Skip to content
BibleKenya

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ

ಜ್ಞಾನೋಕ್ತಿಗಳು 26

ಬೇಸಿಗೆಯಲ್ಲಿ ಹಿಮದಂತೆಯೂ,

ಸುಗ್ಗಿಯಲ್ಲಿ ಮಳೆಯಂತೆಯೂ ಬುದ್ಧಿಹೀನನಿಗೆ ಮಾನವು ಸರಿಯಲ್ಲ.

ಅಲೆದಾಡುವ ಪಕ್ಷಿಯಂತೆಯೂ,

ಹಾರಾಡುವ ಬಾನಕ್ಕಿಯಂತೆಯೂ ಕಾರಣವಿಲ್ಲದೆ ಕೊಡುವ ಶಾಪವು ತಗಲದು.

ಕುದುರೆಗೆ ಬಾರುಗೋಲು, ಕತ್ತೆಗೆ ಕಡಿವಾಣವು,

ಮೂಢನ ಬೆನ್ನಿಗೆ ಬೆತ್ತ.

ಮೂಢನ ಮೂರ್ಖತನಕ್ಕೆ ತಕ್ಕಂತೆ ಉತ್ತರಿಸಬೇಡ;

ಇಲ್ಲವಾದರೆ ನೀನೂ ಅವನಿಗೆ ಸಮಾನನಾದೀಯೆ.

ಮೂಢನ ಮೂರ್ಖತನಕ್ಕೆ ತಕ್ಕಂತೆ ಉತ್ತರಕೊಡು;

ಇಲ್ಲವಾದರೆ ತನ್ನನ್ನು ಜ್ಞಾನಿಯೆಂದು ಎಣಿಸಿಕೊಂಡಾನು.

ಬುದ್ಧಿಹೀನನ ಮೂಲಕ ವರ್ತಮಾನ ಕಳುಹಿಸುವವನು

ತನ್ನ ಪಾದಗಳನ್ನು ತಾನೇ ಕಡಿದುಕೊಂಡು ಇಲ್ಲವೆ ಕೇಡನ್ನು ಕುಡಿಯುತ್ತಾನೆ.

ಕುಂಟನ ಕಾಲುಗಳು ಜೋಲಾಡುವ ಹಾಗೆಯೇ,

ಬುದ್ಧಿಹೀನರ ಬಾಯಲ್ಲಿ ಜ್ಞಾನೋಕ್ತಿಯು ಇರುತ್ತದೆ.

ಮೂಢನಿಗೆ ಕೊಡುವ ಮಾನವು

ಕವಣಿಯಲ್ಲಿಟ್ಟ ಕಲ್ಲಿನ ಹಾಗೆ.

ಕುಡುಕನ ಕೈಯಲ್ಲಿ ಮುಳ್ಳು ಕೋಲಿನಂತೆ

ಬುದ್ಧಿಹೀನರ ಬಾಯಲ್ಲಿ ಜ್ಞಾನೋಕ್ತಿಯು ಇರುವುದು.

ಮೂಢರನ್ನೂ ದಾರಿಹೋಕರನ್ನೂ ಕೂಲಿಗೆ ಕರೆಯುವವನು

ಯಾರಿಗಾದರೂ ತಗಲಲಿ ಎಂದು ಬಾಣ ಎಸೆಯುವ ಬಿಲ್ಲುಗಾರನಂತೆ.

ತಾನು ಕಕ್ಕಿದ್ದಕ್ಕೆ ನಾಯಿಯು ತಿರುಗುವಂತೆ ಮೂಢನು

ತನ್ನ ಮೂಢತನಕ್ಕೆ ಹಿಂದಿರುಗುತ್ತಾನೆ.

ತನ್ನ ಸ್ವಂತ ಅಭಿಪ್ರಾಯದಲ್ಲಿ ಜ್ಞಾನಿಯಾದವನನ್ನು ನೀನು ಕಾಣುತ್ತಿದ್ದೀಯೋ?

ಅವನಿಗಿಂತ ಮೂಢನ ವಿಷಯದಲ್ಲಿ ಹೆಚ್ಚು ನಿರೀಕ್ಷೆಯು ಇರುತ್ತದೆ.

ಸೋಮಾರಿಯು, “ದಾರಿಯಲ್ಲಿ ಸಿಂಹವಿದೆ,

ಬೀದಿಗಳಲ್ಲಿ ಭೀಕರ ಸಿಂಹ ಇದೆ,” ಎಂದು ಹೇಳುತ್ತಾನೆ.

ಬಾಗಿಲು ತಿರುಗುಣಿಗಳ ಮೇಲೆ ಹೇಗೆ ತಿರುಗುತ್ತದೋ,

ಹಾಗೆಯೇ ಸೋಮಾರಿಯು ತನ್ನ ಹಾಸಿಗೆಯ ಮೇಲೆ ಹೊರಳಾಡುತ್ತಾನೆ.

