Skip to content
BibleKenya

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

ಧರ್ಮೋ 3

ಅರಸನಾದ ಓಗನ ಅಪಜಯ

ತರುವಾಯ ನಾವು ಹಿಂದಿರುಗಿ ಬಾಷಾನಿನ ಮಾರ್ಗವನ್ನು ಹಿಡಿದು ಮೇಲಕ್ಕೆ ಹೋದಾಗ ಬಾಷಾನಿನ ಅರಸನಾದ ಓಗನು ತನ್ನ ಜನರೆಲ್ಲರ ಸಮೇತ ನಮಗೆ ವಿರುದ್ಧವಾಗಿ ಯುದ್ಧಮಾಡುವುದಕ್ಕೆ ಎದ್ರೈ ಊರಿಗೆ ಹೊರಟುಬಂದನು. ಆಗ ಯೆಹೋವನು ನನಗೆ, “ಅವನಿಗೆ ಭಯಪಡಬೇಡ; ನಾನು ಅವನನ್ನೂ, ಅವನ ಸಮಸ್ತ ಜನರನ್ನೂ ಮತ್ತು ದೇಶವನ್ನೂ ನಿನ್ನ ಕೈವಶಮಾಡಿದ್ದೇನೆ. ನೀನು ಹೆಷ್ಬೋನಿನಲ್ಲಿದ್ದ ಅಮೋರಿಯರ ಅರಸನಾದ ಸೀಹೋನನಿಗೆ ಮಾಡಿದ ಪ್ರಕಾರವೇ ಇವನಿಗೂ ಮಾಡಬೇಕು” ಎಂದು ಆಜ್ಞಾಪಿಸಿದನು.

ಬಾಷಾನಿನ ಅರಸನಾದ ಓಗನೂ ಅವನ ಜನರೆಲ್ಲರೂ ನಮ್ಮಿಂದ ಸೋತುಹೋಗುವಂತೆ ನಮ್ಮ ದೇವರಾದ ಯೆಹೋವನು ಮಾಡಲಾಗಿ ಅವರಲ್ಲಿ ಒಬ್ಬರಾದರೂ ಉಳಿಯದಂತೆ ಅವರನ್ನು ಹತಮಾಡಿದೆವು. ಆ ಕಾಲದಲ್ಲಿ ನಾವು ಅವನ ಎಲ್ಲಾ ಪಟ್ಟಣಗಳನ್ನು ಜಯಿಸಿದೆವು; ನಾವು ಜಯಿಸದೇ ಇದ್ದ ಪಟ್ಟಣವು ಒಂದೂ ಇರಲಿಲ್ಲ. ಬಾಷಾನಿನಲ್ಲಿರುವ ಓಗನ ರಾಜ್ಯದಲ್ಲಿ ಅಂದರೆ ಅರ್ಗೋಬ್ ಎಂಬ ಸಮಸ್ತ ಪ್ರದೇಶದಲ್ಲಿ ಅರವತ್ತು ಪಟ್ಟಣಗಳನ್ನು ತೆಗೆದುಕೊಂಡೆವು. ಅವುಗಳೆಲ್ಲಾ ಎತ್ತರವಾದ ಪೌಳಿಗೋಡೆಗಳಿಂದಲೂ, ಕದಗಳಿಂದಲೂ, ಅಗುಳಿಗಳಿಂದಲೂ ಭದ್ರಮಾಡಲ್ಪಟ್ಟ ಪಟ್ಟಣಗಳೇ. ಅವುಗಳಲ್ಲದೆ ಹಳ್ಳಿಪಳ್ಳಿಗಳು ಬಹಳ ಇದ್ದವು. ನಾವು ಹೆಷ್ಬೋನಿನ ಅರಸನಾದ ಸೀಹೋನನ ಪಟ್ಟಣಗಳಿಗೆ ಮಾಡಿದಂತೆ ಇವುಗಳಿಗೂ ಮಾಡಿದೆವು. ಅವುಗಳಲ್ಲಿದ್ದ ಗಂಡಸರನ್ನೂ, ಹೆಂಗಸರನ್ನೂ ಮತ್ತು ಮಕ್ಕಳನ್ನೂ ಸಂಪೂರ್ಣವಾಗಿ ನಾಶಮಾಡಿದೆವು. ಪಶುಗಳನ್ನು ಮಾತ್ರ ಉಳಿಸಿ ಸ್ವಂತಕ್ಕೆ ತೆಗೆದುಕೊಂಡು ಊರುಗಳನ್ನೆಲ್ಲಾ ಸೂರೆಮಾಡಿಬಿಟ್ಟೆವು.

