Skip to content
BibleKenya

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

ಯೆರೆ 10

ನಿರ್ಜೀವ ದೇವರುಗಳಿಗೆ ಭಯಪಡಬಾರದು

ಇಸ್ರಾಯೇಲ್ ವಂಶದವರೇ, ಯೆಹೋವನು ನಿಮಗೆ ನುಡಿಯುವ ಮಾತನ್ನು ಕೇಳಿರಿ;

ಯೆಹೋವನು, “ಜನಾಂಗಗಳ ಆಚರಣೆಯನ್ನು ಅಭ್ಯಾಸ ಮಾಡಿಕೊಳ್ಳಬೇಡಿರಿ, ಜನಾಂಗಗಳು ಹೆದರುವ ಆಕಾಶದ ಉತ್ಪಾತಗಳಿಗೆ ನೀವು ಹೆದರಬೇಡಿರಿ.

ಜನಾಂಗಗಳ ಕಟ್ಟಳೆಗಳು ಬರಿದೇ; ಅರಣ್ಯದ ಮರವನ್ನು ಕತ್ತರಿಸುವರು, ಬಡಗಿಯು ಅದನ್ನು ಕೈಯಿಂದ, ಉಳಿಯಿಂದ ರೂಪಿಸುವನು.

ಅದನ್ನು ಬೆಳ್ಳಿ, ಬಂಗಾರಗಳಿಂದ ಭೂಷಿಸುತ್ತಾರೆ, ಅಲುಗದಂತೆ ಮೊಳೆಗಳಿಂದ, ಸುತ್ತಿಗೆಯಿಂದ ಭದ್ರಪಡಿಸುತ್ತಾರೆ.

ಇಂಥಾ ಬೊಂಬೆಗಳು ಸೌತೆಕಾಯಿ ತೋಟದ ಬೆದರುಗಂಬದಂತಿವೆ, ಮಾತನಾಡಲಾರವು;

ಹೊತ್ತುಕೊಂಡು ಹೋಗಬೇಕು, ನಡೆಯಲಾರವು. ಅವುಗಳಿಗೆ ಹೆದರಬೇಡಿರಿ, ಕೇಡುಮಾಡಲಾರವು; ಒಳ್ಳೆಯದನ್ನು ಮಾಡಲಿಕ್ಕೂ ಅವುಗಳಿಗೆ ಸಾಮರ್ಥ್ಯವಿಲ್ಲ” ಎಂದು ಹೇಳುತ್ತಾನೆ

ಯೆಹೋವನೇ, ನಿನ್ನ ಸಮಾನನು ಯಾರು ಇಲ್ಲ; ನೀನು ಮಹೋನ್ನತನು, ನಿನ್ನ ನಾಮವು ಸಾಮರ್ಥ್ಯದಿಂದ ಕೂಡಿ ಮಹೋನ್ನತವಾಗಿದೆ.

ಜನಾಂಗಗಳ ಅರಸನೇ, ಯಾರು ನಿನಗೆ ಹೆದರದೆ ಇದ್ದಾರು? ಇದು ನಿನಗೆ ತಕ್ಕದ್ದು; ಜನಾಂಗಗಳ ಜ್ಞಾನಿಗಳಲ್ಲಿಯೂ, ರಾಜಪರಂಪರೆಯಲ್ಲಿಯೂ ನಿನಗೆ ಸಮಾನನು ಯಾರೂ ಇಲ್ಲವಷ್ಟೆ.

ಅವರೆಲ್ಲರೂ ಪಶುಪ್ರಾಯರು, ಮಂದಮತಿಗಳು, ಬೊಂಬೆಗಳಿಂದಾಗುವ ಶಿಕ್ಷಣವು ಮರದಂತೆ ಮೊದ್ದು.

ಬೆಳ್ಳಿಯ ತಗಡುಗಳು ತಾರ್ಷೀಷಿನಿಂದಲೂ, ಕೆತ್ತನೆಗಾರನ ಮತ್ತು ಎರಕದವನ ಕೈಕೆಲಸವಾದ ಚಿನ್ನವೂ ಊಫಜಿನಿಂದಲೂ ಸಾಗಿಬರುತ್ತವೆ.

ನೀಲಧೂಮ್ರ ವಸ್ತ್ರಗಳು ಅವುಗಳ ಉಡುಪಾಗಿವೆ, ಇವೆಲ್ಲಾ ಕುಶಲಕರ್ಮಿಗಳ ಕೌಶಲ್ಯ.

