Skip to content
BibleKenya

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

ಧರ್ಮೋ 19

ಆಶ್ರಯ ನಗರಗಳು

ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶದ ಜನಾಂಗಗಳನ್ನು ಆತನು ನಾಶಮಾಡಿ ಬಿಟ್ಟ ತರುವಾಯ, ನೀವು ಆ ದೇಶವನ್ನು ಸ್ವಾಧೀನಮಾಡಿಕೊಂಡು ಅವರ ಗ್ರಾಮಗಳಲ್ಲಿಯೂ, ಮನೆಗಳಲ್ಲಿಯೂ ವಾಸವಾಗಿರುವಾಗ, ಆ ನಿಮ್ಮ ದೇಶದ ಮಧ್ಯದಲ್ಲಿ ನೀವು ಮೂರು ಆಶ್ರಯ ನಗರಗಳನ್ನು ಗೊತ್ತುಮಾಡಬೇಕು. ನರಹತ್ಯಮಾಡಿದವರು ಆ ನಗರಗಳಿಗೆ ಓಡಿಹೊಗುವುದಕ್ಕೆ ಅನುಕೂಲವಾಗುವಂತೆ ನೀವು ಅವುಗಳ 1ದಾರಿಗಳನ್ನು ಸರಿಪಡಿಸಬೇಕು. ಮತ್ತು ನಿಮ್ಮ ದೇವರಾದ ಯೆಹೋವನು ನಿಮಗೆ ಸ್ವದೇಶವಾಗುವುದಕ್ಕೆ ಕೊಡುವ ಆ ದೇಶವನ್ನು ಮೂರು ಭಾಗ ಮಾಡಬೇಕು.

ಆ ನಗರಗಳ ವಿವರ ಹೀಗಿದೆ, ಯಾವನಾದರೂ ದ್ವೇಷವಿಲ್ಲದೆ ಕೈತಪ್ಪಿ ಮತ್ತೊಬ್ಬನನ್ನು ಕೊಂದರೆ ಅವನು ಆ ಪಟ್ಟಣಗಳಲ್ಲಿ ಒಂದಕ್ಕೆ ಓಡಿಹೋಗಿ ಬದುಕಿಕೊಳ್ಳಬಹುದು. ಉದಾಹರಣೆ, ಒಬ್ಬ ಮನುಷ್ಯನು ಕಟ್ಟಿಗೆಯನ್ನು ಕಡಿಯಬೇಕೆಂದು ಮತ್ತೊಬ್ಬನ ಜೊತೆಯಲ್ಲಿ ಅಡವಿಗೆ ಹೋಗಿ, ಅಲ್ಲಿ ಒಂದು ಮರವನ್ನು ಕಡಿಯಬೇಕೆಂದು ಕೊಡಲಿಯಿಂದ ಹೊಡೆಯುತ್ತಿರುವಾಗ, ಕೊಡಲಿಯು ಕಾವಿನಿಂದ ಜಾರಿ ಆ ಮತ್ತೊಬ್ಬನಿಗೆ ತಗಲಿದ್ದರಿಂದ ಅವನು ಸತ್ತರೆ, ಹೊಡೆದವನು ಆ ಪಟ್ಟಣಗಳಲ್ಲಿ ಒಂದಕ್ಕೆ ಓಡಿಹೋಗಿ ಬದುಕಿಕೊಳ್ಳಬಹುದು. ಸತ್ತವನ ಮೇಲೆ ಅವನಿಗೆ ಮೊದಲು ದ್ವೇಷವಿಲ್ಲದ್ದರಿಂದ ಮತ್ತು ಅವನನ್ನು ಸಾಯಿಸುವ ಉದ್ದೇಶವಿಲ್ಲದ ಕಾರಣ ಮರಣಶಿಕ್ಷೆಗೆ ಪಾತ್ರನಲ್ಲ. ಆದರೂ ಹತ್ಯಮಾಡಿದವನಿಗೆ ಮುಯ್ಯಿತೀರಿಸುವ ಹಂಗುಳ್ಳ ಸಮೀಪ ಬಂಧುವು ಇನ್ನು ಕೋಪದಿಂದ ಉರಿಯುತ್ತಿರುವಾಗಲೇ ಅವನನ್ನು ಹಿಂದಟ್ಟಿ ಹೋಗಬಹುದು ಮತ್ತು ಮಾರ್ಗ ದೂರವಾಗಿರುವ ಪಕ್ಷಕ್ಕೆ ಅವನನ್ನು ಹಿಡಿದು ಕೊಂದು ಹಾಕಿಬಿಡಬಹುದು. ಈ ಕಾರಣದಿಂದ ನೀವು ಮೂರು ಆಶ್ರಯ ನಗರಗಳನ್ನು ಗೊತ್ತುಮಾಡಬೇಕೆಂದು ಆಜ್ಞಾಪಿಸಿದ್ದೇನೆ.

