Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಜ್ಞಾನೋಕ್ತಿಗಳು 13
ಜ್ಞಾನಿಯಾದ ಮಗನು ತನ್ನ ತಂದೆಯ ಉಪದೇಶವನ್ನು ಸ್ವೀಕರಿಸುತ್ತಾನೆ;
ಆದರೆ ಅಪಹಾಸ್ಯ ಮಾಡುವವನು ಗದರಿಕೆಯನ್ನು ಕೇಳುವುದಿಲ್ಲ.
ತನ್ನ ಬಾಯಿಯ ಫಲದಿಂದ ಒಬ್ಬ ಮನುಷ್ಯನು ಶ್ರೇಷ್ಠವಾದದ್ದನ್ನು ಆನಂದಿಸುತ್ತಾನೆ,
ಆದರೆ ವಿಶ್ವಾಸದ್ರೋಹಿಗಳಿಗೆ ಹಿಂಸೆಯ ಹಸಿವು ಇರುತ್ತದೆ.
ತನ್ನ ಬಾಯನ್ನು ಕಾಯುವವನು ಜೀವವನ್ನು ಕಾಯುತ್ತಾನೆ;
ತನ್ನ ತುಟಿಗಳನ್ನು ಹತೋಟಿಯಲ್ಲಿಡದವನು ನಾಶವಾಗುವನು.
ಸೋಮಾರಿಯ ಹಸಿವು ಎಂದಿಗೂ ತುಂಬುವುದಿಲ್ಲ;
ಆದರೆ ಶ್ರಮಪಡುವವರ ಆಸೆಗಳು ಸಂಪೂರ್ಣವಾಗಿ ಈಡೇರುವವು.
ನೀತಿವಂತನು ಸುಳ್ಳನ್ನು ಹಗೆಮಾಡುತ್ತಾನೆ,
ಆದರೆ ದುಷ್ಟರು ತಮ್ಮನ್ನು ತಾವೇ ದುರ್ವಾಸನೆಗೊಳಪಡಿಸಿಕೊಳ್ಳುತ್ತಾರೆ
ಮತ್ತು ತಮ್ಮ ಮೇಲೆ ಅವಮಾನವನ್ನು ತಂದುಕೊಳ್ಳುತ್ತಾರೆ.
ನೀತಿಯು ಯಥಾರ್ಥವಂತನನ್ನು ಕಾಪಾಡುತ್ತದೆ;
ಆದರೆ ದುಷ್ಟತನವು ಪಾಪಿಯನ್ನು ಕೆಡವುತ್ತದೆ.
ಬಡವನಾಗಿದ್ದರೂ ಐಶ್ವರ್ಯವಂತನಾಗಿ ನಟಿಸುವವನು ಇದ್ದಾನೆ;
ಮತ್ತೊಬ್ಬನು ದರಿದ್ರನಾಗಿ ಕಾಣಿಸಿದರೂ ಬಹು ಸಿರಿವಂತನೇ.
ಐಶ್ವರ್ಯವಂತನ ಪ್ರಾಣದ ವಿಮೋಚನೆಯು ಅವನ ಐಶ್ವರ್ಯದಿಂದಲೇ;
ಆದರೆ ಬಡವನು ಬೆದರಿಕೆಗಳಿಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ.
ನೀತಿವಂತರ ಬೆಳಕು ಪ್ರಕಾಶಮಾನವಾಗಿ ಹೊಳೆಯುತ್ತದೆ;
ದುಷ್ಟರ ದೀಪವು ಆರಿಹೋಗುವುದು.
ಎಲ್ಲಿ ಗರ್ವವೋ ಅಲ್ಲಿ ಕಲಹ;
ಆದರೆ ಒಳ್ಳೆಯ ಸಲಹೆಯನ್ನು ತೆಗೆದುಕೊಳ್ಳುವವರಲ್ಲಿ ಜ್ಞಾನವು ಕಂಡುಬರುತ್ತದೆ.
ಅಪ್ರಾಮಾಣಿಕವಾಗಿ ಹೊಂದಿದ ಸಂಪತ್ತು ಕ್ಷಯಿಸುವುದು;
ಪ್ರಯಾಸದಿಂದ ಕೂಡಿಸಿದ ಸಂಪತ್ತು ವೃದ್ಧಿಗೊಳ್ಳುವುದು.
ನಿರೀಕ್ಷೆ ತಡವಾದರೆ ಹೃದಯವು ಅಸ್ವಸ್ಥಗೊಳ್ಳುತ್ತದೆ;
ಆಶೆಯು ಈಡೇರಿದರೆ, ಅದು ಜೀವಕರವಾದ ವೃಕ್ಷವು.
