Skip to content
BibleKenya

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

ಆದಿ 40

ಯೋಸೇಫನು ಕನಸುಗಳ ಅರ್ಥವನ್ನು ತಿಳಿಸಿದ್ದು

ಈ ಸಂಗತಿಗಳಾದ ಮೇಲೆ ಐಗುಪ್ತ ದೇಶದ ಅರಸನಾದ ಫರೋಹನಿಗೆ ಪಾನಗಳನ್ನು ಕೊಡುವವನೂ, ಆಹಾರಗಳನ್ನು ಮಾಡಿ ಕೊಡುವವನೂ ತಮ್ಮ ಅರಸನಿಗೆ ವಿರೋಧವಾಗಿ ಅಪರಾಧ ಮಾಡಿದರು. ಫರೋಹನು ಆ ಇಬ್ಬರು ಉದ್ಯೋಗಸ್ಥರ ಮೇಲೆ, ಅಂದರೆ ಪಾನದಾಯಕರಲ್ಲಿ ಮುಖ್ಯಸ್ಥನ ಮೇಲೆಯೂ ಅಡಿಗೆ ಭಟ್ಟರಲ್ಲಿ ಮುಖ್ಯಸ್ಥನ ಮೇಲೆಯೂ ಕೋಪಿಸಿಕೊಂಡು, ಅವರನ್ನು ಮೈಗಾವಲಿನವರ ಅಧಿಪತಿಯ ಮನೆಯೊಳಗೆ ಕಾವಲಲ್ಲಿರಿಸಿದನು. ಅದು ಯೋಸೇಫನು ಬಂಧಿಯಾಗಿದ್ದ ಸೆರೆಮನೆಯಾಗಿತ್ತು ಸೆರೆಮನೆಯ ಅಧಿಪತಿಯು ಯೋಸೇಫನನ್ನು ಅವರ ಉಪಚಾರಕ್ಕೆ ನೇಮಿಸಿದ್ದರಿಂದ ಯೋಸೇಫನು ಅವರಿಗೆ ಸೇವೆ ಮಾಡುವವನಾದನು. ಹೀಗೆ ಅವರು ಕೆಲವು ಕಾಲ ಸೆರೆಯಲ್ಲಿದ್ದರು.

ಐಗುಪ್ತ ಅರಸನು ಸೆರೆಯಲ್ಲಿ ಹಾಕಿಸಿದ್ದ ಪಾನದಾಯಕನಿಗೂ, ಅಡಿಗೆ ಭಟ್ಟನಿಗೂ, ಒಂದೇ ರಾತ್ರಿ ಕನಸುಬಿತ್ತು. ಅವರವರ ಕನಸಿಗೆ ಬೇರೆ ಬೇರೆ ಅರ್ಥವಿತ್ತು.

ಬೆಳಿಗ್ಗೆ ಯೋಸೇಫನು ಅವರ ಬಳಿಗೆ ಬಂದಾಗ ಅವರು ಬಹು ಚಿಂತೆಯುಳ್ಳವರಾಗಿ ಕಾಣಿಸಿದರು. ಅದನ್ನು ಅವನು ನೋಡಿ, “ನಿಮ್ಮ ಮುಖವು ಈ ಹೊತ್ತು ಏಕೆ ಕಳೆಗುಂದಿದೆ?” ಎಂದು ತನ್ನ ದಣಿಯ ಮನೆಯೊಳಗೆ ತನ್ನೊಂದಿಗೆ ಕಾವಲಲ್ಲಿದ್ದ ಫರೋಹನ ಉದ್ಯೋಗಸ್ಥರನ್ನು ಕೇಳಿದನು.

ಅವರು ಅವನಿಗೆ, “ನಮಗೆ ಕನಸುಬಿತ್ತು. ಅದರ ಅರ್ಥವನ್ನು ಹೇಳುವವರು ಯಾರೂ ಇಲ್ಲ” ಎಂದು ಹೇಳಲು ಯೋಸೇಫನು ಅವರಿಗೆ, “ಕನಸುಗಳ ಅರ್ಥವು ದೇವರಿಂದ ದೊರಕಬಹುದಲ್ಲವೇ? ದಯಮಾಡಿ ನಿಮ್ಮ ಕನಸನ್ನು ನನಗೆ ತಿಳಿಸಿರಿ” ಎಂದು ಹೇಳಿದನು.

