Skip to content
BibleKenya

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಸಮು 16

ದಾವೀದನ ರಾಜ್ಯಾಭಿಷೇಕ

ಯೆಹೋವನು ಸಮುವೇಲನಿಗೆ, “ನಾನು ಸೌಲನನ್ನು ಇಸ್ರಾಯೇಲರ ಅರಸನಾಗಿರುವುದಕ್ಕೆ ಯೋಗ್ಯನಲ್ಲವೆಂದು ತಳ್ಳಿಬಿಟ್ಟಿದ್ದೇನಲ್ಲಾ; ನೀನು ಅವನಿಗೋಸ್ಕರ ಎಷ್ಟರವರೆಗೆ ದುಃಖಿಸುತ್ತಿರುವಿ? ಕೊಂಬಿನಲ್ಲಿ ಎಣ್ಣೆಯಿಂದ ತುಂಬಿಸಿಕೊಂಡು ಬಾ; ನಾನು ನಿನ್ನನ್ನು ಬೇತ್ಲೆಹೇಮಿನವನಾದ ಇಷಯನ ಬಳಿಗೆ ಕಳುಹಿಸುತ್ತೇನೆ; 1ಅವನ ಮಕ್ಕಳಲ್ಲೊಬ್ಬನನ್ನು ಅರಸನನ್ನಾಗಿ ಆರಿಸಿಕೊಂಡಿದ್ದೇನೆ” ಎಂದು ಹೇಳಿದನು. ಅದಕ್ಕೆ ಸಮುವೇಲನು, “ನಾನು ಹೋಗುವುದು ಹೇಗೆ? ಇದು ಸೌಲನಿಗೆ ಗೊತ್ತಾದರೆ ಅವನು ನನ್ನನ್ನು ಕೊಂದುಹಾಕುವನಲ್ಲವೇ” ಎಂದನು. ಅದಕ್ಕೆ ಯೆಹೋವನು, “ನೀನು ಒಂದು ಕರುವನ್ನು ತೆಗೆದುಕೊಂಡು ಹೋಗಿ ಯೆಹೋವನಿಗೋಸ್ಕರ ಯಜ್ಞಮಾಡುವುದಕ್ಕೆ ಬಂದಿದ್ದೇನೆಂದು ಹೇಳಿ ಇಷಯನನ್ನು ಅದಕ್ಕಾಗಿ ಕರೆ. ಆ ನಂತರ ನೀನು ಮಾಡಬೇಕಾದದ್ದನ್ನು ನಾನೇ ನಿನಗೆ ತಿಳಿಸುತ್ತೇನೆ. ನಾನು ಯಾರನ್ನು ತೋರಿಸುತ್ತೇನೋ, ಅವನನ್ನು ನೀನು ಅಭಿಷೇಕಿಸಬೇಕು” ಎಂದನು. ಯೆಹೋವನು ಹೇಳಿದಂತೆಯೇ ಸಮುವೇಲನು ಬೇತ್ಲೆಹೇಮಿಗೆ ಹೋದನು. ಆ ಊರಿನ ಹಿರಿಯರು ನಡುಗುತ್ತಾ ಬಂದು ಅವನನ್ನು ಎದುರುಗೊಂಡು “ನಿನ್ನ ಆಗಮನವು ನಮಗೆ ಶುಭಕರವಾಗಿದೆಯೇ?” ಎಂದು ಕೇಳಲು ಅವನು, “ಹೌದು, ಶುಭಕರವಾಗಿದೆ; ಯೆಹೋವನಿಗೆ ಯಜ್ಞವನ್ನರ್ಪಿಸುವುದಕ್ಕೆ ಬಂದಿದ್ದೇನೆ. ನೀವು ನಿಮ್ಮನ್ನು ಶುದ್ಧಪಡಿಸಿಕೊಂಡು ನನ್ನ ಜೊತೆಯಲ್ಲಿ ಯಜ್ಞಕ್ಕೆ ಬನ್ನಿರಿ” ಎಂದು ಹೇಳಿ ಇಷಯನನ್ನೂ, ಅವನ ಮಕ್ಕಳನ್ನೂ ಶುದ್ಧೀಕರಿಸಿ ಅವರನ್ನೂ ಯಜ್ಞಕ್ಕೆ ಕರೆದನು. ಅವರು ಬರಲು ಅವನು ಎಲೀಯಾಬನನ್ನು ನೋಡಿ, ನಿಶ್ಚಯವಾಗಿ ಯೆಹೋವನು ಅಭಿಷೇಕಕ್ಕೆ ಆರಿಸಿಕೊಂಡವನು