ದೇವರ ವಾಕ್ಯವನ್ನು ಉಲ್ಲಂಘಿಸುವವನು ನಾಶವಾಗುವನು;
ಆಜ್ಞೆಗೆ ಭಯಪಡುವವನು ಪ್ರತಿಫಲ ಹೊಂದುವನು.
ಮರಣದ ಪಾಶಗಳಿಂದ ತಪ್ಪಿಸಿಕೊಳ್ಳುವುದಕ್ಕೆ
ಜ್ಞಾನವಂತರ ಉಪದೇಶವು ಜೀವದ ಬುಗ್ಗೆಯಾಗಿದೆ.
ಒಳ್ಳೆಯ ಪ್ರಜ್ಞೆ ಇರುವ ವ್ಯಕ್ತಿಯನ್ನು ಗೌರವಿಸಲಾಗುತ್ತದೆ;
ಆದರೆ ವಿಶ್ವಾಸದ್ರೋಹಿಯ ಮಾರ್ಗವು ನಾಶಕರವಾಗಿದೆ.
ಪ್ರತಿ ಜಾಣನು ತಿಳುವಳಿಕೆಯಿಂದ ವರ್ತಿಸುತ್ತಾನೆ;
ಆದರೆ ಮೂರ್ಖನು ತನ್ನ ಮೂರ್ಖತ್ವವನ್ನು ಹೊರಗೆಡವುತ್ತಾನೆ.
ದುಷ್ಟ ದೂತನು ಕೇಡಿಗೆ ಬೀಳುತ್ತಾನೆ;
ಆದರೆ ನಂಬಿಗಸ್ತನಾದ ರಾಯಭಾರಿಯು ಆರೋಗ್ಯದಾಯಕನು.
ಬೋಧನೆಯನ್ನು ಕಡೆಗಣಿಸುವವನಿಗೆ ಬಡತನವೂ, ಅವಮಾನವೂ ಬರುವುವು;
ಗದರಿಕೆಯನ್ನು ಗಮನಿಸುವವನು ಸನ್ಮಾನ ಹೊಂದುವನು.
ಕನಸುಗಳು ನನಸಾಗುವುದನ್ನು ನೋಡುವುದು ಆಹ್ಲಾದಕರವಾಗಿರುತ್ತದೆ;
ಕೆಟ್ಟತನದಿಂದ ತಿರುಗುವುದು ಮೂರ್ಖರಿಗೆ ಅಸಹ್ಯವಾಗಿದೆ.
ಜ್ಞಾನವಂತರ ಜೊತೆಗೆ ನಡೆಯುವವನು ಜ್ಞಾನಿಯಾಗುವನು;
ಆದರೆ ಮೂರ್ಖರ ಜೊತೆಗಾರನು ಸಂಕಟಪಡುವನು.
ವಿಪತ್ತು ಪಾಪಿಗಳನ್ನು ಹಿಂಬಾಲಿಸುತ್ತದೆ;
ಆದರೆ ನೀತಿವಂತರಿಗೆ ಒಳ್ಳೆಯದು ಪ್ರತಿಫಲವಾಗುವುದು.
ಒಳ್ಳೆಯವನು ಮೊಮ್ಮಕ್ಕಳಿಗೆ ಆಸ್ತಿಯನ್ನು ಬಿಟ್ಟುಬಿಡುವನು;
ಆದರೆ ಪಾಪಿಯ ಸಂಪತ್ತು ನೀತಿವಂತರಿಗಾಗಿ ಸಂಗ್ರಹವಾಗಿದೆ.
ಬಡವರಿಗೆ ಜವುಳು ಭೂಮಿಯಲ್ಲಿಯೂ ಬಹು ಬೆಳೆಯು ಸಿಕ್ಕುತ್ತದೆ;
ಅನ್ಯಾಯವು ಅದನ್ನು ಹಾರಿಸಿಬಿಡುವುದು.
ಬೆತ್ತವನ್ನು ಹಿಡಿಯದವನು ತನ್ನ ಮಗನನ್ನು ಹಗೆಮಾಡುತ್ತಾನೆ;
ಆದರೆ ತಮ್ಮ ಮಕ್ಕಳನ್ನು ಪ್ರೀತಿಸುವವನು ಅವರನ್ನು ಶಿಸ್ತು ಮಾಡಲು ಜಾಗರೂಕರಾಗಿರುತ್ತಾನೆ.
ನೀತಿವಂತನು ತನ್ನ ಪ್ರಾಣವು ತೃಪ್ತಿಯಾಗುವವರೆಗೆ ತಿನ್ನುತ್ತಾನೆ;
ದುಷ್ಟರ ಹೊಟ್ಟೆಗೆ ಕೊರತೆಯಾಗುವುದು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.
Full source notice & licence · CC BY-SA 4.0 · SourceEdition imported 2026-10-25.