ಸೋಮಾರಿಯು ತಟ್ಟೆಯಲ್ಲಿ ತನ್ನ ಕೈಯನ್ನು ಹಾಕಿ,

ತಿರುಗಿ ಅದನ್ನು ತನ್ನ ಬಾಯಿಗೆ ತರಲಾರದಷ್ಟು ಆಯಾಸಪಡುತ್ತಾನೆ.

ಜ್ಞಾನದಿಂದ ಉತ್ತರಿಸಬಲ್ಲ ಏಳು ಜನರಿಗಿಂತ,

ತಾನೇ ಜ್ಞಾನಿ ಎಂದು ಸೋಮಾರಿಯು ಭಾವಿಸುತ್ತಾನೆ.

ಒಬ್ಬನು ಹಾದುಹೋಗುತ್ತಾ ತನಗೆ ಸಂಬಂಧಿಸದೇ ಇರುವ ವ್ಯಾಜ್ಯದಲ್ಲಿ

ತಲೆಹಾಕುವವನು ನಾಯಿಯ ಕಿವಿ ಹಿಡಿದವನಂತೆ ಇದ್ದಾನೆ.

ತನ್ನ ನೆರೆಯವನನ್ನು ಮೋಸಗೊಳಿಸಿ,

“ಇದು ತಮಾಷೆಗೋಸ್ಕರ ಮಾಡುತ್ತೇನೆ,” ಎಂದು ಹೇಳುವವನು,

ಕೊಳ್ಳಿಗಳನ್ನೂ, ಬಾಣಗಳನ್ನೂ,

ಸಾವನ್ನೂ ಬೀರುವ ಹುಚ್ಚನಂತೆಯೇ.

ಕಟ್ಟಿಗೆ ಇಲ್ಲದಿರುವಲ್ಲಿ ಬೆಂಕಿಯು ಆರಿಹೋಗುತ್ತದೆ;

ಹಾಗೆಯೇ ಚಾಡಿಕೋರನು ಇಲ್ಲದಿರುವಲ್ಲಿ ಜಗಳ ಶಮನವಾಗುವುದು.

ಕೆಂಡಗಳಿಗೆ ಇದ್ದಲು, ಬೆಂಕಿಗೆ ಕಟ್ಟಿಗೆ;

ಹಾಗೆಯೇ ಜಗಳವನ್ನು ಕೆರಳಿಸುವಂತೆ ಕಲಹ ಮಾಡುವವನು ಇರುವನು.

ಚಾಡಿಕೋರನ ಮಾತುಗಳು ರುಚಿಕರ ಭಕ್ಷ್ಯದ

ಹಾಗೆ ಹೊಟ್ಟೆಯ ಅಂತರ್ಭಾಗಗಳಿಗೆ ಇಳಿಯುತ್ತವೆ.

ಕೆಟ್ಟ ಹೃದಯದಿಂದ ಸವಿನುಡಿಯುವ ತುಟಿಯು,

ಬೆಳ್ಳಿಯ ಹೊದಿಕೆಯಿಂದ ಮುಚ್ಚಲ್ಪಟ್ಟ ಬೋಕಿಯಂತೆ ಇದೆ.

ಶತ್ರುಗಳು ತಮ್ಮ ತುಟಿಗಳಿಂದ ವೇಷ ಧರಿಸುತ್ತಾರೆ,

ತನ್ನ ಅಂತರಂಗದಲ್ಲಿ ಮೋಸವನ್ನು ಇಟ್ಟುಕೊಳ್ಳುತ್ತಾರೆ.

ಸವಿಮಾತನ್ನಾಡಿದರೆ ಅವನನ್ನು ನಂಬಬೇಡ;

ಏಕೆಂದರೆ ಅವನ ಹೃದಯದಲ್ಲಿ ಏಳು ಅಸಹ್ಯ ಕಾರ್ಯಗಳಿವೆ.

ಅವನ ಹಗೆತನವು ಮೋಸದಿಂದ ಮುಚ್ಚಲ್ಪಟ್ಟಿದ್ದರೂ,

ಅವನ ಕೆಟ್ಟತನವು ಸಭೆಯಲ್ಲಿ ಬಯಲಾಗುವುದು.

ಗುಂಡಿಯನ್ನು ತೋಡುವವನು ತಾನೇ ಅದರಲ್ಲಿ ಬೀಳುತ್ತಾನೆ;

ಕಲ್ಲು ಹೊರಳಿಸುವವನ ಮೇಲೆಯೇ ಅದು ತಿರುಗಿ ಹೊರಳುವುದು.

ಸುಳ್ಳು ನಾಲಿಗೆಯವನು ತಾನು ಬಾಧಿಸಿದವರನ್ನೇ ಹಗೆ ಮಾಡುವನು;

ಮುಖಸ್ತುತಿ ಮಾಡುವ ಬಾಯಿಯು ನಾಶವನ್ನುಂಟುಮಾಡುತ್ತದೆ.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.