ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019
ಹೋಶೇ 12
ಎಫ್ರಾಯೀಮು ಮೇಯಿಸುವ ಮಂದೆಯು ಗಾಳಿಯೇ, ಹಿಂದಟ್ಟುವ ಬೇಟೆಯು ಮೂಡಣಗಾಳಿಯೇ.
ಅದು ಮೋಸವನ್ನೂ, ಹಿಂಸೆಯನ್ನೂ ನಿರಂತರ ಹೆಚ್ಚೆಚ್ಚಾಗಿ ನಡೆಸುತ್ತದೆ;
ಅಶ್ಶೂರದೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳುತ್ತದೆ; ಐಗುಪ್ತಕ್ಕೆ ಎಣ್ಣೆಯನ್ನು ಕಾಣಿಕೆಯಾಗಿ ಕಳುಹಿಸುತ್ತದೆ.
ಯೆಹೋವನು ಯೆಹೂದದ ಮೇಲೆ ವ್ಯಾಜ್ಯಕ್ಕೆ ತೊಡಗಿದ್ದಾನೆ,
ಯಾಕೋಬನ್ನು ಅದರ ನಡತೆಗೆ ತಕ್ಕ ಹಾಗೆ ದಂಡಿಸುವನು,
ಅದರ ದುಷ್ಕೃತ್ಯಗಳಿಗೆ ಪ್ರತಿಕಾರಮಾಡುವನು. 1
ಯಾಕೋಬನು ಗರ್ಭದಲ್ಲಿ ತನ್ನ ಅಣ್ಣನ ಹಿಮ್ಮಡಿಯನ್ನು ಎಳೆದನು,
ಪೂರ್ಣಪ್ರಾಯದಲ್ಲಿ ದೇವರೊಂದಿಗೆ ಹೋರಾಡಿದನು2;
ಹೌದು, ದೇವದೂತನ ಸಂಗಡ ಹೋರಾಡಿ ಗೆದ್ದನು; ಅಳುತ್ತಾ ಆತನ ಕೃಪೆಯನ್ನು ಬೇಡಿಕೊಂಡನು.
ಯೆಹೋವನೆಂಬ ಸೇನಾಧೀಶ್ವರನಾದ ದೇವರು ಅವನನ್ನು ಬೇತೇಲಿನಲ್ಲಿಯು ಕಂಡು ಅಲ್ಲಿ ಅವನೊಡನೆ3 ಮಾತನಾಡಿದನು.
ಯೆಹೋವನೆಂಬುದೇ ಆತನನ್ನು ಸ್ಮರಿಸುವ ನಾಮಧೇಯ.
ಇಸ್ರಾಯೇಲೇ, ನೀನೂ ನಿನ್ನ ದೇವರ ಕಡೆಗೆ ತಿರುಗಿಕೋ;
ನೀತಿ, ಪ್ರೀತಿಗಳನ್ನು ಅನುಸರಿಸಿ ನಿನ್ನ ದೇವರನ್ನು ಎಡೆಬಿಡದೆ ನಿರೀಕ್ಷಿಸಿಕೊಂಡಿರು.
ಕಾನಾನು! ಅದರ ಕೈಯಲ್ಲಿ ಮೋಸದ ತ್ರಾಸು ಇದೆ; ಕಸಕೊಳ್ಳಬೇಕೆಂಬದೇ ಅದರ ಆಶೆ.
ಎಫ್ರಾಯೀಮು, “ನಾನು ಐಶ್ವರ್ಯವಂತನೇ ಹೌದು, ಆಸ್ತಿಯನ್ನು ಪಡೆದಿದ್ದೇನೆ;
ನನ್ನ ದುಡಿತದಲ್ಲೆಲ್ಲಾ ಪಾಪವೆನಿಸಿಕೊಳ್ಳುವ ದೋಷವೇನೂ ತೋರಲಿಲ್ಲ” ಎಂದು ಅಂದುಕೊಳ್ಳುತ್ತದೋ?
