Skip to content
BibleKenya

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ

ದಾನಿಯೇಲ 9

ದಾನಿಯೇಲನ ಪ್ರಾರ್ಥನೆ

ಅಹಷ್ವೇರೋಷನ ಮಗನೂ ಮೇದ್ಯಯ ವಂಶದವನೂ ಆದ ದಾರ್ಯಾವೆಷನ ಆಳ್ವಿಕೆಯ ಪ್ರಥಮ ವರ್ಷದಲ್ಲಿ ಬಾಬಿಲೋನ್ ರಾಜ್ಯದ ಮೇಲೆ ಅಧಿಕಾರಿಯಾಗಿದ್ದಾಗ, ದಾನಿಯೇಲನಾದ ನಾನು ಪವಿತ್ರ ಗ್ರಂಥಗಳನ್ನು ಪರೀಕ್ಷಿಸಿ, ಯೆಹೋವ ದೇವರ ಪ್ರವಾದಿ ಯೆರೆಮೀಯನಿಗೆ ದಯಪಾಲಿಸಿದ ವಾಕ್ಯಾನುಸಾರ, ಯೆರೂಸಲೇಮ್ ಪಾಳುಬಿದ್ದಿರಬೇಕಾದ ಪೂರ್ಣ ಕಾಲಾವಧಿ ಎಪ್ಪತ್ತು ವರ್ಷಗಳೆಂದು ತಿಳಿದುಕೊಂಡೆನು. ಆದ್ದರಿಂದ ನಾನು ಉಪವಾಸದಿಂದ ಗೋಣಿತಟ್ಟನ್ನು ಸುತ್ತಿಕೊಂಡು, ಬೂದಿಯನ್ನು ಬಳಿದುಕೊಂಡು, ಪ್ರಾರ್ಥನೆಗಳಿಂದ ಮತ್ತು ವಿಜ್ಞಾಪನೆಗಳಿಂದ ಕರ್ತರಾದ ದೇವರ ಕಡೆಗೆ ನನ್ನ ಮುಖವನ್ನು ತಿರುಗಿಸಿದೆನು.

ನಾನು ನನ್ನ ದೇವರಾದ ಯೆಹೋವ ದೇವರಿಗೆ ಪ್ರಾರ್ಥಿಸಿ, ಅರಿಕೆಮಾಡಿದೆನು:

“ಕರ್ತನೇ, ಮಹೋನ್ನತ ಮತ್ತು ಅದ್ಭುತ ದೇವರೇ, ನಿಮ್ಮನ್ನು ಪ್ರೀತಿಮಾಡಿ, ನಿಮ್ಮ ಆಜ್ಞೆಗಳನ್ನು ಕೈಗೊಂಡು ನಡೆಯುವವರಿಗೆ ಒಡಂಬಡಿಕೆಯ ಪ್ರೀತಿಯನ್ನೂ ಇಟ್ಟು ನೆರವೇರಿಸುವವರೇ, ನಾವು ಪಾಪಮಾಡಿದ್ದೇವೆ ಮತ್ತು ಅಕ್ರಮಗಳನ್ನು ಮಾಡಿದ್ದೇವೆ. ಕೆಟ್ಟವರಾಗಿ ನಡೆದಿದ್ದೇವೆ ಮತ್ತು ತಿರುಗಿಬಿದ್ದಿದ್ದೇವೆ. ನಿಮ್ಮ ಕಟ್ಟಳೆಗಳನ್ನು ಮತ್ತು ನ್ಯಾಯಗಳನ್ನು ತೊರೆದುಬಿಟ್ಟಿದ್ದೇವೆ. ನಿಮ್ಮ ಹೆಸರಿನಲ್ಲಿ ನಮ್ಮ ಅರಸರಿಗೂ, ನಮ್ಮ ರಾಜಕುಮಾರರಿಗೂ, ನಮ್ಮ ಪೂರ್ವಜರಿಗೂ ದೇಶದ ಎಲ್ಲಾ ಜನರಿಗೂ ಮಾತನಾಡಿದ ನಿಮ್ಮ ಸೇವಕರಾದ ಪ್ರವಾದಿಗಳಿಗೆ ಕಿವಿಗೊಡಲಿಲ್ಲ.

