Skip to content
BibleKenya

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ

ಜ್ಞಾನೋಕ್ತಿಗಳು 19

ಬುದ್ಧಿಹೀನನ ವಕ್ರ ತುಟಿಗಳಿಗಿಂತ,

ನಿರ್ದೋಷವಾಗಿ ನಡೆಯುವ ಬಡವನು ಉತ್ತಮ.

ಪರಿಜ್ಞಾನವಿಲ್ಲದ ಆಸಕ್ತಿಯು ಯುಕ್ತವಲ್ಲ;

ತನ್ನ ಹೆಜ್ಜೆಗಳಲ್ಲಿ ದುಡುಕುವವನು ದಾರಿ ತಪ್ಪುವನು.

ಮನುಷ್ಯನ ಬುದ್ಧಿಹೀನತೆ ಅವನ ದುರ್ಗತಿಗೆ ದಾರಿಯಾಗಿದೆ,

ಆದರೂ ಅವನ ಹೃದಯವು ಯೆಹೋವ ದೇವರಿಗೆ ವಿರೋಧವಾಗಿ ಉರಿಗೊಳ್ಳುತ್ತದೆ.

ಸಂಪತ್ತು ಅನೇಕ ಮಂದಿ ಸ್ನೇಹಿತರನ್ನು ಮಾಡಿಕೊಳ್ಳುತ್ತದೆ;

ಆದರೆ ಬಡವನು ತನ್ನ ಆಪ್ತಸ್ನೇಹಿತನಿಂದ ದೂರವಾಗುತ್ತಾನೆ.

ಸುಳ್ಳುಸಾಕ್ಷಿಯು ದಂಡನೆಯನ್ನು ಹೊಂದದಿರನು;

ಸುಳ್ಳಾಡುವವನು ತಪ್ಪಿಸಿಕೊಳ್ಳದೆ ಇರಲಾರನು.

ಅನೇಕರು ಅಧಿಪತಿಯಿಂದ ಸಹಾಯ ಪಡೆಯುತ್ತಾರೆ.

ಕಾಣಿಕೆಗಳನ್ನು ಕೊಡುವವನಿಗೆ ಪ್ರತಿಯೊಬ್ಬನೂ ಸ್ನೇಹಿತನೇ.

ಬಡವನ ಬಂಧುಗಳೆಲ್ಲರು ಅವನನ್ನು ಹಗೆ ಮಾಡುತ್ತಾರೆ;

ತನ್ನ ಸ್ನೇಹಿತರು ತನ್ನಿಂದ ಎಷ್ಟೋ ಹೆಚ್ಚಾಗಿ ದೂರ ಹೋಗುತ್ತಾರಲ್ಲವೇ?

ಮಾತುಗಳಿಂದ ಅವನು ಮೊರೆಯಿಟ್ಟು ಹಿಂಬಾಲಿಸಿದರೂ

ಅವನಿಗೆ ಏನೂ ದೊರಕದು.

ಜ್ಞಾನವನ್ನು ಸಂಪಾದಿಸಿಕೊಳ್ಳುವವನು ತನ್ನ ಪ್ರಾಣವನ್ನೇ ಪ್ರೀತಿಸುತ್ತಾನೆ;

ತಿಳುವಳಿಕೆಯನ್ನು ಪ್ರೀತಿಸುವವನು ಶೀಘ್ರದಲ್ಲೇ ಏಳಿಗೆ ಹೊಂದುತ್ತಾನೆ.

ಸುಳ್ಳುಸಾಕ್ಷಿಯು ಶಿಕ್ಷೆಹೊಂದದೇ ಇರುವುದಿಲ್ಲ;

ಸುಳ್ಳಾಡುವವನು ಹಾಳಾಗಿ ಹೋಗುವನು.

ಬುದ್ಧಿಹೀನನಿಗೆ ಭೋಗಜೀವನವು ಯುಕ್ತವಲ್ಲ;

ಅಧಿಪತಿಗಳ ಮೇಲೆ ದೊರೆತನ ಮಾಡುವುದು ಸೇವಕನಿಗೆ ಯುಕ್ತವೇ ಅಲ್ಲ.

ಮನುಷ್ಯನ ಜ್ಞಾನವು ತಾಳ್ಮೆಯನ್ನು ನೀಡುತ್ತದೆ;

ಅಪರಾಧವನ್ನು ಲಕ್ಷಿಸದೆ ಇರುವುದು ಅವನಿಗೆ ಮಹಿಮೆಯಾಗಿದೆ.

ಅರಸನ ಕೋಪವು ಸಿಂಹದ ಘರ್ಜನೆಯಂತಿದೆ;

ಆದರೆ ಅವನ ದಯೆಯು ಹುಲ್ಲಿನ ಮೇಲಿರುವ ಇಬ್ಬನಿಯಂತಿದೆ.

ಬುದ್ಧಿಹೀನನಾದ ಮಗನು ತನ್ನ ತಂದೆಗೆ ಹಾನಿಕರನು;

ಜಗಳವಾಡುವ ಹೆಂಡತಿ

ಯಾವಾಗಲೂ ತೊಟ್ಟಿಕ್ಕುವ ಹನಿ.

ಮನೆಯೂ ಸಂಪತ್ತೂ ಪಿತೃಗಳ ಸ್ವಾಸ್ತ್ಯವು;

ವಿವೇಕಿಯಾದ ಹೆಂಡತಿಯು ಯೆಹೋವ ದೇವರಿಂದಲೇ.

