ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019
ಯೆರೆ 1
ಪೀಠಿಕೆ
ಬೆನ್ಯಾಮೀನ್ ಸೀಮೆಗೆ ಸೇರಿದ ಅನಾತೋತ್ ಊರಿನ ಯಾಜಕ ವರ್ಗದವನೂ, ಹಿಲ್ಕೀಯನ ಮಗನೂ ಆದ ಯೆರೆಮೀಯನ ಪ್ರವಾದನೆಗಳು. ಯೆಹೂದದ ಅರಸನೂ, ಆಮೋನನ ಮಗನೂ ಆದ ಯೋಷೀಯನ ಆಳ್ವಿಕೆಯ ಹದಿಮೂರನೆಯ ವರ್ಷದಲ್ಲಿ ಯೆಹೋವನಿಂದ ಈ ವಾಕ್ಯವನ್ನು ಹೊಂದಿದನು. ಇದಲ್ಲದೆ ಯೆಹೂದದ ಅರಸನೂ, ಯೋಷೀಯನ ಮಗನೂ ಆದ ಯೆಹೋಯಾಕೀಮನ ಕಾಲದಿಂದ ಯೆಹೂದದ ಅರಸನೂ, ಯೋಷೀಯನ ಮಗನೂ ಆದ ಚಿದ್ಕೀಯನ ಆಳ್ವಿಕೆಯ ಹನ್ನೊಂದನೆಯ ವರ್ಷದ ಐದನೆಯ ತಿಂಗಳಿನಲ್ಲಿ ಯೆರೂಸಲೇಮಿನವರು ಸೆರೆಹೋಗುವ ತನಕ ಅವನು ಯೆಹೋವನ ವಾಕ್ಯವನ್ನು ಹೊಂದುತ್ತಾ ಇದ್ದನು.
ಯೆರೆಮೀಯನ ಕರೆ
ಕರ್ತನಾದ ಯೆಹೋವನು ನನಗೆ,
“ನಾನು ನಿನ್ನನ್ನು ಗರ್ಭದಲ್ಲಿ ರೂಪಿಸುವುದಕ್ಕೆ ಮುಂಚೆ ತಿಳಿದಿದ್ದೆನು; ನೀನು ಉದರದಿಂದ ಬರುವುದಕ್ಕೆ ಮೊದಲೇ ನಿನ್ನನ್ನು ಪ್ರತಿಷ್ಠಿಸಿದ್ದೆನು. ಜನಾಂಗಗಳಿಗೆ ಪ್ರವಾದಿಯನ್ನಾಗಿ ನಿನ್ನನ್ನು ನೇಮಿಸಿದ್ದೇನೆ” ಎಂಬ ವಾಕ್ಯವನ್ನು ದಯಪಾಲಿಸಿದನು.
ಅದಕ್ಕೆ ನಾನು, “ಅಯ್ಯೋ, ಕರ್ತನಾದ ಯೆಹೋವನೇ, ನಾನು ಮಾತು ಬಲ್ಲವನಲ್ಲ, ಬಾಲಕನು” ಎಂದು ಅರಿಕೆ ಮಾಡಿದೆನು.
ಆಗ ಯೆಹೋವನು ನನಗೆ, “ಬಾಲಕನು ಎನ್ನಬೇಡ; ನಾನು ಯಾರ ಬಳಿಗೆ ನಿನ್ನನ್ನು ಕಳುಹಿಸುತ್ತೇನೋ ಅವರೆಲ್ಲರ ಬಳಿಗೆ ನೀನು ಖಂಡಿತವಾಗಿ ಹೋಗುವಿ; ನಾನು ಆಜ್ಞಾಪಿಸುವುದನ್ನೆಲ್ಲಾ ಖಂಡಿತವಾಗಿ ನುಡಿಯುವಿ.
ಅವರಿಗೆ ಅಂಜಬೇಡ; ನಿನ್ನನ್ನು ಉದ್ಧರಿಸಲು ನಾನೇ ನಿನ್ನೊಂದಿಗಿರುವೆನು, ಇದು ಯೆಹೋವನಾದ ನನ್ನ ಮಾತು” ಎಂದು ಹೇಳಿದನು.
ಆಗ ಯೆಹೋವನು ಕೈಚಾಚಿ ನನ್ನ ಬಾಯನ್ನು ಮುಟ್ಟಿ, “ಇಗೋ, ನಿನ್ನ ಬಾಯಲ್ಲಿ ನನ್ನ ಮಾತುಗಳನ್ನು ಇಟ್ಟಿದ್ದೇನೆ;
ಕಿತ್ತುಹಾಕುವುದು ಮತ್ತು ಮುರಿದುಹಾಕುವುದು, ನಾಶಮಾಡುವುದು ಮತ್ತು ನೆಲಸಮಮಾಡುವುದು ಈ ಎಲ್ಲಾ ಕಾರ್ಯಗಳನ್ನು ಮಾಡುವುದಕ್ಕೋಸ್ಕರ ಜನಾಂಗಗಳ ಮೇಲೂ, ರಾಜ್ಯಗಳ ಮೇಲೂ ನಿನ್ನನ್ನು ಈ ದಿನ ನೇಮಿಸಿದ್ದೇನೆ” ಅಂದನು.