ಆಗ ಪಾನದಾಯಕರಲ್ಲಿ ಮುಖ್ಯಸ್ಥನು ಯೋಸೇಫನಿಗೆ, “ನನ್ನ ಕನಸಿನಲ್ಲಿ ಒಂದು ದ್ರಾಕ್ಷಾಲತೆಯನ್ನು ನನ್ನ ಮುಂದೆ ಕಂಡೆನು. ಅದಕ್ಕೆ ಮೂರು ದ್ರಾಕ್ಷಾಲತೆಯ ಕೊಂಬೆಗಳಿದ್ದವು. ಅದು ಚಿಗುರುತ್ತಲೇ ಹೂವುಗಳನ್ನು ಬಿಟ್ಟಿತು; ಆ ಹೂವುಗಳು ಗೊಂಚಲುಗಳಾಗಿ ಹಣ್ಣಾದವು. ಫರೋಹನ ಪಾನಪಾತ್ರೆಯು ನನ್ನ ಕೈಯಲ್ಲಿದ್ದದರಿಂದ ನಾನು ಆ ದ್ರಾಕ್ಷಿಯ ಗೊಂಚಲುಗಳನ್ನು ಕೊಯ್ದು ಪಾತ್ರೆಯಲ್ಲಿ ಹಿಂಡಿ ಪಾತ್ರೆಯನ್ನು ಫರೋಹನ ಕೈಗೆ ಒಪ್ಪಿಸಿದೆನು” ಎಂದು ಹೇಳಿದನು.

ಅದಕ್ಕೆ ಯೋಸೇಫನು, “ಆ ಕನಸಿನ ಅರ್ಥವೇನೆಂದರೆ, ಆ ಮೂರು ದ್ರಾಕ್ಷಾಲತೆಯ ಕೊಂಬೆಗಳೇ ಮೂರು ದಿನಗಳು. ಈ ಹೊತ್ತಿಗೆ ಇನ್ನು ಮೂರು ದಿನಗಳಾದ ಮೇಲೆ ಫರೋಹನು ನಿನ್ನನ್ನು ಮೇಲಕ್ಕೆ ಎತ್ತಿ, ನಿನ್ನ ಉದ್ಯೋಗಕ್ಕೆ ಪುನಃ ನಿನ್ನನ್ನು ನೇಮಿಸುವನು. ನೀನು ಮೊದಲು ಫರೋಹನ ಪಾನದಾಯಕನಾಗಿದ್ದು ಅವನ ಕೈಗೆ ಪಾನಪಾತ್ರೆಯನ್ನು ಒಪ್ಪಿಸುತ್ತಿದ್ದಂತೆಯೇ ಮುಂದೆಯೂ ಒಪ್ಪಿಸುವಿ. ಆದರೆ ನೀನು ಸುಖದಿಂದಿರುವಾಗ ನನ್ನನ್ನು ಜ್ಞಾಪಕಮಾಡಿಕೊಂಡು ನನಗೆ ದಯೆ ತೋರಿಸಿ ಫರೋಹನಿಗೆ ನನ್ನ ಸಂಗತಿಯನ್ನು ತಿಳಿಸಿ ನನ್ನನ್ನು ಈ ಸೆರೆಯಿಂದ ಬಿಡಿಸಬೇಕು. ಏಕೆಂದರೆ ನಾನು ಇಬ್ರಿಯ ದೇಶದವನು. ಕೆಲವರು ನನ್ನನ್ನು ಕದ್ದು ಈ ದೇಶಕ್ಕೆ ತಂದರು. ಇಲ್ಲಿಯೂ ನಾನು ಯಾವ ತಪ್ಪು ಮಾಡದೆ ಸೆರೆಯಲ್ಲಿ ಬಿದ್ದಿರುವೆನು” ಅಂದನು.

