ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019
ಯೆಹೆ 10
ಯೆಹೋವನ ಮಹಿಮೆ ದೇವಾಲಯವನ್ನು ಬಿಟ್ಟುಹೋದದ್ದು
ಇಗೋ, ನಾನು ನೋಡಲಾಗಿ ಕೆರೂಬಿಗಳ ತಲೆಗಳ ಮೇಲಣ ಗಗನಮಂಡಲದ ಮೇಲ್ಗಡೆ ಇಂದ್ರನೀಲಮಣಿಯಂತೆ ಹೊಳೆಯುವ ಸಿಂಹಾಸನದ ಆಕಾರವು ನನಗೆ ಕಾಣಿಸಿತು. ಆತನು ನಾರಿನ ಬಟ್ಟೆಯನ್ನು ಹೊದ್ದುಕೊಂಡ ಆ ಪುರುಷನಿಗೆ, “ನೀನು ಗರಗರನೆ ತಿರುಗುವ ಗಾಲಿಗಳ ನಡುವೆ, ಕೆರೂಬಿಗಳ ಕೆಳಗೆ ಪ್ರವೇಶಿಸಿ, ಕೆರೂಬಿಗಳ ಮಧ್ಯದೊಳಗಿಂದ ಬೊಗಸೆಯಲ್ಲಿ ಕೆಂಡಗಳನ್ನು ತುಂಬಿ, ತಂದು ಅದನ್ನು ಪಟ್ಟಣದ ಮೇಲೆ ಎರಚು” ಎಂದು ಅಪ್ಪಣೆಕೊಡಲು ಅವನು ನನ್ನ ಕಣ್ಣೆದುರಿಗೇ ಹೋಗಿ ಅಲ್ಲಿ ಪ್ರವೇಶಿಸಿದನು.
ಅವನು ಒಳಗೆ ಸೇರಿದಾಗ ಕೆರೂಬಿಗಳು ದೇವಾಲಯದ ದಕ್ಷಿಣಭಾಗದಲ್ಲಿ ನಿಂತಿದ್ದವು, ಮೇಘವು ಒಳಗಣ ಪ್ರಾಕಾರವನ್ನು ತುಂಬಿತ್ತು. ಇದಲ್ಲದೆ ಯೆಹೋವನ ತೇಜಸ್ಸು ಕೆರೂಬಿಗಳನ್ನು ಬಿಟ್ಟು ಮೇಲಕ್ಕೇರಿ ದೇವಾಲಯದ ಹೊಸ್ತಿಲಿನ ಮೇಲ್ಗಡೆ ನಿಂತಿತು; ದೇವಾಲಯದಲ್ಲಿಯೂ ಮೇಘವು ತುಂಬಿತ್ತು; ಯೆಹೋವನ ತೇಜಸ್ಸಿನ ಅದ್ಭುತಕಾಂತಿಯು ಅಂಗಳದಲ್ಲೆಲ್ಲಾ ವ್ಯಾಪಿಸಿತ್ತು. ಆಗ ಕೆರೂಬಿಗಳ ರೆಕ್ಕೆಗಳ ಶಬ್ದವು ಸರ್ವಶಕ್ತನಾದ ದೇವರು ಮಾತನಾಡುವ ಧ್ವನಿಯಷ್ಟು ಗಂಭೀರವಾಗಿ ಹೊರಗಣ ಅಂಗಳದವರೆಗೂ ಕೇಳಿಸಿತು.