ಎರಡು ದರ್ಶನಗಳು
ಇದಲ್ಲದೆ, “ಯೆರೆಮೀಯನೇ, ಏನು ನೋಡುತ್ತಿರುವೆ?” ಎಂಬ ಯೆಹೋವನ ಮಾತು ನನಗೆ ಕೇಳಿ ಬಂತು. ಅದಕ್ಕೆ ನಾನು, “ಬಾದಾಮಿ ಮರದ ಕೊಂಬೆಯನ್ನು ನೋಡುತ್ತೇನೆ” ಅಂದೆನು. ಆಗ ಯೆಹೋವನು ನನಗೆ, “ಸರಿಯಾಗಿ ನೋಡಿದ್ದಿ, ನನ್ನ ಮಾತನ್ನು ನೆರವೇರಿಸುವುದಕ್ಕೆ ನೀನು ಎಚ್ಚರಗೊಂಡಿರುವೆ ಎಂದು ತಿಳಿದುಕೋ” ಎಂಬುದಾಗಿ ಹೇಳಿದನು.
ಎರಡನೆಯ ಬಾರಿ, “ನೀನು ಏನು ನೋಡುತ್ತಿರುವೆ?” ಎಂಬ ಯೆಹೋವನ ಮಾತನ್ನು ಕೇಳಿದೆನು. ಅದಕ್ಕೆ ನಾನು, “ಉರಿಸುತ್ತಿರುವ ಬೆಂಕಿಯಿಂದ ಉಕ್ಕುವ ಹಂಡೆಯನ್ನು ನೋಡುತ್ತೇನೆ. ಅದರ ಬಾಯಿ ಉತ್ತರ ದಿಕ್ಕಿನಿಂದ ಈ ಕಡೆಗೆ ಬಾಗಿಕೊಂಡಿದೆ” ಅಂದೆನು. ಆಗ ಯೆಹೋವನು ನನಗೆ, “ಈ ದೇಶದ ನಿವಾಸಿಗಳೆಲ್ಲರ ಮೇಲೆ ಉತ್ತರ ದಿಕ್ಕಿನಿಂದ ಕೇಡು ಉಕ್ಕಿ ಬರುವುದು. ಇಗೋ, ನಾನು ಉತ್ತರ ದಿಕ್ಕಿನ ರಾಜ್ಯಗಳ ಜನಾಂಗಗಳನ್ನೆಲ್ಲಾ ಕರೆಯುವೆನು; ಅವರು ಬಂದು ಯೆರೂಸಲೇಮಿನ ಊರ ಬಾಗಿಲುಗಳ ಎದುರಿನಲ್ಲಿಯೂ, ಅದರ ಎಲ್ಲಾ ಪೌಳಿಗೋಡೆಗಳ ಸುತ್ತಲೂ, ಯೆಹೂದದ ಸಕಲ ಪಟ್ಟಣಗಳ ಮುಂದೆಯೂ ತಮ್ಮ ತಮ್ಮ ನ್ಯಾಯಾಸನಗಳನ್ನು ಹಾಕಿಕೊಳ್ಳುವರು. ನನ್ನ ಜನರು ನನ್ನನ್ನು ಬಿಟ್ಟು ಅನ್ಯದೇವತೆಗಳಿಗೆ ಹೋಮಮಾಡಿದ್ದು, ತಮ್ಮ ಕೈಯಿಂದ ನಿರ್ಮಿಸಿದವುಗಳಿಗೆ1 ಅಡ್ಡಬಿದ್ದ ಅಧರ್ಮಕ್ಕೆಲ್ಲಾ ನಾನು ಅವರಿಗೆ ವಿಧಿಸಿರುವ ನ್ಯಾಯದಂಡನೆಗಳನ್ನು ತಿಳಿಸುವೆನು. ಹೀಗಿರಲು ನೀನು ಎದ್ದು ನಡುಕಟ್ಟಿಕೊಂಡು ನಾನು ಆಜ್ಞಾಪಿಸುವುದನ್ನೆಲ್ಲಾ ಅವರಿಗೆ ಹೇಳು. ನೀನು ಅವರಿಗೆ ಭಯಪಡಬೇಡ; ಭಯಪಟ್ಟರೆ ನಾನು ನಿನ್ನನ್ನು ಅವರ ಮುಂದೆ ಹೆದರಿಸುವೆನು. ಇಗೋ, ನಾನು ಈ ಹೊತ್ತು ನಿನ್ನನ್ನು ಯೆಹೂದದ ಅರಸರು, ಅಧಿಪತಿಗಳು, ಯಾಜಕರು, ಸಾಧಾರಣ ಜನರು, ಅಂತು ದೇಶದವರೆಲ್ಲರನ್ನೂ ಎದುರಿಸತಕ್ಕ ಕೋಟೆಕೊತ್ತಲದ ಪಟ್ಟಣವನ್ನಾಗಿಯೂ, ಕಬ್ಬಿಣದ ಕಂಬವನ್ನಾಗಿಯೂ, ತಾಮ್ರದ ಪೌಳಿಗೋಡೆಯನ್ನಾಗಿಯೂ ಸ್ಥಾಪಿಸಿದ್ದೇನೆ. ಅವರು ನಿನ್ನ ವಿರುದ್ಧವಾಗಿ ಯುದ್ಧಮಾಡುವರು, ಆದರೆ ನಿನ್ನನ್ನು ಸೋಲಿಸಲಾಗುವುದಿಲ್ಲ. ನಿನ್ನನ್ನುದ್ಧರಿಸಲು ನಾನೇ ನಿನ್ನೊಂದಿಗಿರುವೆನು, ಇದು ಯೆಹೋವನಾದ ನನ್ನ ಮಾತು” ಎಂದು ಹೇಳಿದನು.
Source notes (1)
- Footnote ನಿರ್ಮಿಸಿದವುಗಳಿಗೆ ವಿಗ್ರಹಗಳಿಗೆ.
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019. Copyright © 2017, 2019 Bridge Connectivity Solutions. Licensed under CC BY-SA 4.0. Source: eBible.org. Typeset from the source files; no intended changes to scripture wording. BibleKenya is not endorsed by the rights holder.
Full source notice & licence · CC BY-SA 4.0 · SourceEdition imported 2026-10-25.