ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019
ಧರ್ಮೋ 5
ಮೋಶೆಯ ಎರಡನೆಯ ಉಪನ್ಯಾಸ - ಹತ್ತು ಆಜ್ಞೆಗಳು
ಮೋಶೆ ಎಲ್ಲಾ ಇಸ್ರಾಯೇಲರನ್ನು ಕರೆದು, “ಇಸ್ರಾಯೇಲರೇ, ನಾನು ಈಗ ನಿಮಗೆ ತಿಳಿಸುವ ಆಜ್ಞಾವಿಧಿಗಳನ್ನು ಕೇಳಿರಿ; ಇವುಗಳನ್ನು ಗ್ರಹಿಸಿಕೊಂಡು ಅನುಸರಿಸಿ ನಡೆಯಬೇಕು. ನಮ್ಮ ದೇವರಾದ ಯೆಹೋವನು ಹೋರೇಬಿನಲ್ಲಿ ನಮ್ಮ ಸಂಗಡ ನಿಬಂಧನೆಯನ್ನು ಮಾಡಿದನು. ಆತನು ನಮ್ಮ ಪೂರ್ವಿಕರ ಸಂಗಡ ಈ ನಿಬಂಧನೆಯನ್ನು ಮಾಡದೆ, ಈಗ ಇಲ್ಲಿ ಜೀವದಿಂದಿರುವ ನಮ್ಮ ಸಂಗಡಲೇ ಇದನ್ನು ಮಾಡಿದನು. ಯೆಹೋವನು ಆ ಬೆಟ್ಟದ ಮೇಲೆ ಬೆಂಕಿಯ ಜ್ಞಾಲೆಯೊಳಗಿಂದ ಮುಖಾಮುಖಿಯಾಗಿ ನಿಮ್ಮ ಸಂಗಡ ಮಾತನಾಡಿದನು. ನೀವು ಆ ಬೆಂಕಿಯ ಜ್ವಾಲೆಯ ದೆಸೆಯಿಂದ ಭಯಪಟ್ಟು, ಬೆಟ್ಟವನ್ನು ಹತ್ತದೆ ಇದ್ದುದರಿಂದ ನಾನು ಯೆಹೋವನಿಗೂ ಮತ್ತು ನಿಮಗೂ ನಡುವೆ ನಿಂತು ಆತನು ಹೇಳಿದ ಮಾತುಗಳನ್ನು ನಿಮಗೆ ತಿಳಿಸಿದೆನು. ಆತನು ಹೇಳಿದ್ದೇನೆಂದರೆ,
“ನೀನು ದಾಸತ್ವದಲ್ಲಿದ್ದ ಐಗುಪ್ತದೇಶದೊಳಗಿಂದ ನಿನ್ನನ್ನು ಬಿಡುಗಡೆಮಾಡಿದ ಯೆಹೋವನೆಂಬ ನಿನ್ನ ದೇವರು ನಾನೇ. ನಾನಲ್ಲದೆ ನಿನಗೆ ಬೇರೆ ದೇವರುಗಳು ಇರಬಾರದು.
“ಯಾವ ಮೂರ್ತಿಯನ್ನೂ ಮಾಡಿಕೊಳ್ಳಬಾರದು. ಆಕಾಶದಲ್ಲಾಗಲಿ, ಭೂಮಿಯಲ್ಲಾಗಲಿ, ಭೂಮಿಯ ಕೆಳಗಣ ನೀರಿನಲ್ಲಾಗಲಿ ಇರುವ ಯಾವುದರ ರೂಪವನ್ನೂ ಮಾಡಿಕೊಳ್ಳಬಾರದು. ಅವುಗಳಿಗೆ ಅಡ್ಡಬೀಳಲೂ ಬಾರದು, ಪೂಜೆಮಾಡಲೂ ಬಾರದು. ನಿನ್ನ ದೇವರಾದ ಯೆಹೋವನೆಂಬ ನಾನು ನನಗೆ ಸಲ್ಲತಕ್ಕ ಗೌರವವನ್ನು ಮತ್ತೊಬ್ಬನಿಗೆ ಸಲ್ಲಗೊಡಿಸದವನಾದ್ದರಿಂದ, ನನ್ನನ್ನು ದ್ವೇಷಿಸುವವರ ವಿಷಯದಲ್ಲಿ ಪೂರ್ವಿಕರ ದೋಷಫಲವನ್ನು ಮಕ್ಕಳ ಮೇಲೆ ಮೂರು ನಾಲ್ಕು ತಲೆಗಳ ವರೆಗೆ ಬರಮಾಡುವವನಾಗಿದ್ದೇನೆ. ನನ್ನನ್ನು ಪ್ರೀತಿಸಿ ನನ್ನ ಆಜ್ಞೆಗಳನ್ನು ಕೈಕೊಳ್ಳುವವರಿಗೋಸ್ಕರ ಸಾವಿರ ತಲೆಗಳವರೆಗೆ ದಯೆತೋರಿಸುವವನಾಗಿಯೂ ಇದ್ದೇನೆ.
