Skip to content
BibleKenya

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಅರಸು 10

ಶೆಬಾ ದೇಶದ ರಾಣಿಯು ಸೊಲೊಮೋನನ ದರ್ಶನಕ್ಕೆ ಬಂದದ್ದು

ಯೆಹೋವನ ನಾಮಮಹತ್ತಿನಿಂದ ಸೊಲೊಮೋನನಿಗುಂಟಾದ ಕೀರ್ತಿಯನ್ನು ಕುರಿತು ಶೆಬೆದ ರಾಣಿಯು ಕೇಳಿ, ಅವನನ್ನು ಒಗಟುಗಳಿಂದ ಪರೀಕ್ಷಿಸುವುದಕ್ಕಾಗಿ ಬಂದಳು. ಆಕೆಯು ಸುಗಂಧದ್ರವ್ಯ, ಅಪರಿಮಿತವಾದ ಬಂಗಾರ, ರತ್ನ ಇವುಗಳನ್ನು ಒಂಟೆಗಳ ಮೇಲೆ ಹೇರಿಸಿಕೊಂಡು, ಮಹಾಪರಿವಾರದೊಡನೆ ಯೆರೂಸಲೇಮಿಗೆ ಬಂದು ತನ್ನ ಮನಸ್ಸಿನಲ್ಲಿ ಗೊತ್ತುಮಾಡಿಕೊಂಡಿದ್ದ ಎಲ್ಲಾ ವಿಷಯಗಳನ್ನು ಕುರಿತು ಸೊಲೊಮೋನನೊಡನೆ ಸಂಭಾಷಿಸಿದಳು. ಸೊಲೊಮೋನನು ಆಕೆಯ ಎಲ್ಲಾ ಪ್ರಶ್ನೆಗಳಿಗೂ ಉತ್ತರಕೊಟ್ಟನು. ಅವುಗಳಲ್ಲಿ ಸೊಲೊಮೋನನಿಗೆ ತಿಳಿಯದಂಥದ್ದು ಒಂದೂ ಇರಲಿಲ್ಲವಾದುದರಿಂದ ಅವನು ಅವೆಲ್ಲವುಗಳಿಗೆ ಉತ್ತರಕೊಟ್ಟನು. ಶೆಬೆದ ರಾಣಿಯು ಸೊಲೊಮೋನನ ಎಲ್ಲಾ ಜ್ಞಾನ, ಅವನು ಕಟ್ಟಿಸಿದ ಅರಮನೆ, ಅವನ ಭೋಜನಪೀಠದ ಆಹಾರ, ಆ ಪೀಠದ ಸುತ್ತಲಿರುವ ಉದ್ಯೋಗಸ್ಥರ ಆಸನಗಳು, ಅವನ ಪರಿಚಾರಕರ ಸೇವಾಕ್ರಮ, ಅವರ ಉಡುಪುಗಳು, ಅವನ ಪಾನಕಗಳು ಇವುಗಳನ್ನೂ ಮತ್ತು ಅವನು ಯೆಹೋವನ ಆಲಯದಲ್ಲಿ ಸಮರ್ಪಿಸುತ್ತಿದ್ದ ಸರ್ವಾಂಗಹೋಮಗಳನ್ನೂ ನೋಡಿದಾಗ ವಿಸ್ಮಿತಳಾಗಿ ಹೋದಳು. ಅವಳು ಅರಸನಿಗೆ, “ನಾನು ನನ್ನ ದೇಶದಲ್ಲಿ ನಿನ್ನ ಜ್ಞಾನವನ್ನು, ಕೃತ್ಯಗಳನ್ನೂ ಕುರಿತು ಕೇಳಿದ್ದು ಸತ್ಯವಾಗಿದೆ. ನಾನಾಗಿ ಇಲ್ಲಿಗೆ ಬಂದು ಕಣ್ಣಾರೆ ನೋಡುವುದಕ್ಕಿಂತ ಮೊದಲು ಜನರು ಹೇಳಿದ ಸುದ್ದಿಯನ್ನು ನಂಬಿರಲಿಲ್ಲ. ಈಗ ಇಲ್ಲಿ ಬಂದು ನೋಡಿದರೆ ನಿನ್ನ ಜ್ಞಾನವೈಭವಗಳು ನಾನು ಕೇಳಿದ್ದಕ್ಕಿಂತ ಹೆಚ್ಚಾಗಿವೆ. ಜನರು ಇದರಲ್ಲಿ ಅರ್ಧವನ್ನಾದರೂ ಹೇಳಲಿಲ್ಲ. ನಿನ್ನ ಪ್ರಜೆಗಳು ಸದಾ ನಿನ್ನ ಮುಂದೆ ನಿಂತುಕೊಂಡು ನಿನ್ನ ಜ್ಞಾನವಾಕ್ಯಗಳನ್ನು ಕೇಳುವ ನಿನ್ನ ಸೇವಕರು ಧನ್ಯರು. ನಿನ್ನನ್ನು ಮೆಚ್ಚಿ ಇಸ್ರಾಯೇಲ್ ಸಿಂಹಾಸನದ ಮೇಲೆ ಕುಳ್ಳಿರಿಸಿದ ನಿನ್ನ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ. ಆತನು ಇಸ್ರಾಯೇಲರನ್ನು ಸದಾ ಪ್ರೀತಿಸುವವನಾದುದರಿಂದ ಅವರ ನೀತಿನ್ಯಾಯಗಳನ್ನು ಸ್ಥಾಪಿಸುವುದಕ್ಕೋಸ್ಕರ ನಿನ್ನನ್ನೇ ಅರಸನನ್ನಾಗಿ ನೇಮಿಸಿದ್ದಾನೆ” ಎಂದು ಹೇಳಿದಳು. ಆಕೆಯು ಅರಸನಿಗೆ 1ನೂರಿಪ್ಪತ್ತು ತಲಾಂತು ಬಂಗಾರವನ್ನೂ, ಅಪರಿಮಿತ ಸುಗಂಧದ್ರವ್ಯವನ್ನೂ ಮತ್ತು ರತ್ನಗಳನ್ನೂ ಕೊಟ್ಟಳು. ಶೆಬೆದ ರಾಣಿಯು ಅರಸನಾದ ಸೊಲೊಮೋನನಿಗೆ ಕೊಟ್ಟಷ್ಟು ಸುಗಂಧದ್ರವ್ಯವನ್ನು ಅವನಿಗೆ ಪುನಃ ಯಾರು ಕೊಡಲಿಲ್ಲ. ಬರಲೇ ಇಲ್ಲ.

