Skip to content
BibleKenya

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

ಆದಿ 11

ಬಾಬೆಲ್ ಗೋಪುರ ಮತ್ತು ಭಾಷಾಬೇಧ

ಆಗ ಭೂಲೋಕದವರೆಲ್ಲರಿಗೂ ಒಂದೇ ಭಾಷೆ; ಒಂದೇ ಮಾತು ಇತ್ತು. ಭಾಷಾಭೇದಗಳೇನೂ ಇರಲಿಲ್ಲ. ಜನರು ಪೂರ್ವ ದಿಕ್ಕಿಗೆ ಪ್ರಯಾಣಮಾಡುತ್ತಿರುವಾಗ 1ಶಿನಾರ್ ದೇಶದ ಬಯಲು ಸೀಮೆಯನ್ನು ಕಂಡು ಅಲ್ಲೇ ನೆಲೆಸಿದರು.

“ಅವರೆಲ್ಲರೂ ಬನ್ನಿ, ನಾವು ಇಟ್ಟಿಗೆಗಳನ್ನು ಮಾಡಿ, ಚೆನ್ನಾಗಿ ಸುಡೋಣ,” ಎಂದು ಅವರು ಒಬ್ಬರಿಗೊಬ್ಬರು ಮಾತನಾಡಿಕೊಂಡರು. ಅವರು ಕಲ್ಲಿಗೆ ಬದಲಾಗಿ ಇಟ್ಟಿಗೆಯನ್ನು, ಸುಣ್ಣಕ್ಕೆ ಬದಲಾಗಿ ಜೇಡಿಮಣ್ಣನ್ನು ಉಪಯೋಗಿಸಿದರು. ಅವರು, “ಬನ್ನಿರಿ, ಒಂದು ಪಟ್ಟಣವನ್ನು ಕಟ್ಟೋಣ, ಆಕಾಶವನ್ನು ಮುಟ್ಟುವ ಒಂದು ಗೋಪುರವನ್ನೂ ಕಟ್ಟಿ ದೊಡ್ಡ ಹೆಸರನ್ನು ಸಂಪಾದಿಸಿಕೊಳ್ಳೋಣ; ಹೀಗೆ ಮಾಡಿದರೆ ಭೂಮಿಯ ಮೇಲೆಲ್ಲಾ ಚದರಿಹೋಗುವುದಕ್ಕೆ ಆಸ್ಪದವಾಗುವುದಿಲ್ಲ” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು.

ಮನುಷ್ಯರು ಕಟ್ಟುತ್ತಿದ್ದ ಆ ಪಟ್ಟಣವನ್ನೂ, ಗೋಪುರವನ್ನೂ ನೋಡುವುದಕ್ಕೆ ಯೆಹೋವನು ಇಳಿದು ಬಂದನು. ನೋಡಿದ ಮೇಲೆ ಯೆಹೋವನು, “ಇವರು ಒಂದೇ ಜನಾಂಗ; ಇವರೆಲ್ಲರಿಗೂ ಒಂದೇ ಭಾಷೆ. ಪ್ರಾರಂಭದಲ್ಲೇ ಇವರು ಇಷ್ಟು ದೊಡ್ಡ ಯೋಜನೆಯೊಂದಿಗೆ ಒಟ್ಟಾಗಿ ಕೆಲಸ ಮಾಡಲಾರಂಭಿಸಿದ್ದಾರೆ. ಇನ್ನು ಮುಂದೆ ಇವರು ಏನು ಮಾಡಲು ಉದ್ದೇಶಿಸಿದರೂ ಇವರಿಗೆ ಯಾವುದೂ ಅಸಾಧ್ಯವಾಗುವುದಿಲ್ಲ. ಇವರಲ್ಲಿ ಒಬ್ಬರ ಮಾತು ಒಬ್ಬರಿಗೆ ತಿಳಿಯದಂತೆ ಇವರ ಭಾಷೆಯನ್ನು ಗಲಿಬಿಲಿ ಮಾಡೋಣ ಬನ್ನಿ” ಎಂದನು.