“ಕರ್ತದೇವರೇ, ನೀವು ನೀತಿವಂತರು, ಆದರೆ ನಾವು ಈ ದಿನ ಬಹಳ ಲಜ್ಜೆಗೆಟ್ಟವರು. ಯೆಹೂದ್ಯರು ಹಾಗು ಯೆರೂಸಲೇಮಿನ ನಿವಾಸಿಗಳು ಈಗಾಗಲೇ ನಿಮಗೆ ವಿರುದ್ಧ ಮಾಡಿದ ದ್ರೋಹದ ನಿಮಿತ್ತ ನಿಮ್ಮಿಂದ ದೇಶವಿದೇಶಗಳಿಗೆ ಚದರಿಹೋಗಿದ್ದಾರೆ. ದೂರದ ದೇಶಗಳಿಗೂ, ಹತ್ತಿರದ ನಾಡುಗಳಿಗೂ ಚದರಿಹೋಗಿರುವ ಆ ಎಲ್ಲಾ ಇಸ್ರಾಯೇಲರು ನಾಚಿಕೆಗೆ ಈಡಾಗಿದ್ದಾರೆ. ಯೆಹೋವ ದೇವರೇ, ನಮ್ಮ ಅರಸರಿಗೂ ನಮ್ಮ ರಾಜಕುಮಾರರಿಗೂ, ನಮ್ಮ ಪೂರ್ವಜರಿಗೂ, ನಮಗೂ ನಾಚಿಕೆಯಾಗಿದೆ. ಏಕೆಂದರೆ ನಿಮಗೆ ವಿರುದ್ಧವಾಗಿ ನಾವು ಪಾಪಮಾಡಿದ್ದೇವೆ. ನಾವು ಆತನಿಗೆ ವಿರುದ್ಧವಾಗಿ ತಿರುಗಿ ಬಿದ್ದಿದ್ದರೂ, ನಮ್ಮ ಕರ್ತದೇವರು ಕರುಣೆಯುಳ್ಳವರೂ ಕ್ಷಮಿಸುವವರೂ ಆಗಿದ್ದಾರೆ. ನಾವು ನಮ್ಮ ದೇವರಾದ ಯೆಹೋವ ದೇವರಿಗೆ ವಿಧೇಯರಾಗಲಿಲ್ಲ, ಅವರು ತಮ್ಮ ಸೇವಕರಾದ ಪ್ರವಾದಿಗಳ ಮೂಲಕ ನಮಗೆ ನೀಡಿದ ನಿಯಮಗಳನ್ನು ಪಾಲಿಸಲಿಲ್ಲ. ಎಲ್ಲಾ ಇಸ್ರಾಯೇಲರು ನಿಮ್ಮ ನಿಯಮವನ್ನು ಮೀರಿ ನಿಮಗೆ ವಿಧೇಯರಾಗದೇ ತೊಲಗಿ ಹೋದರು.

“ಆದ್ದರಿಂದ ಶಾಪವೂ, ದೇವರ ಸೇವಕನಾದ ಮೋಶೆಯು ನಿಯಮದಲ್ಲಿ ಬರೆದ ನ್ಯಾಯ ತೀರ್ಪುಗಳೂ ಅವರಿಗೆ ವಿರುದ್ಧವಾಗಿ ನಾವು ಮಾಡಿದ ಪಾಪದ ನಿಮಿತ್ತ, ನಮ್ಮ ಮೇಲೆ ಸುರಿಯಲಾಗಿದೆ. ಅವರು ನಮಗೂ, ನಮಗೆ ನ್ಯಾಯ ತೀರಿಸಿದ ನ್ಯಾಯಾಧಿಪತಿಗಳಿಗೂ ವಿರೋಧವಾಗಿ ತಾವು ಹೇಳಿದ ಮಾತುಗಳನ್ನು ನೆರವೇರಿಸಿ, ನಮ್ಮ ಮೇಲೆ ದೊಡ್ಡ ವಿನಾಶ ಬರುವ ಹಾಗೆ ಮಾಡಿದ್ದಾರೆ. ಯೆರೂಸಲೇಮಿನಲ್ಲಿ ನಡೆದ ಹಾಗೆ ಇಡೀ ಆಕಾಶದ ಕೆಳಗೆ ಎಲ್ಲೂ ನಡೆಯಲಿಲ್ಲ. ಮೋಶೆಯ ನಿಯಮದಲ್ಲಿ ಬರೆದಿರುವ ಪ್ರಕಾರ, ಈ ಎಲ್ಲಾ ವಿನಾಶ ನಮ್ಮ ಮೇಲೆ ಬಂದಿದೆ. ಆದರೂ ನಾವು ನಮ್ಮ ಅಕ್ರಮಗಳನ್ನು ಬಿಟ್ಟು, ತಿರುಗಿಕೊಂಡು ನಿಮ್ಮ ಸತ್ಯವನ್ನು ತಿಳಿದುಕೊಳ್ಳುವಂತೆ, ನಮ್ಮ ದೇವರಾದ ಯೆಹೋವ ದೇವರ ದಯೆಯನ್ನು ಬೇಡಿಕೊಳ್ಳಲಿಲ್ಲ. ನಮ್ಮ ದೇವರಾದ ಯೆಹೋವ ದೇವರು ತಾವು ಮಾಡುವ ಎಲ್ಲದರಲ್ಲಿಯೂ ನೀತಿವಂತರಾಗಿದ್ದುದರಿಂದ, ವಿನಾಶವನ್ನು ನಮ್ಮ ಮೇಲೆ ಬರಮಾಡಲು ಯೆಹೋವ ದೇವರು ಹಿಂಜರಿಯಲಿಲ್ಲ. ಆದರೂ ನಾವು ಅವರಿಗೆ ವಿಧೇಯರಾಗಲೇ ಇಲ್ಲ.