ಯೆಹೋವನು ನಿಮ್ಮ ಪೂರ್ವಿಕರಿಗೆ ವಾಗ್ದಾನಮಾಡಿದಂತೆ ನಿಮ್ಮ ರಾಜ್ಯವನ್ನು ವಿಸ್ತರಿಸಿ, ತಾನು ನಿಮ್ಮ ಪೂರ್ವಿಕರಿಗೆ ಸೂಚಿಸಿದ ಪ್ರದೇಶವನ್ನೆಲ್ಲಾ ಕೊಡುವಾಗ, ಇನ್ನೂ ಮೂರು ನಗರಗಳನ್ನು ನಿಮಗಾಗಿ ಗೊತ್ತುಮಾಡಬೇಕು. ನಾನು ಈಗ ನಿಮಗೆ ಬೋಧಿಸುವ ಈ ಧರ್ಮೋಪದೇಶವನ್ನೆಲ್ಲಾ ನೀವು ಅನುಸರಿಸುವವರಾಗಿ, ನಿಮ್ಮ ದೇವರಾದ ಯೆಹೋವನನ್ನು ಪ್ರೀತಿಸಿ, ಆತನು ಹೇಳುವ ಮಾರ್ಗದಲ್ಲೇ ಯಾವಾಗಲೂ ನಡೆಯುವುದಾದರೆ, ಆಗ ಯೆಹೋವನು ಈ ಮೂರು ನಗರಗಳನ್ನು ನಿಮಗೆ ಕೊಡುವನು. ನಿಮ್ಮ ದೇವರಾದ ಯೆಹೋವನು ನಿಮಗೆ ಸ್ವದೇಶವಾಗುವುದಕ್ಕೆ ಕೊಡುವ ದೇಶದಲ್ಲಿ ನಿರಪರಾಧಿಗೆ ಮರಣಶಿಕ್ಷೆಯಾಗದಂತೆ; ಆ ದೋಷವು ನಿಮ್ಮದಾಗದಂತೆ ನೀವು ಹೀಗೆ ಮಾಡಬೇಕು.

ಆದರೆ ಯಾವನಾದರೂ ಒಬ್ಬನಲ್ಲಿ ದ್ವೇಷವನ್ನೇ ಇಟ್ಟು ಸಮಯನೋಡಿಕೊಂಡು, ಅವನ ಮೇಲೆ ಬಿದ್ದು ಅವನನ್ನು ಹೊಡೆದು ಕೊಂದ ತರುವಾಯ ಈ ಪಟ್ಟಣಗಳಲ್ಲಿ ಒಂದಕ್ಕೆ ಓಡಿಹೋದರೆ, ಅವನ ಊರಿನ ಹಿರಿಯರು ಅವನನ್ನು ಅಲ್ಲಿಂದ ಹಿಡಿದು ತರಿಸಿ ಅವನಿಗೆ ಮರಣಶಿಕ್ಷೆಯಾಗುವಂತೆ ಮುಯ್ಯಿತೀರಿಸುವ ಹಂಗುಳ್ಳವನ ಕೈಗೆ ಒಪ್ಪಿಸಬೇಕು. ನೀವು ಅವನನ್ನು ಕನಿಕರಿಸಬಾರದು. ನಿಮಗೆ ಶುಭವುಂಟಾಗುವಂತೆ ನಿರಪರಾಧಿಯ ಪ್ರಾಣವನ್ನು ತೆಗೆದವನನ್ನು ಇಸ್ರಾಯೇಲರಲ್ಲಿ ಉಳಿಯದಂತೆ ಮಾಡಬೇಕು.