ಆ ಕಾಲದಲ್ಲಿ ನಾವು ಅರ್ನೋನ್ ನದಿ ಮೊದಲುಗೊಂಡು ಹೆರ್ಮೋನ್ ಪರ್ವತದವರೆಗೂ, ಯೊರ್ದನ್ ನದಿಯ ಈಚೆ ಇರುವ ದೇಶವನ್ನೆಲ್ಲಾ ಅಮೋರಿಯರ ಇಬ್ಬರು ಅರಸರಿಂದ ತೆಗೆದುಕೊಂಡೆವು. (ಹೆರ್ಮೋನ್ ಪರ್ವತಕ್ಕೆ ಚೀದೋನ್ಯರು ಸಿರ್ಯೋನ್ ಎಂದೂ ಮತ್ತು ಅಮೋರಿಯರು ಸೆನೀರ್ ಎಂದೂ ಕರೆಯುತ್ತಿದ್ದರು.) ಹೀಗೆ ಮೀಶೊರೆಂಬ ಎತ್ತರವಾದ ಬೈಲುಸೀಮೆಯ ಎಲ್ಲಾ ಪಟ್ಟಣಗಳನ್ನೂ, ಗಿಲ್ಯಾದ್ ಸೀಮೆಯನ್ನೂ, ಓಗನ ರಾಜ್ಯವಾದ ಸಲ್ಕಾ ಮತ್ತು ಎದ್ರೈ ಎಂಬ ಪಟ್ಟಣಗಳಿಂದ ಕೂಡಿರುವ ಬಾಷಾನ್ ಸೀಮೆಯನ್ನೂ ಸ್ವಾಧೀನಮಾಡಿಕೊಂಡೆವು. (ರೆಫಾಯರೊಳಗೆ ಬಾಷಾನಿನ ಅರಸನಾದ ಓಗನೊಬ್ಬನೇ ಉಳಿದಿದ್ದನು. ಅವನ ಮಂಚ ಕಬ್ಬಿಣದ್ದು; ಅಮ್ಮೋನಿಯರ ರಬ್ಬಾ ಎಂಬ ಪಟ್ಟಣದಲ್ಲಿ ಅದನ್ನು ಈಗಲೂ ನೋಡಬಹುದು. ಪುರುಷನ ಕೈ ಅಳತೆಯ ಪ್ರಕಾರ ಅದರ ಉದ್ದ ಒಂಭತ್ತು ಮೊಳ, ಅಗಲ ನಾಲ್ಕು ಮೊಳ.)

