Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ
ಜ್ಞಾನೋಕ್ತಿಗಳು 10
ಸೊಲೊಮೋನನ ಜ್ಞಾನೋಕ್ತಿಗಳು
ಸೊಲೊಮೋನನ ಜ್ಞಾನೋಕ್ತಿಗಳು:
ಜ್ಞಾನಿಯಾದ ಮಗನು ತಂದೆಗೆ ಸಂತೋಷವನ್ನು ಉಂಟುಮಾಡುತ್ತಾನೆ.
ಅಜ್ಞಾನಿಯಾದ ಮಗನಾದರೋ ತನ್ನ ತಾಯಿಗೆ ಶೋಕವನ್ನುಂಟು ಮಾಡುತ್ತಾನೆ.
ಅನ್ಯಾಯದ ಸಂಪತ್ತುಗಳು ಶಾಶ್ವತವಲ್ಲ,
ಆದರೆ ನೀತಿಯು ಮರಣದಿಂದ ಬಿಡಿಸುತ್ತದೆ.
ನೀತಿವಂತನನ್ನು ಹಸಿವೆಯಿಂದ ಬಳಲುವಂತೆ ಯೆಹೋವ ದೇವರು ಬಿಡುವುದಿಲ್ಲ;
ಆದರೆ ದುಷ್ಟರ ಆಶೆಯನ್ನು ಅವರು ಭಂಗಪಡಿಸುತ್ತಾರೆ.
ಆಲಸ್ಯದ ಕೈ ದರಿದ್ರನನ್ನಾಗಿ ಮಾಡುವದು;
ಆದರೆ ಚುರುಕಾದ ಕೈ ಐಶ್ವರ್ಯವನ್ನುಂಟು ಮಾಡುತ್ತದೆ.
ಬೇಸಿಗೆಯಲ್ಲಿ ಫಸಲನ್ನು ಕೂಡಿಸುವವರು ಬುದ್ಧಿವಂತ ಮಕ್ಕಳು,
ಸುಗ್ಗಿಯಲ್ಲಿ ನಿದ್ರೆ ಮಾಡುವವರು ನಾಚಿಕೆಗೆಟ್ಟ ಮಕ್ಕಳು.
ನೀತಿವಂತರ ತಲೆಯ ಮೇಲೆ ಆಶೀರ್ವಾದವಿದೆ;
ಆದರೆ ದುಷ್ಟರ ಬಾಯಲ್ಲಿ ಕ್ರೌರ್ಯ ಅಡಗಿದೆ.
ನೀತಿವಂತರ ಸ್ಮರಣೆಯು ಆಶೀರ್ವಾದಕ್ಕೆ ಆಸ್ಪದ;
ಆದರೆ ದುಷ್ಟನ ಹೆಸರು ಕೊಳೆಯುವುದು.1
ಜ್ಞಾನ ಹೃದಯದವರು ಆಜ್ಞೆಗಳನ್ನು ಸ್ವೀಕರಿಸುವರು;
ಆದರೆ ಹರಟೆಯ ಮೂರ್ಖನು ಬೀಳುವನು.
ಯಥಾರ್ಥ ನಡತೆಯವರು ಸುರಕ್ಷಿತವಾಗಿ ಜೀವಿಸುತ್ತಾರೆ;
ಆದರೆ ವಕ್ರಮಾರ್ಗಗಳಲ್ಲಿ ನಡೆಯುವವನು ಬಯಲಿಗೆ ಬರುವನು.
ದುರುದ್ದೇಶದಿಂದ ಕಣ್ಣು ಮಿಟಕಿಸುವವನು ದುಃಖವನ್ನು ಉಂಟುಮಾಡುತ್ತಾನೆ,
ಆದರೆ ಹರಟೆಯ ಮೂರ್ಖನು ಬೀಳುವನು.
ನೀತಿವಂತನ ಬಾಯಿಯು ಜೀವದ ಬುಗ್ಗೆ;
ಆದರೆ ದುಷ್ಟನ ಬಾಯಿ ಹಿಂಸೆಯನ್ನು ಮರೆಮಾಡುತ್ತದೆ.
ದ್ವೇಷವು ಜಗಳಗಳನ್ನು ಎಬ್ಬಿಸುತ್ತದೆ;
ಆದರೆ ಪ್ರೀತಿಯು ಎಲ್ಲಾ ಪಾಪಗಳನ್ನು ಮುಚ್ಚುತ್ತದೆ.
ವಿವೇಕವುಳ್ಳ ತುಟಿಗಳಲ್ಲಿ ಜ್ಞಾನವು ಸಿಕ್ಕುತ್ತದೆ;
ವಿವೇಕವಿಲ್ಲದವನ ಬೆನ್ನಿಗೆ ಬೆತ್ತವೇ ಸರಿ.
ಜ್ಞಾನಿಗಳು ತಿಳುವಳಿಕೆಯನ್ನು ಇಟ್ಟುಕೊಳ್ಳುತ್ತಾರೆ;
ಆದರೆ ಮೂರ್ಖನ ಬಾಯಿ ವಿನಾಶವನ್ನು ಆಹ್ವಾನಿಸುತ್ತದೆ.
ಐಶ್ವರ್ಯವಂತರಿಗೆ ಸಂಪತ್ತೇ ಅವರ ಬಲವಾದ ಕೋಟೆ;
ಆದರೆ, ಬಡತನವೇ ಬಡವರ ನಾಶನಕ್ಕೆ ಕಾರಣ.