ಯೆಹೋವನಾದರೋ ಸತ್ಯದೇವರು; ಆತನು ಚೈತನ್ಯಸ್ವರೂಪನಾದ ದೇವನೂ ಮತ್ತು ಶಾಶ್ವತ ರಾಜನೂ ಆಗಿದ್ದಾನೆ.

ಆತನ ಕೋಪಕ್ಕೆ ಭೂಲೋಕವು ನಡುಗುತ್ತದೆ, ಜನಾಂಗಗಳು ಆತನ ರೋಷವನ್ನು ತಾಳಲಾರವು.

ನೀವು ಅವುಗಳಿಗೆ, “ಭೂಮ್ಯಾಕಾಶಗಳನ್ನು ಸೃಷ್ಟಿಸದಿರುವ ದೇವರುಗಳು ಭೂಮಿಯ ಮೇಲಿನಿಂದ, ಆಕಾಶದ ಕೆಳಗಿನಿಂದ, ಅಳಿದುಹೋಗುವವು” ಎಂದು ಹೇಳಿರಿ.

ಆತನು ತನ್ನ ಶಕ್ತಿಯಿಂದ ಭೂಮಿಯನ್ನು ನಿರ್ಮಿಸಿ, ತನ್ನ ಜ್ಞಾನದಿಂದ ಲೋಕವನ್ನು ಸ್ಥಾಪಿಸಿ, ತನ್ನ ವಿವೇಕದಿಂದ ಆಕಾಶಮಂಡಲವನ್ನು ಹರಡಿದ್ದಾನೆ.

ಆತನ ಗರ್ಜನೆಗೆ ಆಕಾಶದಲ್ಲಿ ನೀರು ಭೋರ್ಗರೆಯುವಂತೆ; ಆತನು ಭೂಮಿಯ ಕಟ್ಟಕಡೆಯಿಂದ ಮೋಡಗಳನ್ನು ಏರಮಾಡುತ್ತಾನೆ.

ಮಳೆಗೋಸ್ಕರ ಮಿಂಚನ್ನು ಹೊಳೆಯಮಾಡುತ್ತಾನೆ; ತನ್ನ ಭಂಡಾರದಿಂದ ಗಾಳಿಯನ್ನು ಬೀಸಮಾಡುತ್ತಾನೆ.

ಎಲ್ಲರೂ ತಿಳಿವಳಿಕೆಯಿಲ್ಲದೆ ಪಶುಪ್ರಾಯರಾಗಿದ್ದಾರೆ; ತಾನು ಕೆತ್ತಿದ ವಿಗ್ರಹದ ನಿಮಿತ್ತ ಪ್ರತಿಯೊಬ್ಬ ಅಕ್ಕಸಾಲಿಗನೂ ಅವಮಾನಕ್ಕೆ ಗುರಿಯಾಗುವನು.

ಅವನು ಎರಕ ಹೊಯ್ದ ಪುತ್ತಳಿಯು ಸುಳ್ಳು, ಅವುಗಳಲ್ಲಿ ಶ್ವಾಸವೇ ಇಲ್ಲ.

ಅವು ವ್ಯರ್ಥ, ಹಾಸ್ಯಾಸ್ಪದವಾದ ಕೆಲಸ; ದಂಡನೆಯಾಗುವಾಗ ಅಳಿದುಹೋಗುವವು.

ಯಾಕೋಬ್ಯರ ಸ್ವಾಸ್ತ್ಯವಾದಾತನು ಅವುಗಳ ಹಾಗಲ್ಲ; ಆತನು ಸಮಸ್ತವನ್ನೂ ನಿರ್ಮಿಸಿದವನು.

ಇಸ್ರಾಯೇಲ್ ಆತನ ಸ್ವಾಸ್ತ್ಯವಾದ ವಂಶ; ಸೇನಾಧೀಶ್ವರನಾದ ಯೆಹೋವನೆಂಬುದು ಆತನ ನಾಮಧೇಯ.

ಬರಲಿರುವ ವಿನಾಶ

ಮುತ್ತಿಗೆಗೆ ಈಡಾದ ಜನವೇ, ಗಂಟುಕಟ್ಟಿಕೊಂಡು ದೇಶದೊಳಗಿಂದ ನಡೆ.