ಹೀರಾಮನ ಹಡಗುಗಳು ಓಫೀರ್ ದೇಶದಿಂದ ಬಂಗಾರದ ಹೊರತಾಗಿ ಸುಗಂಧದ ಮರವನ್ನೂ ಮತ್ತು ರತ್ನಗಳನ್ನೂ ರಾಶಿ ರಾಶಿಯಾಗಿ ತಂದವು. ಅರಸನು ಸುಗಂಧದ ಮರದಿಂದ ಯೆಹೋವನ ಆಲಯ ಮತ್ತು ಅರಮನೆ ಇವುಗಳಿಗೆ ಸ್ತಂಭಗಳನ್ನು, ಗಾಯಕರಿಗೋಸ್ಕರ ಕಿನ್ನರಿಗಳನ್ನೂ, ಸ್ವರಮಂಡಲಗಳನ್ನೂ ಮಾಡಿಸಿದನು. ಆಗ ಬಂದಷ್ಟು ಸುಗಂಧದ ಮರವು ಇಂದಿನ ವರೆಗೂ ಆ ದೇಶಕ್ಕೆ ಬರಲಿಲ್ಲ ಮತ್ತು ಕಾಣಲಿಲ್ಲ. ಅರಸನಾದ ಸೊಲೊಮೋನನು ಶೆಬೆದ ರಾಣಿಗೆ ತಾನಾಗಿ ರಾಜಮರ್ಯಾದೆಯಿಂದ ಕೊಟ್ಟ ವಸ್ತುಗಳಲ್ಲದೆ ಆಕೆಯು ಕೇಳಿದವುಗಳೆಲ್ಲವನ್ನು ಕೊಟ್ಟುಬಿಟ್ಟನು. ಅನಂತರ ಆಕೆಯು ತನ್ನ ಪರಿವಾರದೊಡನೆ ಸ್ವದೇಶಕ್ಕೆ ಹೊರಟುಹೋದಳು.