ಆತನು ನಾರಿನ ಬಟ್ಟೆಯನ್ನು ಹೊದ್ದುಕೊಂಡಿದ್ದ ಪುರುಷನಿಗೆ, “ನೀನು ಗರಗರನೆ ತಿರುಗುವ ಗಾಲಿಗಳ ನಡುವೆ ಪ್ರವೇಶಿಸಿ, ಕೆರೂಬಿಗಳ ಮಧ್ಯದೊಳಗಿಂದ ಬೆಂಕಿಯನ್ನು ತೆಗೆದುಕೋ” ಎಂದು ಅಪ್ಪಣೆ ಕೊಡಲು ಅವನು ಒಳಕ್ಕೆ ಹೋಗಿ ಒಂದು ಚಕ್ರದ ಪಕ್ಕದಲ್ಲಿ ನಿಂತುಕೊಂಡನು. ಆಗ ಒಬ್ಬ ಕೆರೂಬಿಯು ಇತರ ಕೆರೂಬಿಗಳ ನಡುವೆ ಕೈ ಚಾಚಿ ಅವುಗಳ ಮಧ್ಯದಲ್ಲಿದ್ದ ಬೆಂಕಿಯನ್ನು ತೆಗೆದು ನಾರಿನ ಬಟ್ಟೆಯನ್ನು ಹೊದ್ದುಕೊಂಡವನ ಬೊಗಸೆಯಲ್ಲಿ ಹಾಕಿತು; ಅವನು ಅದನ್ನು ತೆಗೆದುಕೊಂಡು ಆಚೆಗೆ ಹೊರಟನು. ಕೆರೂಬಿಗಳ ಒಂದೊಂದು ರೆಕ್ಕೆಯ ಕೆಳಗೂ ಮನುಷ್ಯಹಸ್ತದಂಥ ಒಂದೊಂದು ಹಸ್ತವು ಕಾಣಿಸಿತು.
ಇಗೋ, ನಾನು ನೋಡಲಾಗಿ ಆ ಕೆರೂಬಿಗಳ ಪಕ್ಕಗಳಲ್ಲಿ, ಒಂದೊಂದು ಕೆರೂಬಿಯ ಪಕ್ಕದಲ್ಲಿ ಒಂದೊಂದು ಚಕ್ರದಂತೆ ನಾಲ್ಕು ಚಕ್ರಗಳಿದ್ದವು; ಆ ಚಕ್ರಗಳ ಬಣ್ಣವು ಪೀತರತ್ನದ ಹಾಗೆ ಹೊಳೆಯುತ್ತಿತ್ತು. ಅವುಗಳ ರೂಪವು ಹೇಗಿತ್ತೆಂದರೆ ಒಂದು ಚಕ್ರದೊಳಗೆ ಇನ್ನೊಂದು ಚಕ್ರವು ಅಡ್ಡವಾಗಿ ರಚಿಸಿದಂತಿತ್ತು, ಆ ನಾಲ್ಕು ಒಂದೇ ಮಾದರಿಯಾಗಿದ್ದವು. ಅವು ಹೊರಳುವಾಗ ನಾಲ್ಕು ಕಡೆಗಳಲ್ಲಿ ಯಾವ ಕಡೆಗಾದರೂ ಹೊರಳುತ್ತಿದ್ದವು, ಓರೆಯಾಗಿ ಹೊರಳುತ್ತಿರಲಿಲ್ಲ; ಎದುರುಮುಖವಾಗಿ ಹೋಗುತ್ತಿದ್ದವೇ ಹೊರತು ಓರೆಯಾಗಿ ಹೋಗುತ್ತಿರಲಿಲ್ಲ.
ಕೆರೂಬಿಗಳ ಬೆನ್ನು, ಕೈ, ರೆಕ್ಕೆ, ಅಂತು ಸರ್ವಾಂಗಗಳಲ್ಲಿಯೂ ಮತ್ತು ಚಕ್ರಗಳಲ್ಲಿಯೂ ಕಣ್ಣುಗಳು ಸುತ್ತಲೂ ತುಂಬಿದ್ದವು; ನಾಲ್ಕು ಕೆರೂಬಿಗಳಲ್ಲಿ ಒಂದೊಂದಕ್ಕೂ ಒಂದೊಂದು ಚಕ್ರವಿತ್ತು. ನಾನು ಕೇಳಿದಂತೆ ಆ ಚಕ್ರಗಳ ಹೆಸರು ಗರಗರಗಾಲಿ ಎಂಬುದೇ. ಒಂದೊಂದು ಕೆರೂಬಿಗೆ ನಾಲ್ಕು ನಾಲ್ಕು ಮುಖಗಳಿದ್ದವು; ಮೊದಲನೆಯದು ಕೆರೂಬಿಯದು, ಎರಡನೆಯದು ಮನುಷ್ಯನದು, ಮೂರನೆಯದು ಸಿಂಹದ್ದು, ನಾಲ್ಕನೆಯದು ಗರುಡಪಕ್ಷಿಯದು.