“ಈಗ ನಮ್ಮ ಕರ್ತದೇವರೇ, ನಿಮ್ಮ ಭುಜಬಲವನ್ನು ತೋರಿಸಿ, ನಿಮ್ಮ ಜನರನ್ನು ಈಜಿಪ್ಟ್ ದೇಶದೊಳಗಿಂದ ಪಾರುಮಾಡಿ, ಈವರೆಗೂ ಪ್ರಸಿದ್ಧವಾದ ಹೆಸರು ಪಡೆದುಕೊಂಡವರೇ, ನಾವು ಪಾಪಮಾಡಿದ್ದೇವೆ, ನಾವು ಕೆಟ್ಟವರಾಗಿ ನಡೆದುಕೊಂಡಿದ್ದೇವೆ. ಕರ್ತದೇವರೇ, ನಿಮ್ಮ ಎಲ್ಲಾ ನೀತಿಗಳ ಪ್ರಕಾರ ನಿಮ್ಮ ಕೋಪವನ್ನು, ನಿಮ್ಮ ಉಗ್ರತ್ವವನ್ನು ನಿಮ್ಮ ಪಟ್ಟಣವಾದ ಯೆರೂಸಲೇಮಿನಿಂದಲೂ ನಿಮ್ಮ ಪರಿಶುದ್ಧ ಪರ್ವತದಿಂದಲೂ ತಿರುಗಿಸಿಬಿಡಿರಿ. ನಮ್ಮ ಪಾಪಗಳ ನಿಮಿತ್ತದಿಂದಲೂ, ನಮ್ಮ ಪಿತೃಗಳ ಅಕ್ರಮಗಳ ನಿಮಿತ್ತದಿಂದಲೂ ಯೆರೂಸಲೇಮ್ ಮತ್ತು ನಿಮ್ಮ ಜನರು ನೆರೆಹೊರೆಯವರೆಲ್ಲರ ನಿಂದೆಗೆ ಗುರಿಯಾಗಿವೆ.

