Indian Revised Version (IRV) Kannada - 2019
ಕೀರ್ತ 36
ದುಷ್ಟರ ದುರ್ಲಕ್ಷಣ ಮತ್ತು ದೇವರ ಮಹಾಪ್ರೀತಿ
ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಯೆಹೋವನ ಸೇವಕನಾದ ದಾವೀದನ ಕೀರ್ತನೆ.
ಪಾಪವು ದುಷ್ಟನ ಮನಸ್ಸಿನೊಳಗೆ ನುಡಿಯುತ್ತಿರುವುದರಿಂದ
ಅವನ ಕಣ್ಣೆದುರಿಗೆ ದೇವರ ಭಯವೇ ಇಲ್ಲ.
ಅದು ಅವನನ್ನು ವಂಚಿಸಿ, “ನಿನ್ನ ದ್ರೋಹವು ಬೈಲಿಗೆ ಬರುವುದಿಲ್ಲ ಮತ್ತು
ನಿನಗೆ ಕೇಡು ತರುವುದಿಲ್ಲ” ಎಂದು ಊದಿಬಿಡುತ್ತದೆ.
ಅವನ ಬಾಯಿಂದ ಕೆಡುಕೂ, ವಂಚನೆಯೂ ಬರುತ್ತವೆ;
ವಿವೇಕಮಾರ್ಗವನ್ನೂ, ಪರಹಿತವನ್ನೂ ಬಿಟ್ಟೇಬಿಟ್ಟಿದ್ದಾನೆ.
ಹಾಸಿಗೆಯ ಮೇಲೆ ಇರುವಾಗಲೂ ಕೆಡುಕನ್ನೇ ಯೋಚಿಸುತ್ತಿರುವನು;
ದುಷ್ಟ ಮಾರ್ಗದಲ್ಲಿ ನಿಂತುಕೊಂಡಿದ್ದಾನೆ; ಎಂಥ ದುಷ್ಕೃತ್ಯಕ್ಕೂ ಹೇಸುವುದಿಲ್ಲ.
ಯೆಹೋವನೇ, ನಿನ್ನ ಪ್ರೀತಿಯು ಆಕಾಶದಷ್ಟು ಉನ್ನತವಾಗಿದೆ;
ನಿನ್ನ ನಂಬಿಗಸ್ತಿಕೆಯು ಮೇಘಮಾರ್ಗವನ್ನು ಮುಟ್ಟುತ್ತದೆ.
ನಿನ್ನ ನೀತಿಯು ದಿವ್ಯಪರ್ವತಗಳಂತೆಯೂ,
ನಿನ್ನ ನ್ಯಾಯವು ಮಹಾಸಾಗರದಂತೆಯೂ ಇವೆ;
ಯೆಹೋವನೇ, ನೀನು ಮನುಷ್ಯರನ್ನೂ, ಮೃಗಗಳನ್ನೂ ಸಂರಕ್ಷಿಸುತ್ತೀ.
ದೇವರೇ, ನಿನ್ನ ಪ್ರೀತಿ ಎಷ್ಟೋ ಅಮೂಲ್ಯವಾದದ್ದು;
ಮಾನವರು ನಿನ್ನ ರೆಕ್ಕೆಗಳ ಮರೆಯನ್ನು ಆಶ್ರಯಿಸಿಕೊಳ್ಳುತ್ತಾರೆ.
ನಿನ್ನ ಮಂದಿರದ ಸಮೃದ್ಧಿಯಿಂದ ಅವರನ್ನು ಸಂತೃಪ್ತಿಪಡಿಸುತ್ತೀ;
ನಿನ್ನ ಸಂಭ್ರಮಪ್ರವಾಹದಲ್ಲಿ ಅವರಿಗೆ ಪಾನಮಾಡಿಸುತ್ತೀ.
ನಿನ್ನ ಬಳಿಯಲ್ಲಿ ಜೀವದ ಬುಗ್ಗೆ ಉಂಟಲ್ಲಾ;
ನಿನ್ನ ತೇಜಸ್ಸು ನಮಗೆ ಬೆಳಕು ಕೊಡುತ್ತದೆ.
ನಿನ್ನನ್ನು ಅರಿತವರಿಗೆ ನಿನ್ನ ಪ್ರೀತಿಯನ್ನು ಯಾವಾಗಲೂ ದಯಪಾಲಿಸು;
ಯಥಾರ್ಥಚಿತ್ತರಿಗೆ ನಿನ್ನ ನ್ಯಾಯವನ್ನು ನಿರಂತರವೂ ಅನುಗ್ರಹಿಸು.
ಗರ್ವಿಷ್ಠರ ಕಾಲಕೆಳಗೆ ನಮ್ಮನ್ನು ಬೀಳಿಸಬೇಡ;
ದುರ್ಜನರಿಂದ ನಾವು ದೇಶಭ್ರಷ್ಟರಾಗದಂತೆ ಮಾಡು.
ಇಗೋ, ಕೆಡುಕರು ಕೆಡವಲ್ಪಟ್ಟು ಏಳಲಾರದೆ ಬಿದ್ದಿದ್ದಾರೆ.
Indian Revised Version (IRV) Kannada - 2019. Copyright © Bridge Connectivity Solutions Pvt. Ltd. Licensed under CC BY-SA 4.0. Source: Open.Bible. Typeset from the source files; no intended changes to scripture wording. BibleKenya is not endorsed by the rights holder.
Full source notice & licence · CC BY-SA 4.0 · SourceEdition imported 2026-11-09.