ಆ ಕೆರೂಬಿಗಳು ಮೇಲಕ್ಕೆ ಏರಿದವು; ನಾನು ಕೆಬಾರ್ ನದಿಯ ಹತ್ತಿರ ನೋಡಿದ ಜೀವಿಗಳು ಇವೇ. ಕೆರೂಬಿಗಳು ಮುಂದೆ ಹೋಗುವಾಗ ಚಕ್ರಗಳೂ ಅವುಗಳ ಪಕ್ಕದಲ್ಲಿ ಹೋಗುತ್ತಿದ್ದವು; ಕೆರೂಬಿಗಳು ನೆಲದಿಂದ ಮೇಲಕ್ಕೆ ಏರಬೇಕೆಂದು ರೆಕ್ಕೆಗಳನ್ನು ಹರಡಿಕೊಂಡಾಗ ಚಕ್ರಗಳೂ ಓರೆಯಾಗದೆ ಅವುಗಳ ಸಂಗಡಲೇ ಏರಿದವು. ಜೀವಿಗಳ ಆತ್ಮವು ಚಕ್ರಗಳಲ್ಲಿಯೂ ಇದ್ದ ಕಾರಣ, ಅವು ನಿಂತುಹೋದಾಗ ಇವೂ ನಿಂತುಹೋದವು, ಅವು ಏರಿದಾಗ ಇವೂ ಅವುಗಳ ಜೊತೆಯಲ್ಲೇ ಏರಿದವು.
ಬಳಿಕ ಯೆಹೋವನ ತೇಜಸ್ಸು ದೇವಾಲಯದ ಹೊಸ್ತಿಲನ್ನು ಬಿಟ್ಟು ಕೆರೂಬಿಗಳ ಮೇಲೆ ನಿಂತಿತು. ಆಗ ನನ್ನ ಕಣ್ಣೆದುರಿಗೆ ಕೆರೂಬಿಗಳು ರೆಕ್ಕೆಗಳನ್ನು ಹರಡಿಕೊಂಡು ಚಕ್ರಸಮೇತವಾಗಿ ನೆಲದಿಂದ ಏರಿ ಹೊರಟು ಯೆಹೋವನ ಆಲಯದ ಪೂರ್ವ ಬಾಗಿಲಿನ ಮುಂದೆ ನಿಂತವು, ಅವುಗಳ ಮೇಲ್ಗಡೆ ಇಸ್ರಾಯೇಲಿನ ದೇವರ ತೇಜಸ್ಸು ನೆಲಸಿತ್ತು.
ಇಸ್ರಾಯೇಲಿನ ದೇವರ ವಾಹನವಾಗಿ ಕೆಬಾರ್ ನದಿಯ ಹತ್ತಿರ ನನಗೆ ಕಾಣಿಸಿದ ಆ ಜೀವಿಗಳು ಇವೇ; ಅವು ಕೆರೂಬಿಗಳೆಂದು ಈಗ ನನಗೆ ತಿಳಿದುಬಂತು. ಒಂದೊಂದಕ್ಕೆ ನಾಲ್ಕು ನಾಲ್ಕು ಮುಖಗಳೂ, ನಾಲ್ಕು ನಾಲ್ಕು ರೆಕ್ಕೆಗಳೂ ಇದ್ದವು; ಅವುಗಳ ರೆಕ್ಕೆಗಳ ಕೆಳಗೆ ಮನುಷ್ಯ ಹಸ್ತದಂಥ ಹಸ್ತಗಳು ಇದ್ದವು. ಅವುಗಳ ಮುಖಗಳು ಕೆಬಾರ್ ನದಿಯ ಹತ್ತಿರ ನಾನು ಕಂಡ ಮುಖಗಳಂತೆ ನನಗೆ ಕಂಡುಬಂದವು, ಅವು ಆ ಮುಖಗಳೇ; ಪ್ರತಿಯೊಂದು ಜೀವಿಯು ನೇರವಾಗಿಯೇ ಹೋಗುತ್ತಿದ್ದವು.
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019. Copyright © 2017, 2019 Bridge Connectivity Solutions. Licensed under CC BY-SA 4.0. Source: eBible.org. Typeset from the source files; no intended changes to scripture wording. BibleKenya is not endorsed by the rights holder.
Full source notice & licence · CC BY-SA 4.0 · SourceEdition imported 2026-10-25.