ದೇಶದ ಹಂಚಿಕೆ

ಆ ಕಾಲದಲ್ಲಿ ನಾವು ಆ ದೇಶವನ್ನೆಲ್ಲಾ ಸ್ವಾಧೀನಮಾಡಿಕೊಂಡೆವು. ಅರ್ನೋನ್ ಹಳ್ಳದ ಬಳಿಯಲ್ಲಿರುವ 1ಅರೋಯೇರ್ ಮೊದಲುಗೊಂಡು ಗಿಲ್ಯಾದ್ ಸೀಮೆಯ ಮಧ್ಯದ ವರೆಗೂ ಇರುವ ಪ್ರದೇಶವನ್ನೆಲ್ಲಾ ಅದರ ಪಟ್ಟಣಗಳ ಸಹಿತವಾಗಿ ನಾನು ರೂಬೇನ್ಯರಿಗೂ ಮತ್ತು ಗಾದ್ಯರಿಗೂ ಕೊಟ್ಟೆನು. ಗಿಲ್ಯಾದಿನ ಮಿಕ್ಕ ಭಾಗವನ್ನೂ ಓಗನ ರಾಜ್ಯವಾಗಿದ್ದ ಅರ್ಗೋಬ್ ಎನಿಸಿಕೊಳ್ಳುವ ಸಮಸ್ತ ಬಾಷಾನ್ ದೇಶವನ್ನೂ ಮನಸ್ಸೆ ಕುಲದ ಅರ್ಧ ಜನರಿಗೆ ಕೊಟ್ಟೆನು. (ಬಾಷಾನ್ ದೇಶವು ರೆಫಾಯರ ದೇಶವೆನಿಸಿಕೊಳ್ಳುತ್ತದೆ. ಮನಸ್ಸೆಯ ವಂಶಸ್ಥನಾದ ಯಾಯೀರನು ಗೆಷೂರ್ಯರ ಮತ್ತು ಮಾಕಾತ್ಯರ ಮೇರೆಯವರೆಗೆ ಅರ್ಗೋಬ್ ಎಂಬ ಪ್ರದೇಶವನ್ನೆಲ್ಲಾ ಸ್ವಾಧೀನಮಾಡಿಕೊಂಡನು. ಅವನು ಬಾಷಾನಿಗೆ ಸೇರಿರುವ ಆ ಪ್ರಾಂತ್ಯಕ್ಕೆ 2ಯಾಯೀರನ ಗ್ರಾಮಗಳೆಂದು ತನ್ನ ಹೆಸರಿಟ್ಟನು. ಈ ಹೆಸರು ಇಂದಿನ ವರೆಗೂ ಉಂಟು.) ನಾನು ಗಿಲ್ಯಾದ್ ದೇಶವನ್ನು ಮಾಕೀರನಿಗೂ ಗಿಲ್ಯಾದ್ ಮೊದಲುಗೊಂಡು (ದಕ್ಷಿಣದ) ಅರ್ನೋನ್ ತಗ್ಗಿನ ವರೆಗೂ, (ಪೂರ್ವದ) ಯಬ್ಬೋಕ್ ನದಿಯ ವರೆಗೂ ಇರುವ ಪ್ರದೇಶವನ್ನು ರೂಬೇನ್ಯರಿಗೂ ಮತ್ತು ಗಾದ್ಯರಿಗೂ ಕೊಟ್ಟೆನು. ಅರ್ನೋನ್ ತಗ್ಗಿನ ಮಧ್ಯಭಾಗವೇ ಅವರ (ದಕ್ಷಿಣ) ಮೇರೆ. ಅವರಿಗೂ ಅಮ್ಮೋನಿಯರಿಗೂ ನಡುವೆ ಇರುವ ಯಬ್ಬೋಕ್ ನದಿಯು ಅವರ (ಪೂರ್ವದಿಕ್ಕಿನವರೆಗೆ) ಮೇರೆ. ಅದಲ್ಲದೆ ಆರಾಬಾ ಎಂಬ ತಗ್ಗನ್ನೂ ಅವರಿಗೆ ಕೊಟ್ಟೆನು; ಅದರಲ್ಲಿ ಕಿನ್ನೆರೆತ್ ಸಮುದ್ರದಿಂದ ಪಿಸ್ಗಾ ಬೆಟ್ಟದ ಪಶ್ಚಿಮದಲ್ಲಿರುವ ಅರಾಬದ ಸಮುದ್ರವೆನಿಸಿಕೊಳ್ಳುವ ಲವಣಸಮುದ್ರದ ವರೆಗೆ ಯೊರ್ದನ್ ನದಿಯು ಅವರ (ಪಶ್ಚಿಮದ ವರೆಗೆ) ಮೇರೆ.