ಯೆಹೋವನು ಅದೇ ಪ್ರಕಾರ ಅವರನ್ನು ಭೂಲೋಕದಲ್ಲೆಲ್ಲಾ ಚದರಿಸಿ ಬಿಟ್ಟನು. ಅವರು ಆ ಪಟ್ಟಣ ಕಟ್ಟುವುದನ್ನು ನಿಲ್ಲಿಸಿಬಿಟ್ಟರು. ಸಮಸ್ತ ಲೋಕದ ಭಾಷೆಯನ್ನು ಯೆಹೋವನು ಅಲ್ಲಿ ಗಲಿಬಿಲಿ ಮಾಡಿ, ಅವರನ್ನು ಭೂಲೋಕದಲ್ಲೆಲ್ಲಾ ಚದರಿಸಿದ್ದರಿಂದ ಆ ಪಟ್ಟಣಕ್ಕೆ 2ಬಾಬೆಲ್ (ದೇವರ ಬಾಗಿಲು) ಎಂಬ ಹೆಸರಾಯಿತು.

ಶೇಮನ ವಂಶದವರ ಚರಿತ್ರೆ

ಶೇಮನ ವಂಶವೃಕ್ಷ: ಜಲಪ್ರಳಯವು ಕಳೆದು ಎರಡು ವರ್ಷಗಳಾದ ಮೇಲೆ ಶೇಮನು ನೂರು ವರ್ಷದವನಾಗಿ ಅರ್ಪಕ್ಷದನನ್ನು ಪಡೆದನು. ಶೇಮನು ಅರ್ಪಕ್ಷದನನ್ನು ಪಡೆದ ಮೇಲೆ ಗಂಡು ಮತ್ತು ಹೆಣ್ಣು ಮಕ್ಕಳನ್ನು ಪಡೆದು ಐನೂರು ವರ್ಷ ಬದುಕಿದನು.

ಅರ್ಪಕ್ಷದನು ಮೂವತ್ತೈದು ವರ್ಷದವನಾಗಿ ಶೆಲಹನನ್ನು ಪಡೆದನು. ಅರ್ಪಕ್ಷದನು ಶೆಲಹನನ್ನು ಪಡೆದ ಮೇಲೆ ಗಂಡು ಹೆಣ್ಣು ಮಕ್ಕಳನ್ನು ಪಡೆದು ನಾನೂರ ಮೂರು ವರ್ಷ ಬದುಕಿದನು.

ಶೆಲಹನು ಮೂವತ್ತನಾಲ್ಕು ವರ್ಷದವನಾಗಿ ಎಬರನನ್ನು ಪಡೆದನು. ಶೆಲಹನು ಎಬರನನ್ನು ಪಡೆದ ಮೇಲೆ ಗಂಡು ಮತ್ತು ಹೆಣ್ಣು ಮಕ್ಕಳನ್ನು ಪಡೆದು ನಾನೂರ ಮೂರು ವರ್ಷ ಬದುಕಿದನು.

ಎಬರನು ಮೂವತ್ತನಾಲ್ಕು ವರ್ಷದವನಾಗಿ ಪೆಲೆಗನನ್ನು ಪಡೆದನು. ಎಬರನು ಪೆಲೆಗನನ್ನು ಪಡೆದ ಮೇಲೆ ಗಂಡು ಹೆಣ್ಣು ಮಕ್ಕಳನ್ನು ಪಡೆದು ನಾನೂರ ಮೂವತ್ತು ವರ್ಷ ಬದುಕಿದನು.

ಪೆಲೆಗನು ಮೂವತ್ತು ವರ್ಷದವನಾಗಿ ರೆಗೂವನನ್ನು ಪಡೆದನು. ಪೆಲೆಗನು ರೆಗೂವನನ್ನು ಪಡೆದ ಮೇಲೆ ಗಂಡು ಮತ್ತು ಹೆಣ್ಣು ಮಕ್ಕಳನ್ನು ಪಡೆದು ಇನ್ನೂರ ಒಂಭತ್ತು ವರ್ಷ ಬದುಕಿದನು.

ರೆಗೂವನು ಮೂವತ್ತೆರಡು ವರ್ಷದವನಾಗಿ ಸೆರೂಗನನ್ನು ಪಡೆದನು. ಸೆರೂಗನು ರೆಗೂವನನ್ನು ಪಡೆದ ಮೇಲೆ ಗಂಡು ಮತ್ತು ಹೆಣ್ಣು ಮಕ್ಕಳನ್ನು ಪಡೆದು ಇನ್ನೂರ ಏಳು ವರ್ಷ ಬದುಕಿದನು.

