Skip to content
BibleKenya

Biblica® Open Kannada Contemporary Version 2022

ಕೀರ್ತನೆಗಳು 79

ಆಸಾಫನ ಕೀರ್ತನೆ.

ದೇವರೇ, ಜನಾಂಗಗಳು ನಿಮ್ಮ ಬಾಧ್ಯತೆಗೆ ಬಂದು,

ನಿಮ್ಮ ಪರಿಶುದ್ಧ ಮಂದಿರವನ್ನು ಅಪವಿತ್ರ ಮಾಡಿ,

ಯೆರೂಸಲೇಮನ್ನು ಹಾಳು ದಿಬ್ಬಗಳಾಗಿ ಮಾಡಿದ್ದಾರೆ.

ನಿಮ್ಮ ಸೇವಕರ ಹೆಣಗಳನ್ನು ಆಕಾಶದ ಪಕ್ಷಿಗಳಿಗೂ

ನಿಮ್ಮ ಭಕ್ತರ ಮಾಂಸವನ್ನು

ಭೂಮಿಯ ಮೃಗಗಳಿಗೂ ಆಹಾರವಾಗಿ ಕೊಟ್ಟಿದ್ದಾರೆ.

ಅವರ ರಕ್ತವನ್ನು ಯೆರೂಸಲೇಮಿನ ಸುತ್ತಲೂ

ನೀರಿನ ಹಾಗೆ ಚೆಲ್ಲಿದ್ದಾರೆ.

ಅವರನ್ನು ಹೂಳಿಡುವವನೊಬ್ಬನೂ ಇಲ್ಲ.

ನಾವು ನಮ್ಮ ನೆರೆಯವರಿಗೆ ನಿಂದೆಯೂ

ನಮ್ಮ ಸುತ್ತಲಿರುವವರಿಗೆ ಗೇಲಿಯೂ ಹಾಸ್ಯವೂ ಆಗಿದ್ದೇವೆ.

ಯೆಹೋವ ದೇವರೇ ಎಷ್ಟರವರೆಗೆ ಕೋಪಗೊಂಡಿರುವಿರಿ? ಸತತವೂ ನೀವು ಕೋಪದಿಂದಿರುವಿರೋ?

ಎಷ್ಟರವರೆಗೆ ನಿಮ್ಮ ರೋಷವು ಬೆಂಕಿಯಂತೆ ಉರಿಯುವುದು?

ನಿಮ್ಮನ್ನು ಸ್ವೀಕರಿಸದ ಜನಾಂಗಗಳ ಮೇಲೆಯೂ,

ನಿಮ್ಮ ಹೆಸರನ್ನು ಕರೆಯದ

ರಾಜ್ಯಗಳ ಮೇಲೆಯೂ

ನಿಮ್ಮ ಕೋಪವನ್ನು ಸುರಿಸಿಬಿಡಿರಿ.

ಏಕೆಂದರೆ ಅವರು ಯಾಕೋಬರನ್ನು ನುಂಗಿಬಿಟ್ಟಿದ್ದಾರೆ.

ಅವರ ನಿವಾಸವನ್ನು ಹಾಳು ಮಾಡಿದ್ದಾರೆ.

ಪೂರ್ವಿಕರ ಪಾಪಗಳನ್ನು ನಮಗೆ ವಿರೋಧವಾಗಿ ಜ್ಞಾಪಕ ಮಾಡಿಕೊಳ್ಳಬೇಡಿರಿ.

ನಿಮ್ಮ ಕರುಣೆಯು ಬೇಗ ನಮ್ಮನ್ನು ಎದುರುಗೊಳ್ಳಲಿ.

ನಾವು ಬಹಳವಾಗಿ ಕುಗ್ಗಿಹೋಗಿದ್ದೇವೆ.

ನಮ್ಮ ರಕ್ಷಕರಾಗಿರುವವರೇ, ನಮ್ಮ ದೇವರೇ,

ನಿಮ್ಮ ಹೆಸರಿನ ಘನದ ನಿಮಿತ್ತ ನಮಗೆ ಸಹಾಯಮಾಡಿರಿ.

ನಿಮ್ಮ ಹೆಸರಿಗೆ ತಕ್ಕಂತೆ ನಮ್ಮನ್ನು ಬಿಡಿಸಿರಿ.

ನಮ್ಮ ಪಾಪಗಳನ್ನು ತೊಳೆದುಬಿಡಿರಿ.

ಅವರ ದೇವರು ಎಲ್ಲಿ ಎಂದು

ಇತರ ಜನಾಂಗಗಳು ಏಕೆ ಹೇಳಬೇಕು?

ಚೆಲ್ಲಿರುವ ನಿಮ್ಮ ಸೇವಕರ ರಕ್ತದ ಪ್ರತಿದಂಡನೆಯು

ನಮ್ಮ ಕಣ್ಣುಗಳ ಮುಂದೆ ಇತರ ಜನಾಂಗಗಳಲ್ಲಿ ಗೊತ್ತಾಗಲಿ.

ಸೆರೆಯವರ ನಿಟ್ಟುಸಿರು ನಿಮ್ಮ ಮುಂದೆ ಬರಲಿ.

ನಿಮ್ಮ ಮಹಾಶಕ್ತಿಯ ಪ್ರಕಾರ ಸಾಯುವುದಕ್ಕಿರುವವರನ್ನು ಕಾಪಾಡಿರಿ.

ಯೆಹೋವ ದೇವರೇ, ನಿಮ್ಮನ್ನು ನಿಂದಿಸಿದ ನಮ್ಮ ನೆರೆಯವರಿಗೆ

ಏಳರಷ್ಟು ಪ್ರತಿದಂಡನೆಯನ್ನು ಅವರ ಮಡಿಲಿಗೆ ಕೊಡಿರಿ.

ಆಗ ನಿಮ್ಮ ಜನರೂ, ನಿಮ್ಮ ಹುಲ್ಲುಗಾವಲಿನ

ಕುರಿಗಳೂ ಆಗಿರುವ ನಾವು

ಎಂದೆಂದಿಗೂ ನಿಮ್ಮನ್ನು ಕೊಂಡಾಡಿ,

ತಲತಲಾಂತರಕ್ಕೂ ನಿಮ್ಮ ಸ್ತೋತ್ರವನ್ನು ಸಾರುವೆವು.

Biblica® Open Kannada Contemporary Version 2022. Copyright © Biblica, Inc. Licensed under CC BY-SA 4.0. Source: Open.Bible. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-11-09.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.