“ಈಗ, ನಮ್ಮ ದೇವರೇ, ಈ ನಿಮ್ಮ ಸೇವಕನ ಪ್ರಾರ್ಥನೆ ಮತ್ತು ವಿಜ್ಞಾಪನೆಗಳನ್ನು ಕೇಳಿರಿ. ಕರ್ತದೇವರೇ, ಹಾಳಾಗಿರುವ ನಿಮ್ಮ ಪರಿಶುದ್ಧ ಸ್ಥಳವನ್ನು ನಿಮ್ಮ ನಿಮಿತ್ತವಾಗಿ ಅನುಗ್ರಹದಿಂದ ನೋಡಿರಿ. ನನ್ನ ದೇವರೇ, ನೀವು ಕಿವಿಗೊಟ್ಟು ಕೇಳಿರಿ. ನಿಮ್ಮ ಕಣ್ಣುಗಳನ್ನು ತೆರೆದು ನಮ್ಮ ನಾಶವನ್ನೂ, ನಿಮ್ಮ ಹೆಸರಿನಿಂದ ಕರೆಯಲಾಗುವ ಈ ಹಾಳಾಗಿರುವ ಪಟ್ಟಣವನ್ನೂ ನೋಡಿರಿ. ಏಕೆಂದರೆ ನಾವು ನಮ್ಮ ನೀತಿಗೋಸ್ಕರವಲ್ಲ, ನಿಮ್ಮ ಮಹಾ ಕರುಣೆಗಾಗಿಯೇ ನಮ್ಮ ವಿಜ್ಞಾಪನೆಗಳನ್ನು ನಿಮ್ಮ ಮುಂದೆ ಅರ್ಪಿಸುತ್ತೇವೆ. ಕರ್ತದೇವರೇ ಕೇಳಿರಿ! ಕರ್ತದೇವರೇ ಕ್ಷಮಿಸಿರಿ! ಕರ್ತದೇವರೇ ಲಾಲಿಸಿರಿ ಮತ್ತು ಕಾರ್ಯವನ್ನು ಸಾಧಿಸಿರಿ! ನನ್ನ ದೇವರೇ, ನಿಮ್ಮ ನಿಮಿತ್ತವಾಗಿ ತಡಮಾಡಬೇಡಿರಿ. ಏಕೆಂದರೆ ನಿಮ್ಮ ಪಟ್ಟಣವೂ ನಿಮ್ಮ ಜನರೂ ನಿಮ್ಮ ಹೆಸರನ್ನು ಧರಿಸಿದ್ದಾರೆ.”

ಎಪ್ಪತ್ತು “ಏಳುಗಳು”

ನಾನು ಮಾತಾಡುತ್ತಾ, ಪ್ರಾರ್ಥನೆ ಮಾಡುತ್ತಾ ನನ್ನ ಪಾಪವನ್ನೂ, ನನ್ನ ಜನರಾದ ಇಸ್ರಾಯೇಲರ ಪಾಪವನ್ನೂ ಅರಿಕೆಮಾಡುತ್ತಾ, ನನ್ನ ದೇವರಾದ ಯೆಹೋವ ದೇವರ ಮುಂದೆ ಅವರ ಪರಿಶುದ್ಧ ಪರ್ವತಕ್ಕೋಸ್ಕರವಾಗಿ, ವಿಜ್ಞಾಪಿಸುತ್ತಿರಲಾಗಿ, ನಾನು ಇನ್ನೂ ಪ್ರಾರ್ಥಿಸುತ್ತಿದ್ದಾಗ, ನಾನು ಮೊದಲ ದರ್ಶನದಲ್ಲಿ ಕಂಡಿದ್ದ ಸುಮಾರು ಸಾಯಂಕಾಲದ ನೈವೇದ್ಯವನ್ನು ಅರ್ಪಿಸುವ ಹೊತ್ತಿನಲ್ಲಿ, ನನ್ನ ಬಳಿ ಗಬ್ರಿಯೇಲನು ಬೇಗನೆ ಹಾರಿ ಬಂದು, ನನಗೆ, “ದಾನಿಯೇಲನೇ, ನಿನಗೆ ವಿವೇಕವನ್ನೂ, ಬುದ್ಧಿಯನ್ನೂ ಕೊಡುವುದಕ್ಕೆ ಈಗ ನಾನು ಬಂದಿದ್ದೇನೆ. ನೀನು ವಿಜ್ಞಾಪನೆ ಮಾಡಿದ ಕೂಡಲೇ ಉತ್ತರ ಸಿಕ್ಕಿತು. ಅದನ್ನು ನಿನಗೆ ತಿಳಿಸುವುದಕ್ಕೆ ನಾನು ಬಂದಿದ್ದೇನೆ. ಏಕೆಂದರೆ ನೀನು ಅತಿ ಪ್ರಿಯನಾಗಿರುವೆ. ಆದ್ದರಿಂದ ವಿಷಯವನ್ನು ಗ್ರಹಿಸಿಕೊಂಡು ದರ್ಶನವನ್ನು ತಿಳಿದುಕೋ.