ಸೆರೂಗನು ಮೂವತ್ತು ವರ್ಷದವನಾಗಿ ನಾಹೋರನನ್ನು ಪಡೆದನು. ಸೆರೂಗನು ನಾಹೋರನನ್ನು ಪಡೆದ ಮೇಲೆ ಗಂಡು ಮತ್ತು ಹೆಣ್ಣು ಮಕ್ಕಳನ್ನು ಪಡೆದು ಇನ್ನೂರು ವರ್ಷ ಬದುಕಿದನು.

ನಾಹೋರನು ಇಪ್ಪತ್ತೊಂಭತ್ತು ವರ್ಷದವನಾಗಿ ತೆರಹನನ್ನು ಪಡೆದನು. ನಾಹೋರ್ ತೆರಹನನ್ನು ಪಡೆದ ಮೇಲೆ ಗಂಡು ಮತ್ತು ಹೆಣ್ಣು ಮಕ್ಕಳನ್ನು ಪಡೆದು ನೂರ ಹತ್ತೊಂಬತ್ತು ವರ್ಷ ಬದುಕಿದನು.

ತೆರಹನು ಎಪ್ಪತ್ತು ವರ್ಷದವನಾಗಿ ಅಬ್ರಾಮ, ನಾಹೋರ್, ಹಾರಾನ್ ಎಂಬ ಮಕ್ಕಳನ್ನು ಪಡೆದನು.

ತೆರಹನ ವಂಶದವರ ಚರಿತ್ರೆ

ತೆರಹನ ವಂಶದವರ ಚರಿತ್ರೆಯು: ತೆರಹನು ಅಬ್ರಾಮ, ನಾಹೋರ್, ಹಾರಾನ್ ಎಂಬುವರನ್ನು ಪಡೆದನು. ಹಾರಾನನು ಲೋಟನನ್ನು ಪಡೆದನು. ಹಾರಾನನು ತಾನು ಹುಟ್ಟಿದ ದೇಶದೊಳಗೆ ಕಲ್ದೀಯರ ಊರ್ ಎಂಬ ಪಟ್ಟಣದಲ್ಲಿ ತನ್ನ ತಂದೆಯಾದ ತೆರಹನ ಮುಂದೆಯೇ ಸತ್ತನು. ಅಬ್ರಾಮನೂ ನಾಹೋರನೂ ಮದುವೆಮಾಡಿಕೊಂಡರು. ಅಬ್ರಾಮನ ಹೆಂಡತಿಯ ಹೆಸರು ಸಾರಯಳು, ನಾಹೋರನ ಹೆಂಡತಿಯ ಹೆಸರು ಮಿಲ್ಕಾ. ಈಕೆಯು ಹಾರಾನನ ಮಗಳು; ಹಾರಾನನು ಮಿಲ್ಕಳಿಗೂ ಇಸ್ಕಳಿಗೂ ತಂದೆ. ಸಾರಯಳು ಬಂಜೆಯಾಗಿದುದರಿಂದ ಆಕೆಗೆ ಮಕ್ಕಳಿರಲಿಲ್ಲ.

ತೆರಹನು ತನ್ನ ಮಗನಾದ ಅಬ್ರಾಮನನ್ನೂ, ತನಗೆ ಮೊಮ್ಮಗನೂ, ಹಾರಾನನಿಗೆ ಮಗನೂ ಆಗಿರುವ ಲೋಟನನ್ನೂ, ತನಗೆ ಸೊಸೆಯೂ ಅಬ್ರಾಮನಿಗೆ ಹೆಂಡತಿಯೂ ಆಗಿರುವ ಸಾರಯಳನ್ನೂ ಕರೆದುಕೊಂಡು ಕಾನಾನ್ ದೇಶಕ್ಕೆ ಹೋಗಬೇಕೆಂದು ಕಲ್ದೀಯರ ಊರ್ ಎಂಬ ಪಟ್ಟಣವನ್ನು ಬಿಟ್ಟು ಅವರು ಹಾರಾನ ಪಟ್ಟಣಕ್ಕೆ ಬಂದು ಅಲ್ಲೇ ವಾಸಮಾಡಿಕೊಂಡರು.

ತೆರಹನು ಇನ್ನೂರ ಐದು ವರ್ಷ ಬದುಕಿ ನಂತರ ಹಾರಾನಿನಲ್ಲಿ ಸತ್ತನು.

Source notes (2)
  1. Footnote ಬಾಬಿಲೋನ್.
  2. Footnote ಬಾಬಿಲೋನ್

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019. Copyright © 2017, 2019 Bridge Connectivity Solutions. Licensed under CC BY-SA 4.0. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.