ನೀತಿವಂತರ ದುಡಿತವು ಜೀವವಾಗುವುದು;
ಆದರೆ, ದುಷ್ಟರ ಆದಾಯವು ಪಾಪ ಹಾಗು ಮರಣ.
ಶಿಸ್ತನ್ನು ಕೈಗೊಳ್ಳುವವನು ಜೀವದ ಮಾರ್ಗವನ್ನು ತೋರಿಸುವನು;
ಆದರೆ ತಿದ್ದುಪಾಟನ್ನು ತಿರಸ್ಕರಿಸುವವನು ಇತರರ ದಾರಿತಪ್ಪಿಸುವನು.
ದ್ವೇಷವನ್ನು ಮರೆಮಾಚುವವನು ಸುಳ್ಳುಗಾರ
ಮತ್ತು ಚಾಡಿ ಹೇಳುವವನು ಮೂರ್ಖನು.
ಅತಿಯಾದ ಮಾತುಗಳಿಂದ ಪಾಪವು ಕೊನೆಗೊಳ್ಳುವುದಿಲ್ಲ.
ಆದರೆ ಜ್ಞಾನವಂತನು ತನ್ನ ನಾಲಿಗೆಯನ್ನು ತಡೆಯುವನು.
ನೀತಿವಂತರ ನಾಲಿಗೆಯು ಚೊಕ್ಕಬೆಳ್ಳಿಯಂತಿದೆ;
ದುಷ್ಟರ ಹೃದಯವು ಬೆಲೆಯಿಲ್ಲದ್ದು.
ನೀತಿವಂತರ ತುಟಿಗಳು ಅನೇಕರನ್ನು ಪೋಷಿಸುತ್ತವೆ,
ಜ್ಞಾನದ ಕೊರತೆಯಿಂದ ಬುದ್ಧಿಹೀನರು ಸಾಯುತ್ತಾರೆ.
ಯೆಹೋವ ದೇವರ ಆಶೀರ್ವಾದವು ಸಂಪತ್ತನ್ನು ಉಂಟುಮಾಡುವುದು;
ಅವರು ಅದರೊಂದಿಗೆ ಯಾವ ದುಃಖವನ್ನೂ ಸೇರಿಸುವುದಿಲ್ಲ.
ಮೂರ್ಖನಿಗೆ ಕೇಡು ಮಾಡುವುದರಲ್ಲಿ ಆನಂದ;
ಆದರೆ ತಿಳುವಳಿಕೆಯ ವ್ಯಕ್ತಿಯು ಜ್ಞಾನದಲ್ಲಿ ಸಂತೋಷಪಡುತ್ತಾನೆ.
ದುಷ್ಟನ ಭೀತಿಯೇ ಅವನನ್ನು ಹಿಂದಿಕ್ಕುವುದು;
ಆದರೆ ನೀತಿವಂತರ ಇಷ್ಟವು ಸಫಲವಾಗುವುದು.
ಬಿರುಗಾಳಿಯು ಬೀಸಿದರೆ, ದುಷ್ಟರು ಇಲ್ಲವಾಗುವರು;
ಆದರೆ ನೀತಿವಂತರು ಶಾಶ್ವತವಾಗಿ ನಿಲ್ಲುವರು.
ಹಲ್ಲುಗಳಿಗೆ ಹುಳಿಯೂ, ಕಣ್ಣುಗಳಿಗೆ ಹೊಗೆಯೂ ಹೇಗೋ,
ಯಜಮಾನನಿಗೆ ಸೋಮಾರಿಯು ಹಾಗೆಯೇ ಇರುವನು.
ಯೆಹೋವ ದೇವರ ಭಯವು ಜೀವನದ ದಿನಗಳನ್ನು ಹೆಚ್ಚಿಸುತ್ತದೆ;
ದುಷ್ಟರ ವರ್ಷಗಳು ಕಡಿಮೆ ಆಗುವವು.
ನೀತಿವಂತರ ನಿರೀಕ್ಷೆಯು ಆನಂದಕರವಾಗಿರುವುದು;
ಆದರೆ ದುಷ್ಟರ ನಿರೀಕ್ಷೆಯು ನಾಶವಾಗುವುದು.
ಯೆಹೋವ ದೇವರ ಮಾರ್ಗವು ನಿರ್ದೋಷಿಗಳಿಗೆ ಆಶ್ರಯವಾಗಿದೆ;
ಆದರೆ ಕೇಡು ಮಾಡುವವರಿಗೆ ಅದು ವಿನಾಶಕರವಾಗಿದೆ.
ನೀತಿವಂತರು ಎಂದಿಗೂ ಕದಲುವುದೇ ಇಲ್ಲ;
ಆದರೆ ದುಷ್ಟರು ಭೂಮಿಯಲ್ಲಿ ನಿಲ್ಲುವುದಿಲ್ಲ.
ನೀತಿವಂತರ ಬಾಯಲ್ಲಿ ಜ್ಞಾನವು ಫಲಿಸುತ್ತದೆ;
ಆದರೆ ಮೂರ್ಖನ ನಾಲಿಗೆಯು ಕತ್ತರಿಸಲಾಗುವುದು.
ಯೋಗ್ಯವಾದದ್ದು ಯಾವುದೆಂದು ನೀತಿವಂತರ ತುಟಿಗಳಿಗೆ ತಿಳಿಯುವುದು,
ಆದರೆ, ದುಷ್ಟರ ಬಾಯಿ ಮೂರ್ಖತನವನ್ನೇ ಹೊರಗೆಡವುದು.
Source notes (1)
- Footnote ಆದಿ 48:20
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.
Full source notice & licence · CC BY-SA 4.0 · SourceEdition imported 2026-10-25.