Skip to content
BibleKenya

Biblica® Open Kannada Contemporary Version 2022

ಕೀರ್ತನೆಗಳು 38

ದಾವೀದನ ಕೀರ್ತನೆ. ದುರವಸ್ಥೆಯಲ್ಲಿರುವ ಭಕ್ತನ ದೇವರ ಸಹಾಯದ ಬೇಡಿಕೆ.

ಯೆಹೋವ ದೇವರೇ, ನೀವು ಬೇಸರದಿಂದ ನನ್ನನ್ನು ಗದರಿಸಬೇಡಿರಿ;

ಮನನೊಂದು ನನ್ನನ್ನು ಶಿಕ್ಷಿಸಬೇಡಿರಿ.

ಏಕೆಂದರೆ, ನಿಮ್ಮ ಬಾಣಗಳು ನನ್ನಲ್ಲಿ ನಾಟಿವೆ.

ನಿಮ್ಮ ಶಿಕ್ಷಾ ಹಸ್ತವು ನನ್ನ ಮೇಲೆ ಭಾರವಾಗಿದೆ.

ನಿಮ್ಮ ಬೇಸರದ ನಿಮಿತ್ತ ನನ್ನ ಶರೀರದಲ್ಲಿ ಸ್ವಸ್ಥತೆ ಏನೂ ಇಲ್ಲ;

ನನ್ನ ಪಾಪದ ನಿಮಿತ್ತ ನನ್ನ ಎಲುಬುಗಳಲ್ಲಿ ಕ್ಷೇಮವೇ ಇಲ್ಲ.

ಏಕೆಂದರೆ, ನನ್ನ ಅಕ್ರಮಗಳು ನನ್ನ ತಲೆಯ ಮೇಲೆ ಏರಿ ಹೋಗಿವೆ;

ದೋಷ ಭಾವನೆಯ ಹೊರೆಯು ನನಗೆ ಬಹುಭಾರವಾಗಿವೆ.

ನನ್ನ ಮೂರ್ಖತನದ ನಿಮಿತ್ತ ನನಗಾದ ಗಾಯಗಳು

ದುರ್ವಾಸನೆಯಿಂದ ಕೀವು ತುಂಬಿವೆ.

ನಾನು ಬಹಳವಾಗಿ ಬಾಗಿ ಕುಗ್ಗಿದ್ದೇನೆ.

ದಿನವೆಲ್ಲಾ ದುಃಖದಿಂದ ನಾನು ಅಲೆಯುತ್ತಿದ್ದೇನೆ.

ನನ್ನ ಸೊಂಟ ಬಹು ಬೇನೆಯಿಂದ ತುಂಬಿದೆ.

ನನ್ನ ದೇಹದಲ್ಲಿ ಕ್ಷೇಮವೇ ಇಲ್ಲ.

ಬಲಹೀನನಾಗಿದ್ದೇನೆ, ಬಹಳ ಜಜ್ಜಿ ಹೋಗಿದ್ದೇನೆ;

ನನ್ನ ಹೃದಯದ ವೇದನೆಯಿಂದ ನರಳುತ್ತಾ ಇದ್ದೇನೆ.

ಯೆಹೋವ ದೇವರೇ, ನಿಮಗೆ ನನ್ನ ಅಪೇಕ್ಷೆಗಳೆಲ್ಲಾ ಗೊತ್ತೇ ಇದೆ;

ನನ್ನ ನಿಟ್ಟುಸಿರು ನಿಮಗೆ ಮರೆಯಾದದ್ದಲ್ಲ.

ನನ್ನ ಹೃದಯ ಬಡಿದುಕೊಳ್ಳುತ್ತದೆ. ನನ್ನ ಶಕ್ತಿಯು ನನ್ನನ್ನು ಬಿಟ್ಟುಹೋಗಿದೆ;

ನನ್ನ ಕಣ್ಣುಗಳ ಬೆಳಕು ಸಹ ಹೋಗಿಬಿಟ್ಟಿದೆ.

ನನ್ನ ಪ್ರಿಯರೂ, ನನ್ನ ಸ್ನೇಹಿತರೂ ನನ್ನ ಬಾಧೆಗೆ ಓರೆಯಾಗಿ ನಿಲ್ಲುತ್ತಾರೆ;

ನನ್ನ ನೆರೆಯವರು ದೂರದಲ್ಲಿ ನಿಂತಿದ್ದಾರೆ.