“ಇಗೋ, ನಾನು ಈ ಸಾರಿ ದೇಶನಿವಾಸಿಗಳನ್ನು ಎಸೆದೇ ಬಿಡುವೆನು,

ಅವರಿಗೆ ಬುದ್ಧಿ ಬರಲೆಂದು ಅವರನ್ನು ಬಾಧಿಸುವೆನು” ಎಂದು ಯೆಹೋವನು ನುಡಿಯುತ್ತಾನೆ.

ಅಯ್ಯೋ, ನನ್ನ ಗಾಯ! ನನಗೆ ಬಿದ್ದ ಪೆಟ್ಟು ಭೀಕರ! ಆದರೂ ನಾನು, “ಇದು ನನಗೆ ವ್ಯಾಧಿಯೇ ಸರಿ, ಸಹಿಸಬೇಕು” ಅಂದುಕೊಂಡಿದ್ದೇನೆ.

ನನ್ನ ಗುಡಾರವು ಹಾಳಾಗಿದೆ, ಹಗ್ಗಗಳು ಹರಿದುಹೋಗಿವೆ, ಮಕ್ಕಳು ನನ್ನೊಳಗಿಂದ ತೊಲಗಿ ಇಲ್ಲವಾಗಿದ್ದಾರೆ.

ನನ್ನ ಗುಡಾರವನ್ನು ಹಾಕುವುದಕ್ಕೂ, ನನ್ನ ಪರದೆಗಳನ್ನು ಬಿಗಿಯುವುದಕ್ಕೂ ಇನ್ನು ಯಾರೂ ಇರುವುದಿಲ್ಲ.

ಏಕೆಂದರೆ ಪಾಲಕರು ಪಶುಪ್ರಾಯರಾಗಿ ಯೆಹೋವನ ಕಡೆಗೆ ನೋಡದೆ ಇದ್ದಾರೆ.

ಆದಕಾರಣ ಅವರ ಕಾರ್ಯವು ಸಾರ್ಥಕವಾಗಲಿಲ್ಲ, ಅವರ ಹಿಂಡುಗಳು ಚದರಿಹೋದವು.

ಇಗೋ, ಒಂದು ಸದ್ದು! ಆಹಾ, ಬರುತ್ತಿದೆ! ಯೆಹೂದದ ಪಟ್ಟಣಗಳನ್ನು ನಾಶಪಡಿಸಿ ನರಿಗಳ ಹಕ್ಕೆಯನ್ನಾಗಿ ಮಾಡುವುದಕ್ಕೆ ಉತ್ತರದೇಶದಿಂದ ಮಹಾಕಂಪನವು ಸಂಭವಿಸುತ್ತದೆ.

ಯೆರೆಮೀಯನ ವಿಜ್ಞಾಪನೆ

ಯೆಹೋವನೇ, ಮಾನವನ ಮಾರ್ಗವು ಅವನ ಸ್ವಾಧೀನದಲ್ಲಿ ಇಲ್ಲವೆಂದು ನನಗೆ ಗೊತ್ತು.

ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನು ಇಡಲಾರನು.

ಯೆಹೋವನೇ, ನನ್ನನ್ನು ಶಿಕ್ಷಿಸು, ಆದರೆ ಮಿತಿಮೀರ ಬೇಡ.

ರೋಷದಿಂದ ದಂಡಿಸದಿರು. ನಾನು ಕೇವಲ ಕ್ಷೀಣನಾದೇನು.

ನಿನ್ನನ್ನು ಅರಿಯದ ಅನ್ಯಜನಾಂಗಗಳ ಮೇಲೆಯೂ, ನಿನ್ನ ನಾಮವನ್ನು ಉಚ್ಚರಿಸದ ವಂಶಗಳ ಮೇಲೆಯೂ ನಿನ್ನ ರೌದ್ರವನ್ನು ಸುರಿದುಬಿಡು.

ಅವರು ಯಾಕೋಬ್ಯರನ್ನು ನುಂಗಿ ಹೌದು, ಪೂರಾ ನುಂಗಿಬಿಟ್ಟು ಅವರ ವಾಸಸ್ಥಳವನ್ನು ಹಾಳುಮಾಡಿದ್ದಾರಲ್ಲಾ.

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019. Copyright © 2017, 2019 Bridge Connectivity Solutions. Licensed under CC BY-SA 4.0. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.