“ಅಕ್ರಮಗಳನ್ನು ಮುಗಿಸುವುದಕ್ಕೂ, ಪಾಪಗಳನ್ನು ಮುಚ್ಚುವುದಕ್ಕೂ, ಅಪರಾಧಗಳಿಗೆ ಪ್ರಾಯಶ್ಚಿತ್ತ ಮಾಡುವುದಕ್ಕೂ, ನಿತ್ಯವಾದ ನೀತಿಯನ್ನು ಬರಮಾಡುವುದಕ್ಕೂ, ಆ ದರ್ಶನಕ್ಕೂ, ಪ್ರವಾದಿಯ ನುಡಿಗೆ ಮುದ್ರೆಹಾಕುವುದಕ್ಕೂ, ಮಹಾಪರಿಶುದ್ಧ ಸ್ಥಳವನ್ನು ಅಭಿಷೇಕ ಮಾಡುವುದಕ್ಕೂ ನಿನ್ನ ಜನರ ಮೇಲೆಯೂ, ನಿನ್ನ ಪರಿಶುದ್ಧ ಪಟ್ಟಣದ ಮೇಲೆಯೂ ಎಪ್ಪತ್ತು ವಾರಗಳು1 ಕಳೆಯಬೇಕು ಎಂದು ನಿಷ್ಕರ್ಷೆಯಾಗಿದೆ.

“ಆದ್ದರಿಂದ ನೀನು ಅರಿತು ತಿಳಿಯಬೇಕಾದದ್ದು ಏನೆಂದರೆ, ಯೆರೂಸಲೇಮನ್ನು ತಿರುಗಿ ಕಟ್ಟಲು ಆಜ್ಞೆ ಹೊರಡುವ ದಿನದಿಂದ, ಆಳುವ ಒಬ್ಬ ಅಭಿಷಿಕ್ತರು ಬರುವುದರೊಳಗೆ ಏಳು ವಾರಗಳು ಕಳೆಯಬೇಕು! ಅದು ಪುನಃ ಕಟ್ಟಿದ ಮೇಲೆ, ಅರವತ್ತೆರಡು ವಾರಗಳು ಇರುವುದು. ಕಷ್ಟಕಾಲದಲ್ಲಿ ಬೀದಿ ಚೌಕಗಳಿಂದಲೂ ಕೋಟೆಕೊತ್ತಲುಗಳಿಂದಲೂ ಅದು ಕಟ್ಟಲಾಗುವುದು. ಅರವತ್ತೆರಡು ವಾರಗಳಾದ ಮೇಲೆ ಆ ಅಭಿಷಿಕ್ತರನ್ನು ಕೊಂದುಹಾಕುವರು. ಅವರಿಗೆ ಏನೂ ಇರುವುದಿಲ್ಲ. ಆದರೆ ನುಗ್ಗುವ ಪ್ರಭುವಿನ ಜನರು ಪಟ್ಟಣವನ್ನೂ, ಪರಿಶುದ್ಧ ಸ್ಥಳವನ್ನೂ ನಾಶಮಾಡುವರು. ಪ್ರಳಯದಿಂದ ಅದು ಅಂತ್ಯವಾಗುವುದು. ಅಂತ್ಯದವರೆಗೂ ಯುದ್ಧವಾಗಿ ನಾಶ ಸಂಭವಿಸುವುದು. ಅವನು ಒಂದು ವಾರಕ್ಕಾಗಿ ಬಹಳ ಜನರೊಂದಿಗೆ ದೃಢವಾದ ಒಡಂಬಡಿಕೆಯನ್ನು ಮಾಡಿಕೊಳ್ಳುವನು. ವಾರದ ಅರ್ಧದಲ್ಲಿ ಯಜ್ಞವನ್ನೂ, ಅರ್ಪಣೆಯನ್ನೂ ನಿಲ್ಲಿಸುವನು. ದೇವಾಲಯದಲ್ಲಿ ಹಾಳುಮಾಡುವ ಅಸಹ್ಯ ವಸ್ತುವನ್ನು ಅವನು ಸ್ಥಾಪಿಸುವನು. ಇದು ಅವನ ಮೇಲೆ ನಿರ್ಣಯವಾದದ್ದು, ಸುರಿಯುವ ತನಕ ಇರುವುದು,” ಎಂದು ಹೇಳಿದನು.

Source notes (1)
  1. Footnote ಎಪ್ಪತ್ತು ವಾರಗಳು ಎಪ್ಪತ್ತು “ಏಳುಗಳು”

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.