ನನ್ನ ಪ್ರಾಣವನ್ನು ಹುಡುಕುವವರು ಬಲೆ ಒಡ್ಡುತ್ತಾರೆ;

ನನ್ನ ಕೇಡನ್ನು ಹುಡುಕುವವರು ಕೇಡಿನ ಮಾತುಗಳನ್ನಾಡುತ್ತಾರೆ;

ದಿನವೆಲ್ಲಾ ಮೋಸಗಳನ್ನು ಆಲೋಚಿಸುತ್ತಾರೆ.

ಆದರೆ ನಾನು ಕಿವುಡನ ಹಾಗೆ ಕೇಳಿಸಿಕೊಳ್ಳುವುದಿಲ್ಲ;

ತನ್ನ ಬಾಯಿ ತೆರೆಯದ ಮೂಕನ ಹಾಗಿದ್ದೇನೆ.

ನಾನು ಕಿವಿ ಕೇಳಿಸದವನಂತೆ ಇದ್ದೇನೆ.

ನಾನು ಪ್ರತ್ಯುತ್ತರ ಕೊಡಲಾರದಂತೆಯೂ ಇದ್ದೇನೆ.

ಯೆಹೋವ ದೇವರೇ, ನಿಮ್ಮನ್ನೇ ಎದುರು ನೋಡುತ್ತೇನೆ;

ನನ್ನ ದೇವರಾದ ಯೆಹೋವ ದೇವರೇ, ನೀವು ಉತ್ತರ ಕೊಡುವಿರಿ.

ಏಕೆಂದರೆ ನಾನು, “ಅವರು ನನಗೋಸ್ಕರ ಸಂತೋಷಪಡದೆ ಇರಲಿ

ನನ್ನ ಪಾದ ಜಾರುವಾಗ ಅವರು ನನಗೆ ವಿರೋಧವಾಗಿ

ತಮ್ಮನ್ನು ಹೆಚ್ಚಿಸಿಕೊಳ್ಳದಿರಲಿ,” ಎಂದುಕೊಂಡೆನು.

ನಾನು ಎಡವಿ ಬೀಳಲಿದ್ದೇನೆ;

ನನ್ನ ನೋವು ಯಾವಾಗಲೂ ನನ್ನ ಮುಂದೆ ಇದೆ.

ನನ್ನ ಅಕ್ರಮವನ್ನು ಅರಿಕೆ ಮಾಡುವೆನು;

ನನ್ನ ಪಾಪಕ್ಕೋಸ್ಕರ ದುಃಖಪಡುವೆನು.

ನನ್ನ ಶತ್ರುಗಳು ಬಲಗೊಂಡಿದ್ದಾರೆ.

ನನ್ನನ್ನು ವಿನಾಕಾರಣವಾಗಿ ದ್ವೇಷಿಸುವವರು ಹೆಚ್ಚಿದ್ದಾರೆ.

ನನ್ನ ಶತ್ರುಗಳು ಒಳ್ಳೆಯದಕ್ಕೆ ಬದಲಾಗಿ

ಕೇಡನ್ನು ಸಲ್ಲಿಸುತ್ತಿದ್ದಾರೆ.

ನಾನು ಒಳ್ಳೆಯದನ್ನು ಹಿಂದಟ್ಟುವ ಕಾರಣ ನನ್ನನ್ನು ಎದುರಿಸುತ್ತಾರೆ.

ಯೆಹೋವ ದೇವರೇ, ನನ್ನನ್ನು ಬಿಡಬೇಡಿರಿ;

ನನ್ನ ದೇವರೇ, ನನಗೆ ದೂರವಾಗಿರಬೇಡಿರಿ.

ನನ್ನ ರಕ್ಷಕ ಆಗಿರುವ ಯೆಹೋವ ದೇವರೇ,

ನನ್ನ ಸಹಾಯಕ್ಕೆ ಬೇಗ ಬನ್ನಿರಿ.

Biblica® Open Kannada Contemporary Version 2022. Copyright © Biblica, Inc. Licensed under CC BY-SA 4.0. Source: Open.Bible. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-11-09.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.