Skip to content
BibleKenya

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

ಯೆರೆ 24

ಒಳ್ಳೆಯ ಮತ್ತು ಕೆಟ್ಟ ಹಣ್ಣುಗಳ ಸಾಮ್ಯ

ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಯೆಹೋಯಾಕೀಮನ ಮಗನೂ ಯೆಹೂದದ ಅರಸನೂ ಆದ ಯೆಕೊನ್ಯನನ್ನೂ, ಯೆಹೂದದ ಪ್ರಧಾನರನ್ನೂ, ಶಿಲ್ಪಿಗಳನ್ನೂ ಮತ್ತು ಕಮ್ಮಾರರನ್ನೂ ಯೆರೂಸಲೇಮಿನಿಂದ ಬಾಬಿಲೋನಿಗೆ ಸೆರೆ ಒಯ್ದ ಮೇಲೆ ಯೆಹೋವನ ಆಲಯದ ಮುಂದೆ ಇಟ್ಟಿರುವ ಅಂಜೂರದ ಹಣ್ಣು ತುಂಬಿದ ಎರಡು ಪುಟ್ಟಿಗಳನ್ನು ಯೆಹೋವನು ನನಗೆ ತೋರಿಸಿದನು. ಒಂದು ಪುಟ್ಟಿಯಲ್ಲಿ ಫಲ ಕಾಲಕ್ಕೆ ಮುಂಚೆ ಮಾಗಿದ ಹಣ್ಣುಗಳ ಹಾಗೆ ಕಾಣುತ್ತಿದ್ದ ಅತ್ಯುತ್ತಮವಾದ ಅಂಜೂರದ ಫಲಗಳು ತುಂಬಿದ್ದವು. ಇನ್ನೊಂದು ಪುಟ್ಟಿಯಲ್ಲಿ ಯಾರೂ ತಿನ್ನದ ಹಾಗೆ ಬಹಳ ಕೆಟ್ಟು ಕೇವಲ ಅಸಹ್ಯವಾದ ಅಂಜೂರದ ಹಣ್ಣುಗಳು ತುಂಬಿದ್ದವು. ಆಗ ಯೆಹೋವನು ನನ್ನನ್ನು, “ಯೆರೆಮೀಯನೇ, ಏನು ನೋಡುತ್ತೀ?” ಎಂದು ಕೇಳಲು ನಾನು, “ಅಂಜೂರದ ಫಲಗಳನ್ನು ನೋಡುತ್ತೇನೆ; ಉತ್ತಮ ಫಲಗಳು ಅತ್ಯುತ್ತಮವಾಗಿವೆ, ಕೆಟ್ಟ ಫಲಗಳು ಬಹಳ ಕೆಟ್ಟಿವೆ, ಯಾರೂ ತಿನ್ನದ ಹಾಗೆ ಕೇವಲ ಅಸಹ್ಯವಾಗಿವೆ” ಎಂದು ಉತ್ತರ ಕೊಟ್ಟೆನು. ಆಗ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು. “ಇಸ್ರಾಯೇಲ ದೇವರಾದ ಯೆಹೋವನು ಇಂತೆನ್ನುತ್ತಾನೆ, ನಾನು ಈ ಸ್ಥಳದೊಳಗಿಂದ ಕಸ್ದೀಯರ ದೇಶಕ್ಕೆ ಕಳುಹಿಸಿಬಿಟ್ಟ ಸೆರೆಯವರಾದ ಯೆಹೂದ್ಯರನ್ನು ಈ ಉತ್ತಮವಾದ ಅಂಜೂರದ ಫಲಗಳಂತೆ ಲಕ್ಷಿಸಿ, ಅವರಿಗೆ ಮೇಲನ್ನುಂಟುಮಾಡುವೆನು. ಅವರನ್ನು ಕಟಾಕ್ಷಿಸಿ ಈ ದೇಶಕ್ಕೆ ತಿರುಗಿ ಬರಮಾಡುವೆನು. ಅವರನ್ನು ಕಟ್ಟುವೆನು, ಕೆಡವುವದಿಲ್ಲ; ನೆಡುವೆನು, ಕೀಳುವುದಿಲ್ಲ. ಅವರು ನನ್ನನ್ನು ಯೆಹೋವನೆಂದು ಗ್ರಹಿಸತಕ್ಕ ಹೃದಯವನ್ನು ಅವರಿಗೆ ಅನುಗ್ರಹಿಸುವೆನು. ಅವರು ನನ್ನ ಜನರಾಗಿರುವರು, ನಾನು ಅವರ ದೇವರಾಗಿರುವೆನು; ಅವರು ನನ್ನ ಕಡೆಗೆ ಮನಃಪೂರ್ವಕವಾಗಿ ಹಿಂದಿರುಗಿ ಬರುವರು” ಎಂಬುದೇ.

ಇದಲ್ಲದೆ ಯೆಹೋವನು, “ಯೆಹೂದದ ಅರಸನಾದ ಚಿದ್ಕೀಯ, ಅವನ ಪ್ರಧಾನರು, ಈ ದೇಶದಲ್ಲಿ ನಿಂತಿರುವ ಯೆರೂಸಲೇಮಿನವರ ಶೇಷ, ಐಗುಪ್ತ ದೇಶಕ್ಕೆ ವಲಸೆಯಾದವರು, ಕೆಟ್ಟು ಯಾರೂ ತಿನ್ನದ ಹಾಗೆ ಕೇವಲ ಅಸಹ್ಯವಾದ ಅಂಜೂರದ ಹಣ್ಣುಗಳ ಗತಿಗೆ ಇವರನ್ನು ತರುವೆನು. ಅವರ ಕೇಡಿಗಾಗಿ ನಾನು ಅವರನ್ನು ಲೋಕದ ಸಮಸ್ತ ರಾಜ್ಯಗಳಿಗೆ ಭಯಗ್ರಸ್ತರಾಗುವಂತೆ ಮಾಡುವೆನು; ನಾನು ಅವರನ್ನು ಅಟ್ಟಿಬಿಡುವ ಸ್ಥಳಗಳಲ್ಲೆಲ್ಲಾ ಅವರು ನಿಂದೆ, ಕಟ್ಟುಗಾದೆ, ಪರಿಹಾಸ್ಯ, ಶಾಪ, ಇವುಗಳಿಗೆ ಗುರಿಯಾಗುವರು. ನಾನು ಅವರಿಗೂ ಅವರ ಪೂರ್ವಿಕರಿಗೂ ಅನುಗ್ರಹಿಸಿದ ದೇಶದೊಳಗಿಂದ ಅವರು ನಿರ್ಮೂಲರಾಗುವ ತನಕ ಖಡ್ಗ, ಕ್ಷಾಮ ಮತ್ತು ವ್ಯಾಧಿಗಳನ್ನು ಅವರ ಮೇಲೆ ಕಳುಹಿಸುವೆನು” ಎಂದು ಹೇಳುತ್ತಾನೆ.

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019. Copyright © 2017, 2019 Bridge Connectivity Solutions. Licensed under CC BY-SA 4.0. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.