Skip to content
BibleKenya

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

ವಿಮೋ 25

ದೇವದರ್ಶನದ ಗುಡಾರವೂ ಅದರ ಕಾಣಿಕೆಗಳೂ

ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ, “ಇಸ್ರಾಯೇಲರು ನನಗಾಗಿ ಕಾಣಿಕೆಯನ್ನು ತರಬೇಕೆಂದು ಅವರಿಗೆ ಹೇಳು. ಮನಃಪೂರ್ವಕವಾಗಿ ಕೊಡುವವರಿಂದಲೇ ಆ ಕಾಣಿಕೆಯನ್ನು ತೆಗೆದುಕೊಳ್ಳಬೇಕು. ನೀನು ಅವರಿಂದ ತೆಗೆದುಕೊಳ್ಳಬೇಕಾದ ಕಾಣಿಕೆಗಳು ಯಾವುವೆಂದರೆ, ಚಿನ್ನ, ಬೆಳ್ಳಿ, ಹಾಗೂ ತಾಮ್ರ ಎಂಬ ಲೋಹಗಳು, ನೀಲಿ, ನೇರಳೆ, ರಕ್ತಗೆಂಪು ವರ್ಣಗಳುಳ್ಳ ದಾರಗಳೂ, ನಾರುಬಟ್ಟೆಗಳೂ, ಆಡು ಕೂದಲಿನ ಉಣ್ಣೆಯ ಬಟ್ಟೆಗಳೂ, ಹದಮಾಡಿರುವ ಕೆಂಪುಬಣ್ಣದ ಟಗರಿನ ತೊಗಲುಗಳು, 1ಕಡಲಪ್ರಾಣಿಯ ತೊಗಲುಗಳೂ, ಜಾಲೀಮರವೂ, ದೀಪಕ್ಕೆ ಬೇಕಾದ ಎಣ್ಣೆಯೂ, ಅಭಿಷೇಕ ತೈಲಕ್ಕೆ ಮತ್ತು ಪರಿಮಳಧೂಪಕ್ಕೆ ಬೇಕಾದ ಸುಗಂಧದ್ರವ್ಯಗಳೂ, ಮಹಾಯಾಜಕನ 2ಕವಚಕ್ಕೆ ಹಾಗೂ ಎದೆಗೆ ಧರಿಸುವ ಪದಕದ ಮೇಲೆ ಇರಿಸಲು ಬೇಕಾಗಿರುವ ಗೋಮೇಧಕರತ್ನಗಳು ಹಾಗೂ ಇತರ ರತ್ನಗಳೂ ಇವೇ.

“ನಾನು ಅವರ ಮಧ್ಯದಲ್ಲಿ ವಾಸಮಾಡುವುದಕ್ಕೆ ನನಗೆ ಒಂದು ಗುಡಾರವನ್ನು ಕಟ್ಟಿಸಬೇಕು. ನಾನು ನಿನಗೆ ತೋರಿಸುವ ಮಾದರಿಯಲ್ಲಿಯೇ ಗುಡಾರವನ್ನೂ ಅದರಲ್ಲಿರುವ ಎಲ್ಲಾ ಸಾಮಾನುಗಳನ್ನೂ ಮಾಡಿಸಬೇಕು.