ಆತನ ಮುಂದೆ ಇದ್ದಾನೆ ಎಂದುಕೊಂಡನು. ಆದರೆ ಯೆಹೋವನು ಸಮುವೇಲನಿಗೆ, “2ನೀನು ಅವನ ಸೌಂದರ್ಯವನ್ನೂ, ಎತ್ತರವನ್ನೂ ನೋಡಬೇಡ; ನಾನು ಅವನನ್ನು ನಿರಾಕರಿಸಿದ್ದೇನೆ. ಯೆಹೋವನು ಮನುಷ್ಯರಂತೆ ಹೊರಗಿನ ತೋರಿಕೆಯನ್ನು ನೋಡದೆ 3ಹೃದಯದ ಮತ್ತು ಅಂತರಂಗದ ಸೌಂದರ್ಯ ನೋಡುವವನಾಗಿದ್ದಾನೆ” ಅಂದನು. ಇಷಯನು ಅಬೀನಾದಾಬನನ್ನು ಸಮುವೇಲನ ಬಳಿಗೆ ಬರಮಾಡಲು ಸಮುವೇಲನು, “ಯೆಹೋವನು ಇವನನ್ನು ಆರಿಸಿಕೊಳ್ಳಲಿಲ್ಲ” ಎಂದನು. ತರುವಾಯ ಇಷಯನು ಶಮ್ಮನನ್ನು ಬರಮಾಡಲು ಸಮುವೇಲನು, “ಯೆಹೋವನು ಇವನನ್ನೂ ಆರಿಸಿಕೊಳ್ಳಲಿಲ್ಲ” ಎಂದು ಹೇಳಿದನು. ಹೀಗೆ ಇಷಯನು ತನ್ನ ಮಕ್ಕಳಲ್ಲಿ ಏಳು ಮಂದಿಯನ್ನು ಸಮುವೇಲನ ಬಳಿಗೆ ಬರಮಾಡಿದರೂ ಅವನು, “ಯೆಹೋವನು ಇವರನ್ನು ಆರಿಸಿಕೊಳ್ಳಲಿಲ್ಲ” ಎಂದು ನುಡಿದನು. ಅನಂತರ ಸಮುವೇಲನು ಇಷಯನನ್ನು, “ನಿನ್ನ ಮಕ್ಕಳೆಲ್ಲಾ ಇಷ್ಟೇ ಮಂದಿಯೋ” ಎಂದು ಕೇಳಲು ಅವನು, “ಇವರೆಲ್ಲರಿಗಿಂತಲೂ ಚಿಕ್ಕವನು ಒಬ್ಬನಿರುತ್ತಾನೆ; ಅವನು ಕುರಿಮೇಯಿಸುವುದಕ್ಕೆ ಹೋಗಿದ್ದಾನೆ” ಎಂದು ಉತ್ತರಕೊಟ್ಟನು. ಆಗ ಸಮುವೇಲನು, “ಅವನನ್ನು ಕರೆದುಕೊಂಡು ಬರಲು ತಿಳಿಸು; ಅವನು ಬರುವವರೆಗೂ ನಾವು ಊಟಕ್ಕೆ ಕುಳಿತುಕೊಳ್ಳಬಾರದು” ಎಂದು ಹೇಳಲು ಇಷಯನು ಅವನನ್ನು ಕರೆದು ಕರೆದುಕೊಂಡು ಬರಲು ತಿಳಿಸಿದನು. ಅವನು ಕೆಂಪುಬಣ್ಣದವನೂ, ಸುಂದರನೇತ್ರನೂ, ನೋಡುವುದಕ್ಕೆ ರಮಣೀಯನೂ ಆಗಿದ್ದನು. ಯೆಹೋವನು ಸಮುವೇಲನಿಗೆ, “ಎದ್ದು ಇವನನ್ನು ಅಭಿಷೇಕಿಸು; ನಾನು ಆರಿಸಿಕೊಂಡವನು ಇವನೇ” ಎಂದು ಆಜ್ಞಾಪಿಸಲು ಸಮುವೇಲನು ಎಣ್ಣೆಯ ಕೊಂಬನ್ನು ತೆಗೆದುಕೊಂಡು ಅವನನ್ನು, ಅವನ ಸಹೋದರರ ಮಧ್ಯದಲ್ಲೇ ಅಭಿಷೇಕಿಸಿದನು. 4ಕೂಡಲೆ ಯೆಹೋವನ ಆತ್ಮವು ದಾವೀದನ ಮೇಲೆ ಬಂದು ನೆಲೆಗೊಂಡಿತು. ಅನಂತರ ಸಮುವೇಲನು ರಾಮಕ್ಕೆ ಹೊರಟುಹೋದನು.