ಸೊಲೊಮೋನನ ವೈಭವ

ಸೊಲೊಮೋನನಿಗೆ ಒಂದು ವರ್ಷದಲ್ಲಿ 2ಆರುನೂರ ಅರುವತ್ತಾರು ತಲಾಂತು ಬಂಗಾರ ದೊರಕುತ್ತಿತ್ತು. ಅದರ ಜೊತೆಗೆ ದೇಶಾಂತರ ವ್ಯಾಪಾರಿಗಳೂ, ವರ್ತಕರೂ, ಅರಬಿಯ ಅರಸರೂ, ಪ್ರದೇಶಾಧಿಪತಿಗಳೂ ಸಹ ಸೊಲೊಮೋನನಿಗೆ ಬೆಳ್ಳಿ ಬಂಗಾರವನ್ನು ಕೊಡುತ್ತಿದ್ದರು. ಅರಸನಾದ ಸೊಲೊಮೋನನು ಬಂಗಾರದ ತಗಡಿನಿಂದ ಇನ್ನೂರು ಗುರಾಣಿಗಳನ್ನು ಮಾಡಿಸಿದನು. ಪ್ರತಿಯೊಂದು ಗುರಾಣಿಗೆ ಆರುನೂರು ತೊಲಾ ಬಂಗಾರ ಹಿಡಿಯಿತು. ಇದಲ್ಲದೆ ಅವನು ಬಂಗಾರದ ತಗಡಿನಿಂದ ಮುನ್ನೂರು ಖೇಡ್ಯಗಳನ್ನು ಮಾಡಿಸಿದನು. ಪ್ರತಿಯೊಂದು ಖೇಡ್ಯಕ್ಕೆ 3ನೂರೈವತ್ತು ತೊಲಾ ಬಂಗಾರ ಹಿಡಿಯಿತು. ಅವನು ಇವುಗಳನ್ನು ಲೆಬನೋನಿನ ತೋಪು ಎನ್ನಿಸಿಕೊಳ್ಳುವ ಮಂದಿರದಲ್ಲಿ ಇರಿಸಿದನು.

ಇದಲ್ಲದೆ ಅರಸನು ದೊಡ್ಡದಾದ ಒಂದು ದಂತ ಸಿಂಹಾಸನವನ್ನು ಮಾಡಿಸಿ ಅದಕ್ಕೆ ಚೊಕ್ಕ ಬಂಗಾರದ ತಗಡನ್ನು ಹೊದಿಸಿದನು ಅದಕ್ಕೆ ಆರು ಮೆಟ್ಟಲುಗಳಿದ್ದವು. ಅದರ ಹಿಂಭಾಗದ ತುದಿಯು ಚಕ್ರಾಕಾರವಾಗಿತ್ತು. ಆಸನಕ್ಕೆ ಎರಡು ಕೈಗಳು, ಅವುಗಳ ಹತ್ತಿರ ಎರಡು ಸಿಂಹಗಳು ಇದ್ದವು. ಆರು ಮೆಟ್ಟಲುಗಳ ಎರಡು ಕಡೆಗಳಲ್ಲೂ ಒಟ್ಟು ಹನ್ನೆರಡು ಸಿಂಹಗಳು ನಿಂತಿದ್ದವು. ಇಂಥ ಸಿಂಹಾಸನವು ಬೇರೆ ಯಾವ ರಾಜ್ಯದಲ್ಲಿಯೂ ಇರಲಿಲ್ಲ. ಅರಸನಾದ ಸೊಲೊಮೋನನ ಪಾನಪಾತ್ರೆಗಳು, ಲೆಬನೋನಿನ ತೋಪು ಎನಿಸಿಕೊಳ್ಳುವ ಮಂದಿರದಲ್ಲಿದ್ದ ಎಲ್ಲಾ ಪಾನಪಾತ್ರೆಗಳು ಬಂಗಾರದವುಗಳು. ಸೊಲೊಮೋನನ ಕಾಲದಲ್ಲಿ ಬೆಳ್ಳಿಗೆ ಬೆಲೆ ಇರಲಿಲ್ಲವಾದುದರಿಂದ ಅವನಲ್ಲಿ ಬೆಳ್ಳಿಯ ಸಾಮಾನು ಒಂದಾದರೂ ಕಾಣಿಸಲಿಲ್ಲ. ಹೀರಾಮನ ನಾವೆಗಳ ಜೊತೆಯಲ್ಲಿ ಸೊಲೊಮೋನನ ತಾರ್ಷೀಷ್ ಹಡಗುಗಳು ಹೋಗಿ ಮೂರು ವರ್ಷಕ್ಕೊಮ್ಮೆ ಬಂಗಾರ, ಬೆಳ್ಳಿ, ದಂತ, ವಾನರಗಳನ್ನು ಮತ್ತು ನವಿಲುಗಳನ್ನೂ ತರುತ್ತಿದ್ದವು. ಈ ಪ್ರಕಾರ ಅರಸನಾದ ಸೊಲೊಮೋನನು ಐಶ್ವರ್ಯದಲ್ಲಿಯೂ, ಜ್ಞಾನದಲ್ಲಿಯೂ ಭೂಲೋಕದ ಎಲ್ಲಾ ಅರಸರಿಗಿಂತ ಮಿಗಿಲಾಗಿದ್ದನು. ಭೂಲೋಕದವರೆಲ್ಲರೂ ದೇವರು ಅವನಿಗೆ ಅನುಗ್ರಹಿಸಿದ ಜ್ಞಾನವಾಕ್ಯಗಳನ್ನು ಕೇಳುವುದಕ್ಕೋಸ್ಕರ ಅವನ ದರ್ಶನಕ್ಕೆ ಬಂದರು. ಅವರೆಲ್ಲರೂ ಅವನಿಗೆ ವರ್ಷ ವರ್ಷ ಬೆಳ್ಳಿಬಂಗಾರದ ಸಾಮಾನು, ಉಡುಪು, ಯುದ್ಧಕ್ಕೆ ಬೇಕಾದ ಆಯುಧಗಳು, ಸುಗಂಧದ್ರವ್ಯ, ಕುದುರೆ ಮತ್ತು ಹೇಸರಗತ್ತೆ ಇವುಗಳನ್ನು ಕಾಣಿಕೆಯಾಗಿ ಕೊಡುತ್ತಿದ್ದರು.