ಒಡಂಬಡಿಕೆಯ ಪೆಟ್ಟಿಗೆ

“ನೀನು ಜಾಲೀಮರದಿಂದ ಒಂದು ಮಂಜೂಷವನ್ನು ಮಾಡಿಸಬೇಕು. ಅದು ಎರಡುವರೆ ಮೊಳ ಉದ್ದವು, ಒಂದುವರೆ ಮೊಳ ಅಗಲವು ಹಾಗೂ ಒಂದುವರೆ ಮೊಳ ಎತ್ತರವು ಆಗಿರಬೇಕು. ಚೊಕ್ಕ ಬಂಗಾರದ ತಗಡುಗಳನ್ನು ಅದರ ಹೊರಗಡೆಯೂ ಹಾಗೂ ಒಳಗಡೆಯೂ ಹೊದಿಸಬೇಕು. ಅದರ ಮೇಲೆ ಸುತ್ತಲೂ ಚಿನ್ನದ ತೋರಣ ಕಟ್ಟಿಸಬೇಕು. ನಾಲ್ಕು ಬಂಗಾರದ ಬಳೆಗಳನ್ನು ಅದರ ನಾಲ್ಕು ಮೂಲೆಗಳಲ್ಲಿರುವ ಒಂದೊಂದು ಕಾಲಿಗೂ ಎರಡೆರಡು ಬಳೆಗಳನ್ನು ಹಾಕಬೇಕು. ಆ ಮಂಜೂಷವನ್ನು ಹೊರುವುದಕ್ಕಾಗಿ ನೀನು ಜಾಲೀಮರದ ಕಂಬಗಳನ್ನು ಮಾಡಿಸಿ ಅವುಗಳಿಗೆ ಚಿನ್ನದ ತಗಡುಗಳನ್ನು ಹೊದಿಸಿ, ಮಂಜೂಷದ ಎರಡು ಕಡೆಗಳಲ್ಲಿರುವ ಬಳೆಗಳಲ್ಲಿ ಸೇರಿಸಬೇಕು. ಆ ಕಂಬಗಳನ್ನು ಮಂಜೂಷದ ಬಳೆಗಳಿಂದ ತೆಗೆಯದೇ ಅವುಗಳಲ್ಲಿಯೇ ಬಿಟ್ಟಿರಬೇಕು. ಆ ಮಂಜೂಷದಲ್ಲಿ ನಾನು ನಿನಗೆ ಕೊಡುವ ಆಜ್ಞಾಶಾಸನವನ್ನು ಇಡಬೇಕು. ಚೊಕ್ಕ ಬಂಗಾರದ 3ಕೃಪಾಸನವನ್ನು ಮಾಡಿಸಬೇಕು. ಅದು ಎರಡುವರೆ ಮೊಳ ಉದ್ದವು, ಒಂದುವರೆ ಮೊಳ ಅಗಲವೂ ಆಗಿರಬೇಕು. ಕೃಪಾಸನದ ಎರಡು ಕೊನೆಗಳಲ್ಲಿ ಎರಡು ಬಂಗಾರದ ಕೆರೂಬಿಗಳನ್ನು ಕೆತ್ತನೆ ಕೆಲಸದಿಂದ ಮಾಡಿಸಬೇಕು. ಕೃಪಾಸನದ ಒಂದೊಂದು ಕೊನೆಯಲ್ಲಿ ಒಂದೊಂದು ಕೆರೂಬಿಯನ್ನು ಮಾಡಿಸಿ ಅವುಗಳನ್ನು ಕೃಪಾಸನಕ್ಕೆ ಜೋಡಿಸಬೇಕು. ಆ ಕೆರೂಬಿಗಳು ಮೇಲಕ್ಕೆ ರೆಕ್ಕೆಗಳನ್ನು ಚಾಚಿರುವಂತೆಯೂ ಮತ್ತು ಕೃಪಾಸನವನ್ನು ತಮ್ಮ ರೆಕ್ಕೆಗಳಿಂದ ಮುಚ್ಚಿರುವಂತೆಯೂ ಇರಿಸಬೇಕು. ಅವುಗಳ ಮುಖಗಳು ಎದುರುಬದುರಾಗಿ ಕೃಪಾಸನವನ್ನು ನೋಡುವಂತಿರಬೇಕು. ಆ ಕೃಪಾಸನವನ್ನು ಮಂಜೂಷದ ಮೇಲಿರಿಸಬೇಕು. ನಾನು ನಿನಗೆ ಕೊಡುವ ಆಜ್ಞಾಶಾಸನಗಳನ್ನು ಆ ಮಂಜೂಷದೊಳಗೆ ಇರಿಸಬೇಕು ಅಲ್ಲಿಯೇ ನಾನು ನಿನಗೆ ದರ್ಶನವನ್ನು ಕೊಡುವೆನು. ಕೃಪಾಸನದ ಮೇಲೆ ಆಜ್ಞಾಶಾಸನಗಳನ್ನು ಇಟ್ಟಿರುವ ಮಂಜೂಷದ ಮೇಲಣ ಎರಡು ಕೆರೂಬಿಗಳ ನಡುವೆಯೇ ನಾನು ಇದ್ದು ನಿನ್ನ ಸಂಗಡ ಮಾತನಾಡಿ ನೀನು ಇಸ್ರಾಯೇಲರಿಗೆ ಆಜ್ಞಾಪಿಸಬೇಕಾಗಿರುವ ಎಲ್ಲಾ ಸಂಗತಿಗಳನ್ನು ತಿಳಿಸುವೆನು.