“ನಿನ್ನ ದೇವರಾದ ಯೆಹೋವನ ಹೆಸರನ್ನು ಅಯೋಗ್ಯಕಾರ್ಯಕ್ಕಾಗಿ ಉಪಯೋಗಿಸಬಾರದು. ಯೆಹೋವನು ತನ್ನ ಹೆಸರನ್ನು ಅಯೋಗ್ಯ ಕಾರ್ಯಕ್ಕಾಗಿ ಉಪಯೋಗಿಸುವವನನ್ನು ಶಿಕ್ಷಿಸದೆ ಬಿಡುವುದಿಲ್ಲ.
“ನಿನ್ನ ದೇವರಾದ ಯೆಹೋವನು ಆಜ್ಞಾಪಿಸಿದಂತೆ ನೀನು ಸಬ್ಬತ್ ದಿನವನ್ನು ದೇವರ ದಿನವೆಂದು ಆಚರಿಸಬೇಕು. ಆರು ದಿನಗಳಲ್ಲಿ ನೀನು ದುಡಿದು ನಿನ್ನ ಕೆಲಸವನ್ನೆಲ್ಲಾ ಮಾಡಬೇಕು. ಏಳನೆಯ ದಿನ ನಿನ್ನ ದೇವರಾದ ಯೆಹೋವನಿಗೆ ಮೀಸಲಾದ ವಿಶ್ರಾಂತಿ ದಿನವಾಗಿದೆ. ಅದರಲ್ಲಿ ನೀನು ಯಾವ ಕೆಲಸವನ್ನೂ ಮಾಡಬಾರದು. ನಿನ್ನ ಗಂಡುಮಕ್ಕಳು, ಹೆಣ್ಣುಮಕ್ಕಳು, ಗಂಡಾಳು, ಹೆಣ್ಣಾಳು, ಎತ್ತು, ಕತ್ತೆ, ಪಶುಗಳು ಮತ್ತು ನಿನ್ನ ಊರಲ್ಲಿರುವ ಅನ್ಯದೇಶದವರು ಯಾವ ಕೆಲಸವನ್ನೂ ಮಾಡಬಾರದು. ನಿನ್ನಂತೆಯೇ ನಿನ್ನ ಗಂಡಾಳು ಹೆಣ್ಣಾಳುಗಳಿಗೂ ವಿಶ್ರಾಂತಿ ದೊರೆಯಬೇಕು. ಐಗುಪ್ತ ದೇಶದಲ್ಲಿ ನೀವು ದಾಸತ್ವದಲ್ಲಿದ್ದುದ್ದನ್ನೂ, ನಿಮ್ಮ ದೇವರಾದ ಯೆಹೋವನು ಭುಜಪರಾಕ್ರಮದಿಂದಲೂ ಮತ್ತು ಶಿಕ್ಷಾಹಸ್ತದಿಂದಲೂ ನಿಮ್ಮನ್ನು ಬಿಡುಗಡೆಮಾಡಿದ್ದನ್ನೂ ಜ್ಞಾಪಕಮಾಡಿಕೊಳ್ಳಿರಿ. ನೀವು ಸಬ್ಬತ್ ದಿನವನ್ನು ಆಚರಿಸಬೇಕೆಂದು ನಿಮ್ಮ ದೇವರಾದ ಯೆಹೋವನು ಇದಕ್ಕಾಗಿಯೇ ಆಜ್ಞಾಪಿಸಿದ್ದಾನೆ.
“ನಿನ್ನ ದೇವರಾದ ಯೆಹೋವನು ಆಜ್ಞಾಪಿಸಿದಂತೆ ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು; ಸನ್ಮಾನಿಸಿದರೆ ನಿನ್ನ ದೇವರಾದ ಯೆಹೋವನು ನಿನಗೆ ಅನುಗ್ರಹಿಸುವ ದೇಶದಲ್ಲಿ ನೀನು ಬಹುಕಾಲ ಕ್ಷೇಮವಾಗಿ ಇರುವಿ, ಮತ್ತು ನಿನಗೆ ಒಳ್ಳೆಯದಾಗುವುದು.