ಸೊಲೊಮೋನನು ರಥಗಳನ್ನೂ ಮತ್ತು ರಾಹುತರನ್ನೂ ಸಂಗ್ರಹಿಸಿದನು. ಅವನ ರಥಗಳು ಸಾವಿರದ ನಾನೂರು. ರಾಹುತರು ಹನ್ನೆರಡು ಸಾವಿರ. ಇವುಗಳಲ್ಲಿ ಕೆಲವನ್ನು ಯೆರೂಸಲೇಮಿನಲ್ಲಿ ತನ್ನ ಬಳಿಯಲ್ಲಿಯೂ, ಉಳಿದವುಗಳನ್ನು ರಥಗಳಿಗೋಸ್ಕರ ನೇಮಿಸಿದ ಪಟ್ಟಣಗಳಲ್ಲಿಯೂ ಇರಿಸಿದನು. ಅವನ ಮುಖಾಂತರವಾಗಿ ಯೆರೂಸಲೇಮಿನಲ್ಲಿ ಬೆಳ್ಳಿಯು ಸಾಮಾನ್ಯ ಕಲ್ಲಿನ ಹಾಗೂ ದೇವದಾರುಮರಗಳು ಇಳಕಲಿನ ಪ್ರದೇಶದಲ್ಲಿ ಬೆಳೆಯುವ ಅತ್ತಿಮರಗಳ ಹಾಗೂ ಹೇರಳವಾಗಿ ದೊರೆಯುತ್ತಿತ್ತು. ಅರಸನಾದ ಸೊಲೊಮೋನನ ಕುದುರೆಗಳು ಐಗುಪ್ತ ದೇಶದವುಗಳು. ಅವನ ವರ್ತಕರು ಅವುಗಳನ್ನು ಹಿಂಡುಗಟ್ಟಲೆ ಕೊಂಡುಕೊಂಡು ಬರುತ್ತಿದ್ದರು. ಐಗುಪ್ತದೇಶದಿಂದ ರಥಗಳನ್ನೂ ಮತ್ತು ಕುದುರೆಗಳನ್ನೂ ತರಿಸಬೇಕಾದರೆ ಪ್ರತಿಯೊಂದು ರಥಕ್ಕೆ ಆರುನೂರು ರೂಪಾಯಿಗಳನ್ನೂ, ಕುದುರೆಗೆ ನೂರೈವತ್ತು ರೂಪಾಯಿಗಳನ್ನೂ ಕೊಡಬೇಕಾಗಿತ್ತು. ಅವು ಹಿತ್ತಿಯರ ಮತ್ತು ಅರಾಮ್ಯರ ಎಲ್ಲಾ ಅರಸರಿಗೆ ಇವರ ಮುಖಾಂತರವಾಗಿಯೇ ಮಾರಾಟವಾಗುತ್ತಿದ್ದವು.

Source notes (3)
  1. Footnote 4,000 ಕ್ಕಿಂತಲೂ ಆಧಿಕ.
  2. Footnote ಸುಮಾರು 23,000 ಕಿಲೋಗ್ರಾಂ.
  3. Footnote ಸುಮಾರು 2 ಕಿಲೋಗ್ರಾಂ.

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019. Copyright © 2017, 2019 Bridge Connectivity Solutions. Licensed under CC BY-SA 4.0. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.