ಮೈಗಳ್ಳತನವು ಗಾಢನಿದ್ರೆಯಲ್ಲಿ ಮುಳುಗಿಸುತ್ತದೆ;

ಸೋಮಾರಿಯು ಹಸಿವೆಗೊಳ್ಳುವನು.

ಯಾರು ಆಜ್ಞೆಗಳನ್ನು ಪಾಲಿಸುತ್ತಾನೋ ಅವನು ತನ್ನ ಜೀವವನ್ನು ಉಳಿಸಿಕೊಳ್ಳುತ್ತಾನೆ,

ಆದರೆ ಅವುಗಳನ್ನು ಅಸಡ್ಡೆ ಮಾಡುವವನು ಸಾಯುವನು.

ಬಡವರಿಗೆ ದಯೆ ತೋರಿಸುವವನು ಯೆಹೋವ ದೇವರಿಗೆ ಸಾಲ ಕೊಡುತ್ತಾನೆ;

ಆತನು ಅವನ ಉಪಕಾರಕ್ಕಾಗಿ ಪ್ರತ್ಯುಪಕಾರ ಮಾಡುವನು.

ಇನ್ನೂ ನಿರೀಕ್ಷೆ ಇರುವಾಗಲೇ ನಿನ್ನ ಮಗನನ್ನು ಶಿಕ್ಷಿಸು;

ಅವನ ಮರಣಕ್ಕೆ ನೀನು ಕಾರಣನಾಗಬೇಡ.

ಕೋಪಿಷ್ಟನು ಶಿಕ್ಷೆಯನ್ನು ಅನುಭವಿಸುವನು;

ಅವನನ್ನು ನೀನು ಬಿಡಿಸಿದರೆ, ತಿರುಗಿ ನೀನು ಬಿಡಿಸಬೇಕಾಗುವುದು.

ಬುದ್ಧಿವಾದವನ್ನು ಕೇಳಿ, ಶಿಕ್ಷಣವನ್ನು ಅಂಗೀಕರಿಸು;

ಕಡೆಯಲ್ಲಿ ನೀನು ಜ್ಞಾನಿಯಾಗುವೆ.

ಮನುಷ್ಯನ ಹೃದಯದಲ್ಲಿ ಅನೇಕ ಯೋಜನೆಗಳಿವೆ;

ಆದರೂ ಯೆಹೋವ ದೇವರ ಸಂಕಲ್ಪವೇ ಈಡೇರುವುದು.

ನಿಷ್ಠೆಯು ಮನುಷ್ಯನನ್ನು ಆಕರ್ಷಕನನ್ನಾಗಿ ಮಾಡುತ್ತದೆ.

ಬಡವನು ಸುಳ್ಳುಗಾರನಿಗಿಂತ ಲೇಸು.

ಯೆಹೋವ ದೇವರ ಭಯವು ಜೀವದಾಯಕವು;

ಆಗ ಅವನು ತೃಪ್ತನಾಗಿ ನೆಲೆಗೊಳ್ಳುವನು; ಅವನಿಗೆ ಕೇಡು ಸಂಭವಿಸುವುದಿಲ್ಲ.

ಮೈಗಳ್ಳನು ಪಾತ್ರೆಯೊಳಗೆ ತನ್ನ ಕೈಯನ್ನು ಮುಳುಗಿಸಿ,

ಅವನು ಅದನ್ನು ಮತ್ತೆ ತನ್ನ ಬಾಯಿಗೆ ತರುವುದಿಲ್ಲ!

ಪರಿಹಾಸ್ಯಗಾರನನ್ನು ಹೊಡೆದರೆ, ಮುಗ್ಧರು ಎಚ್ಚರಗೊಳ್ಳುವರು;

ವಿವೇಕಿಯನ್ನು ಗದರಿಸಿದರೆ, ಅವನು ಪರಿಜ್ಞಾನವನ್ನು ಗ್ರಹಿಸುವನು.

ಯಾರು ತಂದೆಯನ್ನು ದೋಚಿಕೊಂಡು ತಾಯಿಯನ್ನು ಓಡಿಸುವರೋ

ನಾಚಿಕೆಯನ್ನುಂಟುಮಾಡಿ, ನಿಂದೆಯನ್ನು ತರುತ್ತಾರೆ.

ಮಗನೇ, ನೀನು ಬುದ್ಧಿವಾದಕ್ಕೆ ಲಕ್ಷ್ಯಕೊಡದಿದ್ದರೆ,

ಪರಿಜ್ಞಾನದ ಮಾತುಗಳಿಂದ ದಾರಿತಪ್ಪುವೆ.

ಭ್ರಷ್ಟನ ಸಾಕ್ಷಿಯು ನ್ಯಾಯತೀರ್ಪನ್ನು ಗೇಲಿ ಮಾಡುತ್ತದೆ;

ದುಷ್ಟನ ಬಾಯಿಯು ದ್ರೋಹವನ್ನು ನುಂಗುವುದು.

ಪರಿಹಾಸ್ಯಗಾರರಿಗೆ ನ್ಯಾಯ ತೀರ್ಪುಗಳೂ,

ಬುದ್ಧಿಹೀನರ ಬೆನ್ನಿಗೆ ಪೆಟ್ಟುಗಳೂ ಸಿದ್ಧವಾಗಿವೆ.

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.