Skip to content
BibleKenya

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

ಯೆಶಾ 25

ನ್ಯಾಯತೀರ್ಪು ಮತ್ತು ರಕ್ಷಣೆಗಾಗಿ ಸ್ತುತಿ

ಯೆಹೋವನೇ, ನೀನೇ ನನ್ನ ದೇವರು; ನೀನು ಸತ್ಯ ಪ್ರಾಮಾಣಿಕತೆಗಳನ್ನು ಅನುಸರಿಸಿ,

ಆದಿ ಸಂಕಲ್ಪಗಳನ್ನು ನೆರವೇರಿಸುತ್ತಾ, ಅದ್ಭುತಗಳನ್ನು ನಡೆಸಿದ ಕಾರಣ ನಿನ್ನನ್ನು ಕೊಂಡಾಡುವೆನು, ನಿನ್ನ ನಾಮವನ್ನು ಮಹಿಮೆಪಡಿಸುವೆನು.

ಏಕೆಂದರೆ ನೀನು ದುರ್ಗವನ್ನು ನಾಶಪಡಿಸಿ, ಪಟ್ಟಣವನ್ನು ಹಾಳು ದಿಬ್ಬವನ್ನಾಗಿಯೂ,

ಅನ್ಯರ ಕೋಟೆಯನ್ನು ಯಾರೂ ಎಂದಿಗೂ ಕಟ್ಟಲಾರದ ಹಾಳು ಊರನ್ನಾಗಿಯೂ ಮಾಡಿದ್ದಿ.

ಆದಕಾರಣ ಬಲಿಷ್ಠವಾದ ಜನಾಂಗವು ನಿನ್ನನ್ನು ಘನಪಡಿಸುವುದು, ಭಯಂಕರವಾದ ಜನರ ಪಟ್ಟಣವು ನಿನಗೆ ಅಂಜುವುದು.

ನೀನು ದೀನರಿಗೆ ಕೋಟೆಯು, ಇಕ್ಕಟ್ಟಿನಲ್ಲಿ ದಿಕಿಲ್ಲದವರಿಗೆ ರಕ್ಷಣಾದುರ್ಗವೂ,

ಬಿಸಿಲಿಗೆ ನೆರಳೂ, ಭೀಕರರ ಶ್ವಾಸವು

ಗೋಡೆಗೆ ಬಡಿದುಬಿಡುವ ಬಿರುಗಾಳಿಯಂತಿರುವಾಗ ಆಶ್ರಯವೂ ಆಗಿದ್ದೀ.

ಮೋಡಗಳು ಒಣನೆಲದ ಕಾವನ್ನು ತಂಪಾಗಿಸುವಂತೆ

ನೀನು ಅನ್ಯರ ಗದ್ದಲವನ್ನು ತಗ್ಗಿಸುವಿ;

ಮೋಡದ ನೆರಳಿನಿಂದ ಬಿಸಿಲು ಹೇಗೆ ಕಡಿಮೆಯಾಗುವುದೋ ಹಾಗೆ ನಿನ್ನಿಂದ ಭೀಕರರ ಉತ್ಸಾಹ ಗಾನವು ಕ್ರಮೇಣ ನಿಂತುಹೋಗುವುದು.

ಇದಲ್ಲದೆ, ಸೇನಾಧೀಶ್ವರನಾದ ಯೆಹೋವನು ಈ ಪರ್ವತದಲ್ಲಿ ಸಕಲ ಜನಾಂಗಗಳಿಗೆ ಸಾರವತ್ತಾದ ಕೊಬ್ಬಿದ ಮೃಷ್ಟಾನ್ನದಿಂದಲೂ,

ಮಡ್ಡಿಗಟ್ಟಿದ ಮೇಲೆ ಶೋಧಿಸಿದ ದ್ರಾಕ್ಷಾರಸದಿಂದಲೂ ಕೂಡಿದ ಔತಣವನ್ನು ಸಿದ್ಧಮಾಡುವನು.

ಸಮಸ್ತ ಜನಾಂಗಗಳನ್ನು ಮುಚ್ಚಿರುವ ಮುಸುಕನ್ನೂ,

ಸಕಲ ದೇಶದವರ ಮೇಲೆ ಹಾಕಿರುವ ತೆರೆಯನ್ನೂ ಇದೇ ಪರ್ವತದಲ್ಲಿ ತೆಗೆದುಹಾಕುವನು.

ಮರಣವನ್ನು ಶಾಶ್ವತವಾಗಿ ನಿರ್ನಾಮ ಮಾಡುವನು;

ಕರ್ತನಾದ ಯೆಹೋವನು ಎಲ್ಲರ ಮುಖದಲ್ಲಿನ ಕಣ್ಣೀರನ್ನು ಒರೆಸಿಬಿಡುವನು;

ತನ್ನ ಪ್ರಜೆಯ ಅವಮಾನವನ್ನು ಭೂಮಂಡಲದಿಂದಲೇ ತೊಲಗಿಸುವನು; ಯೆಹೋವನೇ ಇದನ್ನು ನುಡಿದಿದ್ದಾನೆ.

ಆ ದಿನದಲ್ಲಿ ಜನರು, “ಆಹಾ, ಈತನೇ ನಮ್ಮ ದೇವರು, ನಮ್ಮನ್ನು ರಕ್ಷಿಸಲಿ ಎಂದು,

ಈತನನ್ನು ನಿರೀಕ್ಷಿಸಿಕೊಂಡಿದ್ದೇವೆ; ಈತನ ರಕ್ಷಣೆಯಲ್ಲಿ ಆನಂದಿಸಿ ಉಲ್ಲಾಸಪಡುವೆವು” ಎಂದು ಹೇಳಿಕೊಳ್ಳುವರು.

ಏಕೆಂದರೆ ಯೆಹೋವನ ಹಸ್ತವು ಈ ಪರ್ವತದಲ್ಲಿ ನೆಲೆಯಾಗಿರುವುದು;

ಮೋವಾಬ್ಯರೋ ತಿಪ್ಪೆಗುಂಡಿಯ ಕೆಸರಿನಲ್ಲಿ ಒಣಹುಲ್ಲು ತುಳಿಯಲ್ಪಡುವ ಹಾಗೆ ತಾವಿದ್ದಲ್ಲೇ ತುಳಿಯಲ್ಪಡುವರು.

ಈಜುವವನು ಕೈಯಾಡಿಸುವಂತೆ ಅವರು ಅದರಲ್ಲಿಯೇ ಕೈಯಾಡಿಸುವರು; ಆದರೆ ಯೆಹೋವನು ಅವರ ಗರ್ವವನ್ನೂ, ಕೈಯ ಚಮತ್ಕಾರವನ್ನೂ ತಗ್ಗಿಸಿಬಿಡುವನು.

ದುರ್ಗಮವಾಗಿಯೂ, ಎತ್ತರವಾಗಿಯೂ ಇರುವ ನಿನ್ನ ಕೋಟೆಗಳನ್ನು ಆತನು ಕೆಡವಿ, ತಗ್ಗಿಸಿ, ನೆಲ ಸಮಮಾಡಿ ಧೂಳಿಗೆ ತರುವನು.

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019. Copyright © 2017, 2019 Bridge Connectivity Solutions. Licensed under CC BY-SA 4.0. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.