ಆ ಕಾಲದಲ್ಲಿ ನಾನು ನಿಮಗೆ, “ನಿಮ್ಮ ದೇವರಾದ ಯೆಹೋವನು ಈ ಪ್ರದೇಶವನ್ನೇ ನಿಮಗೆ ಸ್ವತ್ತಾಗಿ ಕೊಟ್ಟಿದ್ದಾನೆ. ಆದರೆ ನಿಮ್ಮ ಸೈನಿಕರೆಲ್ಲರೂ ಯುದ್ಧಸನ್ನದ್ಧರಾಗಿ ನಿಮ್ಮ ಸಹೋದರರಾದ ಇಸ್ರಾಯೇಲರ ಮುಂದೆ ಹೊರಟು ಹೊಳೆ ದಾಟಿ ಹೋಗಬೇಕು. ನಿಮಗೆ ಬಹಳ ದನಕುರಿಗಳು ಉಂಟೆಂಬುದನ್ನು ನಾನು ಬಲ್ಲೆ. ನಿಮ್ಮ ದೇವರಾದ ಯೆಹೋವನು ಯೊರ್ದನ್ ನದಿಯ ಆಚೆ ನಿಮ್ಮ ಸಹೋದರರಿಗೆ ಕೊಡುವ ದೇಶವು ಅವರಿಗೆ ಸ್ವಾಧೀನವಾಗುವವರೆಗೆ ನಿಮ್ಮ ಹೆಂಡತಿ ಮಕ್ಕಳೂ, ದನಕುರಿಗಳೂ ನಾನು ನಿಮಗೆ ಕೊಟ್ಟಿರುವ ಪಟ್ಟಣಗಳಲ್ಲೇ ಇರಲಿ. ಅನಂತರ ನಿಮ್ಮಂತೆ ನಿಮ್ಮ ಸಹೋದರರಿಗೂ ಯೆಹೋವನಿಂದ ವಿಶ್ರಾಂತಿ ದೊರಕಿದಾಗ ನಿಮ್ಮಲ್ಲಿ ಪ್ರತಿಯೊಬ್ಬನೂ ನಾನು ಕೊಟ್ಟ ಸ್ವತ್ತಿಗೆ ಹಿಂತಿರುಗಿ ಬರಬಹುದು” ಎಂದು ಆಜ್ಞಾಪಿಸಿದೆನು.

ಆ ಕಾಲದಲ್ಲಿ ನಾನು ಯೆಹೋಶುವನಿಗೆ, “ನಿಮ್ಮ ದೇವರಾದ ಯೆಹೋವನು ಆ ಇಬ್ಬರು ಅರಸರಿಗೆ ಮಾಡಿದ್ದನ್ನು ನೀನು ನೋಡೇ ಇದ್ದೀ. ನೀನು ನದಿ ದಾಟಿಹೋಗುವ ಎಲ್ಲಾ ರಾಜ್ಯಗಳನ್ನೂ ಆತನು ಹಾಗೆಯೇ ನಾಶಮಾಡುವನು. ನೀವು ಅವರಿಗೆ ಭಯಪಡಬೇಡಿರಿ; ನಿಮ್ಮ ದೇವರಾದ ಯೆಹೋವನು ತಾನೇ ನಿಮ್ಮ ಪರವಾಗಿ ಯುದ್ಧಮಾಡುವನು” ಎಂದು ಆಜ್ಞಾಪಿಸಿದೆನು.

