಆದಕಾರಣ ಯೆಹೋವನು ಇಂತೆನ್ನುತ್ತಾನೆ, ಇಗೋ, ನಾನು ಈ ಪಟ್ಟಣವನ್ನು ಕಸ್ದೀಯರ ವಶಕ್ಕೆ ಅಂದರೆ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ಕೈಗೆ ಸಿಕ್ಕಿಸುವೆನು, ಅವನು ಇದನ್ನು ಆಕ್ರಮಿಸುವನು. ಈ ಪಟ್ಟಣಕ್ಕೆ ಪ್ರತಿಭಟಿಸುವ ಕಸ್ದೀಯರು ಇದರೊಳಗೆ ನುಗ್ಗಿ ಬೆಂಕಿಹಚ್ಚಿ ಯಾವ ಮನೆಗಳ ಮಾಳಿಗೆಗಳಲ್ಲಿ ನನ್ನ ಜನರು ಬಾಳನಿಗೆ ಧೂಪಹಾಕಿ, ಅನ್ಯದೇವತೆಗಳಿಗೆ ಪಾನವನ್ನು ನೈವೇದ್ಯವಾಗಿ ಅರ್ಪಿಸಿ ನನ್ನನ್ನು ಕೆಣಕಿದ್ದಾರೋ, ಆ ಮನೆಗಳಿರುವ ಈ ಪಟ್ಟಣವನ್ನು ಸುಟ್ಟುಬಿಡುವರು. ಇಸ್ರಾಯೇಲ್ ವಂಶವೂ ಮತ್ತು ಯೆಹೂದ ವಂಶವೂ ಚಿಕ್ಕಂದಿನಿಂದ ನನ್ನ ಚಿತ್ತಕ್ಕೆ ವಿರುದ್ಧವಾಗಿಯೇ ನಡೆಯುತ್ತಾ ಬಂದಿವೆ. ಹೌದು, ಇಸ್ರಾಯೇಲ್ ವಂಶದವರು ತಮ್ಮ ಕೈಕೆಲಸದ ಬೊಂಬೆಗಳಿಂದ ನನ್ನನ್ನು ರೇಗಿಸುತ್ತಲೇ ಬಂದಿದ್ದಾರೆ, ಇದು ಯೆಹೋವನ ನುಡಿ. ಈ ಪಟ್ಟಣವು ಕಟ್ಟಿದಂದಿನಿಂದ ಇಂದಿನವರೆಗೂ ನನ್ನ ಕೋಪರೋಷಗಳಿಗೆ ಆಸ್ಪದವಾಗಿದೆ. ಅರಸರು, ಪ್ರಧಾನರು, ಯಾಜಕರು, ಪ್ರವಾದಿಗಳು, ಯೆಹೂದದ ಪ್ರಜೆಗಳು, ಯೆರೂಸಲೇಮಿನ ನಿವಾಸಿಗಳು, ಅಂತು ಎಲ್ಲಾ ಇಸ್ರಾಯೇಲರೂ ಮತ್ತು ಯೆಹೂದ್ಯರೂ ನನ್ನನ್ನು ರೇಗಿಸತಕ್ಕ ಅಧರ್ಮವನ್ನು ತುಂಬಾ ಮಾಡಿದ್ದರಿಂದ ನಾನು ಈ ಪಟ್ಟಣವನ್ನು ನನ್ನ ಸನ್ನಿಧಿಯಿಂದ ತೊಲಗಿಸಬೇಕಾಗಿ ಬಂತು. ಅವರು ನನಗೆ ಮುಖಕೊಡದೆ ಬೆನ್ನುಮಾಡಿದ್ದಾರೆ; ನಾನು ಎಡೆಬಿಡದೆ ಅವರಿಗೆ ಬೋಧಿಸುತ್ತಾ ಬಂದರೂ ಅವರು ಉಪದೇಶವನ್ನು ಹೊಂದಲಿಲ್ಲ ಮತ್ತು ನನಗೆ ಕಿವಿಗೊಡಲೇ ಇಲ್ಲ. ನನ್ನ ಹೆಸರಿನಿಂದ ಖ್ಯಾತಿಗೊಂಡ ಆಲಯದಲ್ಲಿ ತಮ್ಮ ಅಸಹ್ಯ ವಸ್ತುಗಳನ್ನು ಇಟ್ಟು ಹೊಲೆ ಮಾಡಿದ್ದಾರೆ. ತಮ್ಮ ಗಂಡು ಹೆಣ್ಣು ಮಕ್ಕಳನ್ನು ಮೋಲೆಕ್ ದೇವತೆಗಾಗಿ ಆಹುತಿ ಕೊಡುವುದಕ್ಕೆ ಬೆನ್ ಹಿನ್ನೋಮ್ ತಗ್ಗಿನಲ್ಲಿನ ಬಾಳನ ಪೂಜಾಸ್ಥಳಗಳನ್ನು ಕಟ್ಟಿ, ಯೆಹೂದವನ್ನು ಪಾಪಕ್ಕೆ ಸಿಕ್ಕಿಸಿದ್ದಾರೆ; ನಾನು ಇಂಥ ಅಸಹ್ಯಕಾರ್ಯವನ್ನು ವಿಧಿಸಲಿಲ್ಲ, ಅದರ ಸಂಕಲ್ಪವೂ ನನ್ನ ಮನಸ್ಸಿನಲ್ಲಿ ಹುಟ್ಟಲಿಲ್ಲ” ಎಂಬುದೇ.
ಹೀಗಿರಲು “ಖಡ್ಗ, ಕ್ಷಾಮ ಮತ್ತು ವ್ಯಾಧಿಗಳಿಂದ ಕ್ಷೀಣವಾಗಿ ಬಾಬೆಲಿನ ಅರಸನ ಕೈವಶವಾಗಿದೆ ಎಂದು ನೀವು ಹೇಳುವ ಈ ಪಟ್ಟಣದ ವಿಷಯವಾಗಿ ಇಸ್ರಾಯೇಲರ ದೇವರಾದ ಯೆಹೋವನು ಈಗ ಇಂತೆನ್ನುತ್ತಾನೆ, ‘ಇಗೋ, ನಾನು ಕೋಪ, ರೋಷ, ಮಹಾಕ್ರೋಧಭರಿತನಾಗಿ ಈ ಜನರನ್ನು ಯಾವ ದೇಶಗಳಿಗೆ ಅಟ್ಟಿದೆನೋ ಆ ಸಕಲ ದೇಶಗಳಿಂದ ಈ ಸ್ಥಳಕ್ಕೆ ಪುನಃ ಕರೆದುಕೊಂಡು ಬಂದು ನಿರ್ಭಯವಾಗಿ ವಾಸಿಸುವಂತೆ ಮಾಡುವೆನು. ಅವರು ನನಗೆ ಜನರಾಗಿರುವರು, ನಾನು ಅವರಿಗೆ ದೇವರಾಗಿರುವೆನು. ನಾನು ಅವರ ಹಿತವನ್ನೂ, ಅವರ ತರುವಾಯ ಅವರ ಮಕ್ಕಳ ಹಿತವನ್ನೂ ಬಯಸುತ್ತಾ ಅವರು ಸದಾ ನನ್ನಲ್ಲಿ ಭಯಭಕ್ತಿಯುಳ್ಳವರಾಗಿರುವಂತೆ ಎಲ್ಲರಿಗೂ ಒಂದೇ ಮನಸ್ಸನ್ನೂ, ಒಂದೇ ಮಾರ್ಗವನ್ನೂ ಅನುಗ್ರಹಿಸುವೆನು. ನಾನು ನಿಮಗೆ ಹಿತ ಮಾಡುವುದನ್ನು ಬಿಟ್ಟು ವಿಮುಖನಾಗೆನು’ ಎಂಬುವ ಶಾಶ್ವತವಾದ ಒಡಂಬಡಿಕೆಯನ್ನು ಅವರೊಂದಿಗೆ ಮಾಡಿಕೊಳ್ಳುವೆನು; ಅವರು ನನ್ನಿಂದಗಲದಂತೆ ಅವರ ಹೃದಯದೊಳಗೆ ನನ್ನ ಮೇಲಣ ಭಯಭಕ್ತಿಯನ್ನು ನೆಲೆಗೊಳಿಸುವೆನು. ನಾನು ಅವರ ಹಿತವನ್ನು ಬಯಸುತ್ತಾ ಅವರಲ್ಲಿ ಆನಂದಿಸುವೆನು, ನಿಶ್ಚಯವಾಗಿ ಅವರನ್ನು