ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019
ಯೆಹೆ 2
ಯೆಹೆಜ್ಕೇಲನ ಕರೆ
ಯೆಹೋವನು ನನಗೆ, “ನರಪುತ್ರನೇ, ಎದ್ದು ನಿಂತುಕೋ, ನಿನ್ನ ಸಂಗಡ ಮಾತನಾಡುವೆನು” ಎಂದು ಹೇಳಿದನು. ಆತನು ಈ ಮಾತನ್ನು ಹೇಳುವಾಗ ದೇವರಾತ್ಮವು ನನ್ನೊಳಗೆ ಪ್ರವೇಶಿಸಿ, ನಾನು ಎದ್ದು ನಿಂತುಕೊಳ್ಳುವಂತೆ ಮಾಡಿತು; ಆಗ ನನ್ನೊಡನೆ ಮಾತನಾಡಿದಾತನ ನುಡಿಯನ್ನು ಕೇಳಿದೆನು. ಆತನು ನನಗೆ ಹೀಗೆ ಹೇಳಿದನು, “ನರಪುತ್ರನೇ, ನನ್ನ ವಿರುದ್ಧವಾಗಿ ತಿರುಗಿಬಿದ್ದು ದ್ರೋಹಮಾಡಿದ ಜನಾಂಗದವರಾದ ಇಸ್ರಾಯೇಲರ ಬಳಿಗೆ ನಿನ್ನನ್ನು ಕಳುಹಿಸುತ್ತೇನೆ; ಈ ದಿನದವರೆಗೆ ಅವರೂ, ಅವರ ಪೂರ್ವಿಕರೂ ನನ್ನ ವಿರುದ್ಧವಾಗಿ ಪಾಪಮಾಡುತ್ತಲೇ ಇದ್ದಾರೆ.
“ನಾನು ಯಾವ ಸಂತಾನದವರ ಬಳಿಗೆ ನಿನ್ನನ್ನು ಕಳುಹಿಸುತ್ತೇನೋ ಆ ಸಂತಾನದವರು ನಾಚಿಕೆಗೆಟ್ಟವರೂ, ಹಟಗಾರರೂ ಆಗಿರುತ್ತಾರೆ; ನೀನು ಅವರಿಗೆ, ‘ಕರ್ತನಾದ ಯೆಹೋವನು ಇಂತೆನ್ನುತ್ತಾನೆ’ ಎಂದು ನುಡಿ. ಅವರು ಕೇಳಲಿ ಅಥವಾ ಕೇಳದೇ ಇರಲಿ ಏಕೆಂದರೆ ಅವರು ತಿರುಗಿ ಬೀಳುವ ವಂಶದವರು. ಆದರೆ ಒಬ್ಬ ಪ್ರವಾದಿಯು ತಮ್ಮ ಮಧ್ಯದಲ್ಲಿ ಇದ್ದಾನೆಂದು ತಿಳಿದುಕೊಳ್ಳುವರು.”
“ನರಪುತ್ರನೇ, ನೀನು ಮುಳ್ಳುಪೊದೆಗಳಲ್ಲಿ ಸಿಕ್ಕಿಕೊಂಡು, ಚೇಳುಗಳ ನಡುವೆ ವಾಸಿಸುವಂತೆ ಅವರ ಮಧ್ಯದಲ್ಲಿದ್ದರೂ ಅವರಿಗೆ ಭಯಪಡಬೇಡ, ಅವರ ಗದರಿಕೆಗೆ ಹೆದರದಿರು; ಅವರು ತಿರುಗಿ ಬೀಳುವ ವಂಶದವರು; ಅವರ ಬಿರುನುಡಿಗೆ ಭಯಪಡಬೇಡ, ಅವರ ಬಿರುನೋಟಕ್ಕೆ ಹೆದರದಿರು. ಅವರು ಕೇಳಿದರೂ, ಕೇಳದೆ ಹೋದರೂ ನೀನು ನನ್ನ ಮಾತುಗಳನ್ನು ಅವರಿಗೆ ಹೇಳಬೇಕು; ಅವರು ಖಂಡಿತವಾಗಿ ದ್ರೋಹಿಗಳೇ.”
ಪ್ರವಾದಿಗೆ ಲಭಿಸಿದ ವರ
ಇದಲ್ಲದೆ ಆತನು, “ನರಪುತ್ರನೇ, ನಾನು ನಿನಗೆ ಹೇಳುವ ಮಾತನ್ನು ಕೇಳು; ಅವಿಧೇಯರಾದ ಆ ವಂಶದವರಂತೆ ನೀನು ಅವಿಧೇಯನಾಗಬೇಡ; ನಾನು ಕೊಡುವುದನ್ನು ಬಾಯಿದೆರೆದು ತಿಂದುಬಿಡು” ಅಂದನು.
ಇಗೋ, ನಾನು ನೋಡುತ್ತಿರಲಾಗಿ ಒಂದು ಕೈ ನನ್ನ ಕಡೆಗೆ ಚಾಚಿತ್ತು, ಇಗೋ ಅದರಲ್ಲಿ ಗ್ರಂಥದ ಸುರುಳಿಯು ಕಾಣಿಸಿತು. ಆತನು ಆ ಸುರುಳಿಯನ್ನು ನನ್ನೆದುರಿನಲ್ಲಿ ಬಿಚ್ಚಿದನು; ಅದರ ಎರಡು ಪಕ್ಕಗಳಲ್ಲಿಯೂ ಬರೆದಿತ್ತು; ಅದರಲ್ಲಿ ಬರೆದದ್ದು ಪ್ರಲಾಪ, ಗೋಳಾಟ, ಶೋಕ ಇವುಗಳೇ.
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019. Copyright © 2017, 2019 Bridge Connectivity Solutions. Licensed under CC BY-SA 4.0. Source: eBible.org. Typeset from the source files; no intended changes to scripture wording. BibleKenya is not endorsed by the rights holder.
Full source notice & licence · CC BY-SA 4.0 · SourceEdition imported 2026-10-25.