ಮೇರೆಯನ್ನು ಸರಿಸಕೂಡದೆಂಬ ಕ್ರಮ

ನಿಮ್ಮ ದೇವರಾದ ಯೆಹೋವನು ನಿಮಗೆ ಸ್ವದೇಶವಾಗುವುದಕ್ಕೆ ಕೊಡುವ ದೇಶದಲ್ಲಿ ನಿಮ್ಮ ಪಾಲಿಗೆ ಬಂದ ಸ್ವತ್ತಿನಲ್ಲಿ ನೆರೆಯವನ ಭೂಮಿಯ ಹಿಂದಿನ ಕಾಲದ ಗಡಿಯನ್ನು ಒತ್ತಬಾರದು.

ಒಂದೇ ಸಾಕ್ಷಿ ಸಾಲದು ಎಂಬ ನಿಯಮ

ಯಾವ ದೋಷದ ಅಥವಾ ಅಪರಾಧದ ವಿಷಯದಲ್ಲೂ ಒಬ್ಬನೇ ಒಬ್ಬನ ಸಾಕ್ಷಿಯನ್ನು ನೀವು ಅಂಗೀಕರಿಸಬಾರದು. ನಡೆದ ಸಂಗತಿ ರುಜುವಾತಾಗುವುದಕ್ಕೆ ಇಬ್ಬರ ಇಲ್ಲವೆ ಮೂವರ ಸಾಕ್ಷಿಗಳು ಬೇಕು.

ಸುಳ್ಳು ಸಾಕ್ಷಿಯನ್ನು ಹೇಳಿದವನಿಗೆ ಶಿಕ್ಷೆ

ಯಾವನಾದರೂ ನ್ಯಾಯವಿರುದ್ಧವಾಗಿ ಬಂದು ಮತ್ತೊಬ್ಬನನ್ನು ಅಪರಾಧಿ ಎಂದು ಸಾಕ್ಷಿಹೇಳಿದರೆ, ವ್ಯಾಜ್ಯವಾಡುವ ಆ ಇಬ್ಬರೂ ಯೆಹೋವನ ಸನ್ನಿಧಿಯಲ್ಲಿ ಯಾಜಕರ ಮುಂದೆಯೂ, ಆಗ ಇರುವ ನ್ಯಾಯಾಧಿಪತಿಗಳ ಮುಂದೆಯೂ ನಿಲ್ಲಬೇಕು. ನ್ಯಾಯಾಧಿಪತಿಗಳು ಚೆನ್ನಾಗಿ ವಿಚಾರಣೆ ಮಾಡಿದ ಮೇಲೆ ಆ ಮನುಷ್ಯನ ಸಾಕ್ಷಿ ಸುಳ್ಳೆಂದು ತೋರಿಬಂದರೆ, ಅವನು ಆ ಮತ್ತೊಬ್ಬನಿಗೆ ಕೊಡಿಸಬೇಕೆಂದಿದ್ದ ಶಿಕ್ಷೆಯನ್ನು ಅವನಿಗೆ ವಿಧಿಸಬೇಕು. ಹೀಗೆ ನೀವು ಆ ದುಷ್ಟತ್ವವನ್ನು ನಿಮ್ಮ ಮಧ್ಯದೊಳಗಿಂದ ತೆಗೆದುಹಾಕಬೇಕು. ಉಳಿದವರು ಆ ಸಂಗತಿಯನ್ನು ಕೇಳಿ ಭಯಪಟ್ಟು ಇನ್ನು ಮುಂದೆ ಅಂಥ ದುಷ್ಟತ್ವವನ್ನು ನಡೆಸುವುದಿಲ್ಲ. ನೀವು ಅಂಥವರನ್ನು ಕನಿಕರಿಸಬಾರದು; ಪ್ರಾಣಕ್ಕೆ ಪ್ರತಿಯಾಗಿ ಪ್ರಾಣವನ್ನೂ, ಕಣ್ಣಿಗೆ ಪ್ರತಿಯಾಗಿ ಕಣ್ಣನ್ನೂ, ಹಲ್ಲಿಗೆ ಪ್ರತಿಯಾಗಿ ಹಲ್ಲನ್ನೂ, ಕೈಗೆ ಪ್ರತಿಯಾಗಿ ಕೈಯನ್ನೂ ಮತ್ತು ಕಾಲಿಗೆ ಪ್ರತಿಯಾಗಿ ಕಾಲನ್ನೂ ತೆಗೆದುಬಿಡಬೇಕು.

Source notes (1)
  1. Footnote ಅಥವಾ ದೂರವನ್ನು ಅಳತೆ ಮಾಡು.

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019. Copyright © 2017, 2019 Bridge Connectivity Solutions. Licensed under CC BY-SA 4.0. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.