ಈ ದೇಶದಲ್ಲಿ ನನ್ನ ಪೂರ್ಣವಾದ ಹೃದಯದಿಂದಲೂ, ಮನಸ್ಸಿನಿಂದಲೂ ಸ್ಥಾಪಿಸುವೆನು.” ಯೆಹೋವನು ಇಂತೆನ್ನುತ್ತಾನೆ, “ನಾನು ಈ ಜನರಿಗೆ ಇಷ್ಟು ದೊಡ್ಡ ಕೇಡನ್ನು ಬರಮಾಡಿದಂತೆ ವಾಗ್ದಾನ ಮಾಡಿದ ಎಲ್ಲಾ ಮೇಲನ್ನೂ ಬರಮಾಡುವೆನು. ಜನ ಮತ್ತು ಪಶುಗಳಿಲ್ಲದೆ ಹಾಳಾಗಿ ಕಸ್ದೀಯರ ಕೈವಶವಾಗಿದೆ ಎಂದು ನೀವು ಹೇಳುವ ಈ ದೇಶದಲ್ಲಿ ಹೊಲಗದ್ದೆಗಳನ್ನು ಕೊಂಡುಕೊಳ್ಳುವರು, ಕೊಡುವರು. ಬೆನ್ಯಾಮೀನ್ ಸೀಮೆ, ಯೆರೂಸಲೇಮಿನ ಸುತ್ತಣ ಪ್ರದೇಶಗಳು, ಯೆಹೂದದ ಊರುಗಳು, ಬೆಟ್ಟದ ಊರುಗಳು, ಇಳಕಲಿನ ಊರುಗಳು, ದಕ್ಷಿಣಪ್ರಾಂತ್ಯದ ಊರುಗಳು, ಈ ಎಲ್ಲಾ ಸ್ಥಳಗಳಲ್ಲಿ ಜನರು ಹೊಲ ಗದ್ದೆಗಳಿಗೆ ಕ್ರಯಕೊಟ್ಟು, ಪತ್ರಕ್ಕೆ ಸಹಿಹಾಕಿ ಮುಚ್ಚಿ, ಸಾಕ್ಷಿಗಳನ್ನು ಹಾಕಿಸಿ ಕೊಂಡುಕೊಳ್ಳುವರು; ನಾನು ನನ್ನ ಜನರ ಗುಲಾಮಗಿರಿಯ ದುರವಸ್ಥೆಯನ್ನು ತಪ್ಪಿಸಿ ಬರಮಾಡುವೆನು.” ಇದು ಯೆಹೋವನ ನುಡಿ.
Source notes (1)
- Footnote ಹದಿನೇಳು ತೊಲಾ ಬೆಳ್ಳಿಯನ್ನು 200 ಗ್ರಾಂ ಬೆಳ್ಳಿ.
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019. Copyright © 2017, 2019 Bridge Connectivity Solutions. Licensed under CC BY-SA 4.0. Source: eBible.org. Typeset from the source files; no intended changes to scripture wording. BibleKenya is not endorsed by the rights holder.
Full source notice & licence · CC BY-SA 4.0 · SourceEdition imported 2026-10-25.