ಸೌಲನ ಆಸ್ಥಾನದಲ್ಲಿ ದಾವೀದನು

ಯೆಹೋವನ ಆತ್ಮವು ಸೌಲನನ್ನು ಬಿಟ್ಟು ಹೋಯಿತು; ಯೆಹೋವನು ಕಳುಹಿಸಿದ ದುರಾತ್ಮವು ಬಂದು ಅವನನ್ನು ಪೀಡಿಸುತ್ತಿದ್ದರಿಂದ ಅವನ ಸೇವಕರು ಅವನಿಗೆ, “ಇಗೋ, ದೇವರಿಂದ ಬಂದ ದುರಾತ್ಮವು ನಿನ್ನನ್ನು ಪೀಡಿಸುತ್ತಾ ಇದೆ. ಸ್ವಾಮೀ, ಅಪ್ಪಣೆಯಾಗಲಿ; ನಿನ್ನ ಸನ್ನಿಧಿಯಲ್ಲಿ ನಿಂತಿರುವ ನಿನ್ನ ಸೇವಕರಾದ ನಾವು ಹೋಗಿ ಕಿನ್ನರಿ ನುಡಿಸುವುದರಲ್ಲಿ ನಿಪುಣನಾದ ಒಬ್ಬನನ್ನು ಹುಡುಕಿ ತರುತ್ತೇನೆ. ಯೆಹೋವನಿಂದ ಕಳುಹಿಸಲ್ಪಟ್ಟ ದುರಾತ್ಮವು ನಿನ್ನ ಮೇಲೆ ಬರುವಾಗ 5ಅವನು ಕಿನ್ನರಿ ನುಡಿಸಿದರೆ ನಿನಗೆ ಉಪಶಮನವಾಗುವುದು” ಎಂದು ಹೇಳಿದರು. ಸೌಲನು ಅವರಿಗೆ, “ಚೆನ್ನಾಗಿ ನುಡಿಸಬಲ್ಲವನಾದ ಒಬ್ಬನನ್ನು ನನಗೋಸ್ಕರ ಹುಡುಕಿ ಕರೆದುಕೊಂಡು ಬನ್ನಿರಿ” ಎಂದು ಆಜ್ಞಾಪಿಸಿದನು. ಸೇವಕರಲ್ಲೊಬ್ಬನು ಅವನಿಗೆ, “ಬೇತ್ಲೆಹೇಮಿನವನಾದ ಇಷಯನ ಮಗನನ್ನು ನೋಡಿದ್ದೇನೆ; ಅವನು ಚೆನ್ನಾಗಿ ಕಿನ್ನರಿ ನುಡಿಸಬಲ್ಲವನೂ, ಪರಾಕ್ರಮಶಾಲಿಯೂ, ಯುದ್ಧ ನಿಪುಣನೂ, ವಾಕ್ಚತುರನೂ, ಸುಂದರನೂ, ಯೆಹೋವನ ಅನುಗ್ರಹವನ್ನು ಹೊಂದಿದವನೂ ಆಗಿದ್ದಾನೆ” ಎಂದು ತಿಳಿಸಿದನು. ಕೂಡಲೆ ಸೌಲನು ಇಷಯನ ಬಳಿಗೆ ದೂತರನ್ನು ಕಳುಹಿಸಿ ಅವನಿಗೆ, “ಕುರಿಗಳನ್ನು ಮೇಯಿಸುತ್ತಿರುವ ನಿನ್ನ ಮಗನಾದ ದಾವೀದನನ್ನು ನನ್ನ ಬಳಿಗೆ ಕಳುಹಿಸು” ಎಂದು ಹೇಳಿಸಿದನು. ಇಷಯನು