“ನರಹತ್ಯ ಮಾಡಬಾರದು.
“ವ್ಯಭಿಚಾರ ಮಾಡಬಾರದು.
“ಕದಿಯಬಾರದು.
“ಮತ್ತೊಬ್ಬನ ಮೇಲೆ ಸುಳ್ಳು ಸಾಕ್ಷಿ ಹೇಳಬಾರದು.
“ಮತ್ತೊಬ್ಬನ ಹೆಂಡತಿಯನ್ನು ಅಪೇಕ್ಷಿಸಬಾರದು; ಮತ್ತೊಬ್ಬನ ಹೊಲ, ಮನೆ, ಗಂಡಾಳು, ಹೆಣ್ಣಾಳು, ಎತ್ತು ಮತ್ತು ಕತ್ತೆ ಮುಂತಾದವುಗಳನ್ನು ಆಶಿಸಬಾರದು.”
ಈ ಮಾತುಗಳನ್ನು ಯೆಹೋವನು ಆ ಬೆಟ್ಟದ ಮೇಲೆ ಬೆಂಕಿ, ಮೋಡ, ಕಾರ್ಗತ್ತಲು ಇವುಗಳ ಮಧ್ಯದೊಳಗಿಂದ ನಿಮ್ಮ ಸರ್ವಸಮೂಹಕ್ಕೆ ಕೇಳಿಸುವಂತೆ ಮಹಾ ಸ್ವರದಿಂದ ನುಡಿದನು. ಇದಲ್ಲದೆ ಆತನು ಮತ್ತೇನೂ ಹೇಳಲಿಲ್ಲ. ಆತನು ಆ ಮಾತುಗಳನ್ನು ಎರಡು ಕಲ್ಲಿನ ಹಲಗೆಗಳಲ್ಲಿ ಕೆತ್ತಿ ನನಗೆ ಕೊಟ್ಟನು.
ಜನರ ದಿಗ್ಭ್ರಮೆ - ಮೋಶೆಯ ಮಧ್ಯಸ್ತಿಕೆ
ಆ ಬೆಟ್ಟವು ಬೆಂಕಿಯಿಂದ ಪ್ರಜ್ವಲಿಸುತ್ತಿರುವಾಗ ಆ ಕತ್ತಲೊಳಗಿಂದ ದೇವರ ಸ್ವರವನ್ನು ಕೇಳಿ, ನೀವು ಅಂದರೆ ನಿಮ್ಮ ಕುಲಾಧಿಪತಿಗಳೂ ಮತ್ತು ಹಿರಿಯರೂ ನನ್ನ ಬಳಿಗೆ ಬಂದು, “ನಮ್ಮ ದೇವರಾದ ಯೆಹೋವನು ತನ್ನ ಘನವನ್ನೂ ಮತ್ತು ಮಹಿಮೆಯನ್ನೂ ನಮಗೆ ತೋರಿಸಿ, ಅಗ್ನಿಜ್ವಾಲೆಯೊಳಗಿಂದ ತನ್ನ ಸ್ವರವನ್ನು ನಮಗೆ ಕೇಳುವಂತೆ ಮಾಡಿದನಲ್ಲಾ. ಮನುಷ್ಯನು ತನ್ನ ಸಂಗಡ ದೇವರು ಮಾತನಾಡಿದರೂ ಸಾಯದೆ ಬದುಕಿದ್ದುಂಟೆಂಬುದು ಈ ಹೊತ್ತು ನಮಗೆ ತಿಳಿಯಬಂತು. ಆದರೂ ಈ ಘೋರವಾದ ಅಗ್ನಿಜ್ವಾಲೆಯು ನಮ್ಮನ್ನು ದಹಿಸಿ ಬಿಟ್ಟಿತು, ಮತ್ತು ನಮ್ಮ ದೇವರಾದ ಯೆಹೋವನ ಸ್ವರವನ್ನು ನಾವು ಪುನಃ ಕೇಳಿದರೆ ಸತ್ತೇವು. ಬೆಂಕಿಯ ಜ್ವಾಲೆಯೊಳಗಿಂದ ಮಾತನಾಡುವ ಚೈತನ್ಯಸ್ವರೂಪನಾದ ದೇವರ ಸ್ವರವನ್ನು ನಾವು ಕೇಳಿದಂತೆ ಎಲ್ಲಾ ಮನುಷ್ಯರೊಳಗೆ ಯಾರು ಕೇಳಿ ಬದುಕಿದರು? ಹೀಗಿರುವುದರಿಂದ ನಾವು ಯಾಕೆ ಸಾಯಬೇಕು? ನೀನೇ ಹತ್ತಿರಕ್ಕೆ ಹೋಗಿ ನಮ್ಮ ದೇವರಾದ ಯೆಹೋವನ ಆಜ್ಞೆಗಳನ್ನೆಲ್ಲಾ ತಿಳಿದುಕೊಂಡು ಬಂದು ನಮಗೆ ತಿಳಿಸು; ತಿಳಿಸಿದಾಗ ನಾವು ನಡಿಸುವೆವು” ಎಂದು ಹೇಳಿದಿರಿ.