ರೊಟ್ಟಿಯ ಮೇಜು

“ನೀನು ಜಾಲೀಮರದಿಂದ ಒಂದು ಮೇಜನ್ನು ಮಾಡಿಸಬೇಕು. ಅದು ಎರಡು ಮೊಳ ಉದ್ದವಾಗಿಯೂ, ಒಂದು ಮೊಳ ಅಗಲವಾಗಿಯೂ, ಒಂದುವರೆ ಮೊಳ ಎತ್ತರವಾಗಿಯೂ ಇರಬೇಕು. ಅದಕ್ಕೆ ಚೊಕ್ಕ ಬಂಗಾರದ ತಗಡುಗಳನ್ನು ಹೊದಿಸಿ, ಸುತ್ತಲೂ ಚಿನ್ನದ ತೋರಣ ಕಟ್ಟಿಸಬೇಕು. ಮೇಜಿನ ಸುತ್ತಲೂ ಅಂಗೈ ಅಗಲದ ಅಡ್ಡ ಪಟ್ಟಿಯನ್ನು ಮಾಡಿಸಿ ಅದಕ್ಕೂ ಚಿನ್ನದ ತೋರಣ ಕಟ್ಟಿಸಬೇಕು. ನಾಲ್ಕು ಚಿನ್ನದ ಬಳೆಗಳನ್ನು ಮಾಡಿಸಿ ಮೇಜಿನ ನಾಲ್ಕು ಕಾಲುಗಳಿಗೆ ಹಾಕಬೇಕು. ಆ ಬಳೆಗಳು ಅಡ್ಡಪಟ್ಟಿಗೆಗೆ ಅಂಟಿಕೊಂಡಿರಬೇಕು. ಮೇಜನ್ನು ಎತ್ತುವುದಕ್ಕಾಗಿ ಕೋಲುಗಳನ್ನು ಅವುಗಳಲ್ಲಿ ಸೇರಿಸಬೇಕು. ಆ ಕೋಲುಗಳನ್ನು ಜಾಲೀಮರದಿಂದ ಮಾಡಿಸಿ ಅವುಗಳಿಗೆ ಚಿನ್ನದ ತಗಡುಗಳನ್ನು ಹೊದಿಸಬೇಕು. ಅವುಗಳಿಂದಲೇ ಮೇಜನ್ನು ಎತ್ತಬೇಕು. ಮೇಜಿನ ಮೇಲಿಡಬೇಕಾದ ಹರಿವಾಣಗಳನ್ನು, ಧೂಪಾರತಿಗಳನ್ನು, ಹೂಜಿಗಳನ್ನು, ಪಾನದ್ರವ್ಯವನ್ನು ಅರ್ಪಿಸುವುದಕ್ಕೆ ಬೇಕಾದ ಬಟ್ಟಲುಗಳನ್ನು ಚೊಕ್ಕ ಬಂಗಾರದಿಂದಲೇ ಮಾಡಿಸಬೇಕು. ನೈವೇದ್ಯದ ರೊಟ್ಟಿಗಳು ಪ್ರತಿದಿನ ಆ ಮೇಜಿನ ಮೇಲೆ ನನ್ನ ಸಮ್ಮುಖದಲ್ಲಿಯೇ ಇಟ್ಟಿರಬೇಕು.