ರೊಟ್ಟಿಯನ್ನೂ, ಒಂದು ಬುದ್ದಲಿ ದ್ರಾಕ್ಷಾರಸವನ್ನೂ, ಒಂದು ಹೋತಮರಿಯನ್ನೂ, ಕತ್ತೆಯ ಮೇಲೆ ಹೇರಿಸಿ ತನ್ನ ಮಗನಾದ ದಾವೀದನ ಮುಖಾಂತರ ಸೌಲನಿಗೆ ಕಳುಹಿಸಿದನು. ಹೀಗೆ ದಾವೀದನು ಸೌಲನ ಬಳಿಗೆ ಬಂದು ಅವನ ಸೇವಕನಾದನು. ಸೌಲನು ಅವನನ್ನು ಬಹಳವಾಗಿ ಪ್ರೀತಿಸಿ ತನ್ನ ಆಯುಧಗಳನ್ನು ಹೊರುವುದಕ್ಕೆ ನೇಮಿಸಿಕೊಂಡನು. ತರುವಾಯ ಸೌಲನು ಇಷಯನ ಬಳಿಗೆ ದೂತರನ್ನು ಕಳುಹಿಸಿ ಅವನಿಗೆ, “ನಾನು ದಾವೀದನನ್ನು ಮೆಚ್ಚಿದ್ದೇನೆ; ಅವನು ನನ್ನ ಸನ್ನಿಧಿಯಲ್ಲಿ ಸೇವೆಮಾಡಲಿ” ಎಂದು ತಿಳಿಸಿದನು. ದೇವರಿಂದ ಕಳುಹಿಸಲ್ಪಟ್ಟ ದುರಾತ್ಮವು ಸೌಲನ ಮೇಲೆ ಬಂದಾಗ ದಾವೀದನು ಕಿನ್ನರಿಯನ್ನು ನುಡಿಸುವನು; ಅದರಿಂದ ದುರಾತ್ಮವು ಸೌಲನನ್ನು ಬಿಟ್ಟುಹೋಗುವುದು; ಅವನು ಉಪಶಮನಹೊಂದಿ ಚೆನ್ನಾಗಿರುತ್ತಿದ್ದನು.

Source notes (5)
  1. Footnote ಕೀರ್ತ 78:70.
  2. Footnote ಕೀರ್ತ 10:11.
  3. Footnote 1ಪೂರ್ವ 28:9.
  4. Footnote ನ್ಯಾಯ 3:10.
  5. Footnote 2 ಅರಸು. 3:15.

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019. Copyright © 2017, 2019 Bridge Connectivity Solutions. Licensed under CC BY-SA 4.0. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.