ನಿಮ್ಮ ಮಾತುಗಳನ್ನು ಯೆಹೋವನು ಕೇಳಿ ನನಗೆ, “ಈ ಜನರು ನಿನಗೆ ಹೇಳಿದ ಮಾತುಗಳನ್ನು ಕೇಳಿದ್ದೇನೆ; ಆ ಮಾತುಗಳೆಲ್ಲಾ ಒಳ್ಳೆಯವೇ. ನನ್ನಲ್ಲಿ ಭಯಭಕ್ತಿಯುಳ್ಳವರಾಗಿ, ನನ್ನ ಆಜ್ಞೆಗಳನ್ನು ಅನುಸರಿಸುವ ಮನಸ್ಸು ಯಾವಾಗಲೂ ಅವರಲ್ಲಿ ಇದ್ದರೆ ಒಳ್ಳೇಯದು. ಆಗ ಅವರಿಗೂ ಅವರ ಸಂತತಿಯವರಿಗೂ ಯಾವಾಗಲೂ ಶುಭವುಂಟಾಗುವುದು” “‘ನಿಮ್ಮ ನಿಮ್ಮ ಡೇರೆಗಳಿಗೆ ಹಿಂತಿರುಗಿ ಹೋಗಿರಿ’ ಎಂದು ಅವರಿಗೆ ಆಜ್ಞಾಪಿಸು. ನೀನಾದರೋ ಇಲ್ಲೇ ನನ್ನ ಹತ್ತಿರ ನಿಂತಿರು; ನಾನು ಅವರಿಗೆ ಬೋಧಿಸಬೇಕಾದ ಎಲ್ಲಾ ಧರ್ಮೋಪದೇಶವನ್ನು ಮತ್ತು ವಿಧಿನಿಯಮಗಳನ್ನೂ ನಿನಗೆ ತಿಳಿಸುತ್ತೇನೆ. ನಾನು ಅವರಿಗೆ ಸ್ವಂತಕ್ಕಾಗಿ ಕೊಡುವ ದೇಶದಲ್ಲಿ ಅವರು ಇವುಗಳನ್ನು ಅನುಸರಿಸಬೇಕು” ಎಂದು ಹೇಳಿದನು.
ಆದುದರಿಂದ ನೀವು ಬಲಕ್ಕಾಗಲಿ ಎಡಕ್ಕಾಗಲಿ ತಿರುಗಿಕೊಳ್ಳದೆ ತಪ್ಪಿ ನಡೆಯದೆ ನಿಮ್ಮ ದೇವರಾದ ಯೆಹೋವನು ಆಜ್ಞಾಪಿಸಿದಂತೆಯೇ ನಡೆದುಕೊಳ್ಳಬೇಕು. ಆಗ ನೀವು ಸ್ವತಂತ್ರಿಸಿಕೊಳ್ಳುವ ದೇಶದಲ್ಲಿ ಬಹುಕಾಲ ಸುಕ್ಷೇಮದಿಂದ ಬದುಕಿಕೊಳ್ಳುವಂತೆ, ನಿಮ್ಮ ದೇವರಾದ ಯೆಹೋವನು ಆಜ್ಞಾಪಿಸಿದ ಮಾರ್ಗದಲ್ಲೇ ನಡೆಯಬೇಕು.
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019. Copyright © 2017, 2019 Bridge Connectivity Solutions. Licensed under CC BY-SA 4.0. Source: eBible.org. Typeset from the source files; no intended changes to scripture wording. BibleKenya is not endorsed by the rights holder.
Full source notice & licence · CC BY-SA 4.0 · SourceEdition imported 2026-10-25.