ದೀಪ ಸ್ತಂಭ

“ಚೊಕ್ಕ ಬಂಗಾರದ ದೀಪಸ್ತಂಭವನ್ನು ಮಾಡಿಸಬೇಕು. ಅದರ ಕೆಳಭಾಗವನ್ನು ಕಂಬವನ್ನೂ ನಕಾಸಿ ಕೆಲಸದಿಂದ ಮಾಡಿಸಬೇಕು. ಆ ದೀಪಸ್ತಂಭದ ಬುಡದಿಂದಲೇ ಅಖಂಡವಾಗಿ ಪುಷ್ಪದ ಗೊಂಚಲುಗಳು, ಅರಳಿದ ಪುಷ್ಪಗಳು ಮೊಗ್ಗುಗಳು ಅಲಂಕಾರವಾಗಿ ಕೆತ್ತಿರಬೇಕು. ಕಂಬದ ಒಂದೊಂದು ಪಾರ್ಶ್ವದಲ್ಲಿಯೂ ಮೂರು ಮೂರು ಕೊಂಬೆಗಳಂತೆ ಹಾಗೆ ಆರು ಕೊಂಬೆಗಳೂ ಇರಬೇಕು. ಪ್ರತಿಯೊಂದು ಕೊಂಬೆಗಳಲ್ಲಿ ಬಾದಾಮಿ ಹೂವುಗಳಂತಿರುವ ಮೂರು ಮೂರು ಹೂವುಗಳೂ ಮೊಗ್ಗುಗಳೂ ಇರಬೇಕು. ದೀಪಸ್ತಂಭದಿಂದ ಬರುವ ಆರು ಕೊಂಬೆಗಳನ್ನು ಹಾಗೆಯೇ ಮಾಡಿಸಬೇಕು. ದೀಪಸ್ತಂಭದ ಕಂಬದಲ್ಲಿ ಪುಷ್ಪಗುಚ್ಛಗಳೂ, ಪುಷ್ಪಗಳೂ, ಮೊಗ್ಗುಗಳು ಇರುವ ಬಾದಾಮಿ ಹೂವುಗಳಂತೆ ನಾಲ್ಕು ಪುಷ್ಪಾಲಂಕಾರಗಳೂ ಇರಬೇಕು. ಎರಡೆರಡು ಕೊಂಬೆಗಳು ಕವಲು ಒಡೆದಿರುವ ಸ್ಥಳಗಳಲ್ಲೆಲ್ಲಾ ಒಂದೊಂದು ಮೊಗ್ಗು ಇರಬೇಕು. ಪುಷ್ಪಪಾತ್ರೆಗಳೂ, ಕೊಂಬುಗಳೂ ಸಹಿತವಾದ ದೀಪಸ್ತಂಭವನ್ನೆಲ್ಲಾ ಒಟ್ಟಿಗೆ ಚೊಕ್ಕ ಬಂಗಾರದಿಂದ ನಕಾಸಿ ಕೆಲಸದಿಂದ ಮಾಡಿಸಬೇಕು. ಅದಕ್ಕೆ ಏಳು ಹಣತೆಗಳನ್ನು ಮಾಡಿಸಬೇಕು. ಆ ಹಣತೆಗಳ ಬೆಳಕು ಎದುರಿನಿಂದ ಬೀಳುವಂತೆ ಅವುಗಳನ್ನು ಹಚ್ಚಿರಬೇಕು. ದೀಪದ ಕುಡಿತೆಗೆಯುವ ಕತ್ತರಿಗಳೂ, ಕತ್ತರಿಸಿದ ಕುಡಿಗಳನ್ನು ಹಾಕುವ ಬಟ್ಟಲುಗಳನ್ನೂ ಚೊಕ್ಕ ಬಂಗಾರದಿಂದಲೇ ಮಾಡಿಸಬೇಕು. ದೀಪಸ್ತಂಭವೂ ಅದರ ಎಲ್ಲಾ ಉಪಕರಣಗಳೂ ಒಂದು 4ತಲಾಂತು ಚೊಕ್ಕ ಬಂಗಾರವಾಗಿರಬೇಕು. ನೋಡು, ಬೆಟ್ಟದಲ್ಲಿ ನಾನು ನಿನಗೆ ತೋರಿಸಿದ ಮಾದರಿಯಲ್ಲಿಯೇ ಎಲ್ಲವನ್ನು ಎಚ್ಚರಿಕೆಯಿಂದ ಮಾಡಿಸಬೇಕು.”

Source notes (4)
  1. Footnote ಕೆಲವು ಅನುವಾದಗಳಲ್ಲಿ ಕಡಲ ಹಂದಿ.
  2. Footnote ಏಫೊದ್.
  3. Footnote ಮುಚ್ಚಳ.
  4. Footnote 35 ಕಿಲೋಗ್ರಾಂ.

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019. Copyright © 2017, 2019 Bridge Connectivity Solutions. Licensed under CC BY-SA 4.0. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.