ನೀನು ಐಗುಪ್ತ ದೇಶದಲ್ಲಿ ಇದ್ದಂದಿನಿಂದ ನಾನೇ ಯೆಹೋವನೆಂಬ ನಿನ್ನ ದೇವರಾಗಿದ್ದೇನೆ;
ಜಾತ್ರೆಯ ಕಾಲದಲ್ಲಿ ವನವಾಸಮಾಡುವಂತೆ ಗುಡಾರಗಳಲ್ಲಿ ವಾಸಿಸುವ ಗತಿಗೆ ನಿನ್ನನ್ನು ಪುನಃ ತರುವೆನು.
ನಾನು ಪ್ರವಾದಿಗಳಿಗೆ ನುಡಿದಿದ್ದೇನೆ, ಬಹಳ ದಿವ್ಯದರ್ಶನಗಳನ್ನು ದಯಪಾಲಿಸಿದ್ದೇನೆ.
ಪ್ರವಾದಿಗಳ ಮೂಲಕ ಸೂಚಕಕಾರ್ಯಗಳನ್ನು ನಡೆಸಿದ್ದೇನೆ.
ಗಿಲ್ಯಾದು ಅಧರ್ಮಮಯವೋ? ಅದು ಶೂನ್ಯದ ಗತಿಗೆ ಬರುವುದು;
ಗಿಲ್ಗಾಲಿನಲ್ಲಿ ಗೋಮೇಧವು ನಡೆಯುವುದೋ?
ಅಲ್ಲಿನ ಯಜ್ಞವೇದಿಗಳು ಹೊಲದ ನೇಗಿಲ ಗೆರೆಗಳಲ್ಲಿ ಕಲ್ಲುಕುಪ್ಪೆಗಳಾಗಿ ಸಿಕ್ಕುವವು.
ಯಾಕೋಬನು ಪದ್ದನ್ ಅರಾಮಿಗೆ ಓಡಿಹೋದನು;
ಇಸ್ರಾಯೇಲನು ಮದುವೆಗಾಗಿ ಜೀತಮಾಡಿದನು, ಹೆಣ್ಣಿಗೋಸ್ಕರ ಕುರಿಗಳನ್ನು ಕಾದನು.
ಯೆಹೋವನು ಇಸ್ರಾಯೇಲನ್ನು ಪ್ರವಾದಿಯ ಮುಖಾಂತರ ಐಗುಪ್ತದೊಳಗಿಂದ ಪಾರುಮಾಡಿದನು;
ಪ್ರವಾದಿಯ ಮೂಲಕ ಅದು ರಕ್ಷಿಸಲ್ಪಟ್ಟಿತು.
ಎಫ್ರಾಯೀಮು ಯೆಹೋವನನ್ನು ಅತಿ ತೀಕ್ಷ್ಣವಾಗಿ ರೇಗಿಸಿದೆ,
ಆದಕಾರಣ ಅದರ ಒಡೆಯನು ಅದರ ರಕ್ತಾಪರಾಧವನ್ನು ಅದರ ಮೇಲೆ ಹೊರಿಸಿ,
ಅದು ಮಾಡಿದ ಅವಮಾನವನ್ನು ಅದಕ್ಕೆ ಹಿಂದಿರುಗಿಸುವನು.
Source notes (3)
- Footnote ಆದಿ 25:26.
- Footnote ದೇವರೊಂದಿಗೆ ಹೋರಾಡಿದನು ಆದಿ 32:24-26.
- Footnote ಅವನೊಡನೆ ನಮ್ಮೊಡನೆ
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019. Copyright © 2017, 2019 Bridge Connectivity Solutions. Licensed under CC BY-SA 4.0. Source: eBible.org. Typeset from the source files; no intended changes to scripture wording. BibleKenya is not endorsed by the rights holder.
Full source notice & licence · CC BY-SA 4.0 · SourceEdition imported 2026-10-25.