ಮೋಶೆಯು ಯೊರ್ದನ್ ನದಿಯನ್ನು ದಾಟಲು ನಿಷೇಧವೇರಿದ್ದು

ಆ ಕಾಲದಲ್ಲಿ ನಾನು ಯೆಹೋವನಿಗೆ, “ಕರ್ತನಾದ ಯೆಹೋವನೇ, ನೀನು ನಿನ್ನ ಮಹತ್ವವನ್ನೂ, ಭುಜಬಲವನ್ನೂ ನಿನ್ನ ದಾಸನಿಗೆ ತೋರಿಸಲಾರಂಭಿಸಿದಿ. ನೀನು ನಡಿಸುವ ಈ ಮಹತ್ಕಾರ್ಯಗಳಿಗೆ ಸಮಾನವಾದ ಕಾರ್ಯಗಳನ್ನು ಆಕಾಶದಲ್ಲಾಗಲಿ, ಭೂಮಿಯಲ್ಲಾಗಲಿ ಬೇರೆ ಯಾವ ದೇವರು ನಡೆಸಲಾರನು? ಕರ್ತನೇ, ನಾನೂ ಈ ನದಿಯನ್ನು ದಾಟಿ ಆಚೆಯಿರುವ ಒಳ್ಳೆಯ ದೇಶವನ್ನು ಅಂದರೆ ಆ ಅಂದವಾದ ಬೆಟ್ಟದ ಸೀಮೆಯನ್ನೂ, ಲೆಬನೋನ್ ಪರ್ವತವನ್ನೂ ನೋಡುವುದಕ್ಕೆ ಅಪ್ಪಣೆಯಾಗಲಿ” ಎಂದು ಬಿನ್ನವಿಸಿದೆನು. ಆದರೆ ಯೆಹೋವನು ನಿಮ್ಮ ದೆಸೆಯಿಂದ ನನ್ನ ಮೇಲೆ ಕೋಪವುಳ್ಳವನಾಗಿ ನನ್ನ ಮನವಿಯನ್ನು ಕೇಳದೆ, “ಸಾಕು, ಇದರ ವಿಷಯದಲ್ಲಿ ಇನ್ನು ನನ್ನ ಸಂಗಡ ಮಾತನಾಡಬೇಡ; ನೀನು ಯೊರ್ದನ್ ನದಿಯನ್ನು ದಾಟಬಾರದು. ಆದರೆ ಪಿಸ್ಗಾ ಬೆಟ್ಟವನ್ನು ಹತ್ತಿ ತುದಿಯಲ್ಲಿ ನಿಂತು, ನಾಲ್ಕು ದಿಕ್ಕುಗಳಲ್ಲಿ ಸುತ್ತಲೂ ಇರುವ ದೇಶವನ್ನು ಕಣ್ಣು ತುಂಬಾ ನೋಡಬಹುದು. ಯೆಹೋಶುವನೇ ಈ ಜನರ ನಾಯಕನಾಗಿ ಹೋಗಿ ನೀನು ನೋಡುವ ದೇಶವನ್ನು ಅವರಿಗೆ ಸ್ವಾಧೀನಪಡಿಸುವನು. ಅವನಿಗೆ ಈ ಅಧಿಕಾರವನ್ನು ಕೊಡಬೇಕು; ಅವನು ದೃಢವಾಗುವಂತೆ ಅವನನ್ನು ಧೈರ್ಯಪಡಿಸಬೇಕು” ಎಂದು ಉತ್ತರಕೊಟ್ಟನು.

ಆಗ ನಾವು ಬೇತ್‍ಪೆಗೋರಿಗೆ ಮುಂದೆ ಇದ್ದ ಕಣಿವೆಯಲ್ಲಿ ವಾಸವಾಗಿದ್ದೆವು.

Source notes (2)
  1. Footnote ಅರೋಯೇರ್ ಪಟ್ಟಣದ ಉತ್ತರ ಭಾಗ ಮೊದಲುಗೊಂಡು.
  2. Footnote ಅರಣ್ಯ 32:41 ನೋಡಿರಿ.

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019. Copyright © 2017, 2019 Bridge Connectivity Solutions. Licensed under CC BY-SA 4.0. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.