ಅವನು ಹೇಳಿದ ಅರ್ಥವು ಶುಭಕರವಾದದ್ದೆಂದು ಅಡಿಗೆಭಟ್ಟರಲ್ಲಿ ಮುಖ್ಯಸ್ಥನು ತಿಳಿದು ಯೋಸೇಫನಿಗೆ, ನಾನೂ ಕಂಡ ಕನಸನ್ನು ಹೇಳುತ್ತೇನೆ ಕೇಳು, “ನನಗೆ ಬಿದ್ದ ಕನಸಿನಲ್ಲಿ ಸೊಗಸಾದ ರೊಟ್ಟಿ ಪದಾರ್ಥಗಳು ತುಂಬಿದ್ದ ಮೂರು ಪುಟ್ಟಿಗಳು ನನ್ನ ತಲೆಯ ಮೇಲಿದ್ದವು. ಮೇಲಿನ ಪುಟ್ಟಿಯಲ್ಲಿ ಫರೋಹನಿಗೋಸ್ಕರ ಎಲ್ಲಾ ವಿಧವಾದ ರೊಟ್ಟಿ ಪದಾರ್ಥಗಳು ಇದ್ದವು. ಪಕ್ಷಿಗಳು ಬಂದು ಅವುಗಳನ್ನು ನನ್ನ ತಲೆಯ ಮೇಲಿದ್ದ ಪುಟ್ಟಿಯೊಳಗಿಂದಲೇ ತಿಂದುಹಾಕಿದವು” ಎಂದು ಹೇಳಿದನು.

ಅದಕ್ಕೆ ಯೋಸೇಫನು, “ನಿನ್ನ ಕನಸಿನ ಅರ್ಥವೇನೆಂದರೆ, ಆ ಮೂರು ಪುಟ್ಟಿಗಳೇ ಮೂರು ದಿನಗಳು. ಈ ಹೊತ್ತಿಗೆ ಮೂರು ದಿನಗಳೊಳಗೆ ಫರೋಹನು ನಿನ್ನ ತಲೆಯನ್ನು ತೆಗೆಸುವನು, ನಿನ್ನನ್ನು ಮರಕ್ಕೆ ತೂಗು ಹಾಕಿಸುವನು, ಪಕ್ಷಿಗಳು ಬಂದು ನಿನ್ನ ಮಾಂಸವನ್ನು ತಿಂದುಬಿಡುವವು” ಎಂದನು.

ಮೂರನೆಯ ದಿನದಲ್ಲಿ ಫರೋಹನ ಜನ್ಮ ದಿನವಾದುದರಿಂದ ಅವನು ತನ್ನ ಸೇವಕರೆಲ್ಲರಿಗೆ ಔತಣವನ್ನು ಮಾಡಿಸಿ ಮುಖ್ಯಪಾನದಾಯಕನನ್ನೂ ಮತ್ತು ಮುಖ್ಯ ಅಡಿಗೆಭಟ್ಟನನ್ನು ಬಿಡಿಸಿ ಸೇವಕರ ಮಧ್ಯದಲ್ಲಿ ನಿಲ್ಲಿಸಿದನು. ಪಾನದಾಯಕರ ಮುಖ್ಯಸ್ಥನನ್ನು ಪುನಃ ಅವನ ಉದ್ಯೋಗಕ್ಕೆ ನೇಮಿಸಿದನು. ಅವನು ಪಾನ ಪಾತ್ರೆಯನ್ನು ಫರೋಹನ ಕೈಗೆ ಕೊಡುವವನಾದನು. ಆದರೆ ಮುಖ್ಯ ಅಡಿಗೆಭಟ್ಟನನ್ನು ಫರೋಹನು ಗಲ್ಲಿಗೆ ಹಾಕಿಸಿದನು. ಹೀಗೆ ಯೋಸೇಫನು ಹೇಳಿದಂತೆಯೇ ಆಯಿತು.

ಆದಾಗ್ಯೂ ಮುಖ್ಯಪಾನದಾಯಕನು ಯೋಸೇಫನನ್ನು ನೆನಪುಮಾಡಿಕೊಳ್ಳದೆ ಅವನನ್ನು ಮರೆತುಬಿಟ್ಟನು.

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019. Copyright © 2017, 2019 Bridge Connectivity Solutions. Licensed under CC BY-SA 4.0. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.