Skip to content
BibleKenya

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ

2 ಪೂರ್ವಕಾಲ ವೃತ್ತಾಂತ 13

ಯೆಹೂದ್ಯರ ಅರಸನಾದ ಅಬೀಯನು

ಅರಸನಾದ ಯಾರೊಬ್ಬಾಮನ ಆಳಿಕೆಯ ಹದಿನೆಂಟನೆಯ ವರ್ಷದಲ್ಲಿ ಅಬೀಯನು ಯೆಹೂದದ ಅರಸನಾಗಿ, ಯೆರೂಸಲೇಮಿನಲ್ಲಿ ಮೂರು ವರ್ಷ ಆಳಿದನು. ಅವನ ತಾಯಿಯ ಹೆಸರು ಮೀಕಾಯ, ಇವಳು ಗಿಬೆಯದ ಉರಿಯೇಲನ ಮಗಳು1.

ಅಬೀಯನಿಗೂ, ಯಾರೊಬ್ಬಾಮನಿಗೂ ಯುದ್ಧ ಉಂಟಾಗಿತ್ತು. ಆಗ ಅಬೀಯನು ಯುದ್ಧಭಟರಾದ ಪರಾಕ್ರಮಶಾಲಿಗಳ ಸೈನ್ಯವನ್ನು ಯುದ್ಧಕ್ಕೆ ಸಿದ್ಧಮಾಡಿದನು. ಆಯ್ಕೆಯಾದ ನಾಲ್ಕು ಲಕ್ಷ ಜನರಿದ್ದರು. ಯಾರೊಬ್ಬಾಮನು ಅವನಿಗೆ ಎದುರಾಗಿ ಎಂಟು ಲಕ್ಷಮಂದಿ ಆಯ್ಕೆಯಾದ ಪರಾಕ್ರಮಶಾಲಿಗಳನ್ನು ಯುದ್ಧಕ್ಕೆ ನಿಲ್ಲಿಸಿದನು.

ಆಗ ಅಬೀಯನು ಎಫ್ರಾಯೀಮ್ ಬೆಟ್ಟದಲ್ಲಿರುವ ಚೆಮಾರಯಿಮ್ ಎಂಬ ಬೆಟ್ಟದ ಮೇಲೆ ನಿಂತು, “ಯಾರೊಬ್ಬಾಮನೇ, ಸಮಸ್ತ ಇಸ್ರಾಯೇಲರೇ, ನನ್ನ ಮಾತು ಕೇಳಿರಿ. ಇಸ್ರಾಯೇಲಿನ ದೇವರಾದ ಯೆಹೋವ ದೇವರು ಇಸ್ರಾಯೇಲಿನ ಮೇಲೆ ರಾಜ್ಯವನ್ನು ಎಂದೆಂದಿಗೂ ದಾವೀದನಿಗೂ, ಅವನ ವಂಶದವರಿಗೂ ಉಪ್ಪಿನ ಒಡಂಬಡಿಕೆಯಿಂದ ಕೊಟ್ಟರೆಂದು ನಿಮಗೆ ಗೊತ್ತಿಲ್ಲವೋ. ಆದರೆ ದಾವೀದನ ಮಗ ಸೊಲೊಮೋನನ ಸೇವಕನಾಗಿದ್ದ ನೆಬಾಟನ ಮಗ ಯಾರೊಬ್ಬಾಮನು ತನ್ನ ಯಜಮಾನನ ಮೇಲೆ ತಿರುಗಿಬಿದ್ದನು. ಇದಲ್ಲದೆ ನಿಷ್ಪ್ರಯೋಜಕರಾದ ದುಷ್ಟರು ಅವನ ಬಳಿಗೆ ಕೂಡಿಬಂದು, ಸೊಲೊಮೋನನ ಮಗ ರೆಹಬ್ಬಾಮನು ಎಳೆಯ ಪ್ರಾಯದವನೂ, ನಿರ್ಣಯಿಸಲಾಗದವನೂ ಅವರನ್ನು ಎದುರಿಸಲು ಬಲವಿಲ್ಲದವನೂ ಆಗಿರುವುದರಿಂದ ಅವನಿಗೆ ವಿರೋಧವಾಗಿ ತಮ್ಮನ್ನು ಬಲಪಡಿಸಿಕೊಂಡರು.

“ಈಗ ದಾವೀದನ ವಂಶಜರ ಕೈಯಲ್ಲಿರುವ ಯೆಹೋವ ದೇವರ ರಾಜ್ಯವನ್ನು ಎದುರಿಸುತ್ತೇವೆಂದು ನೀವು ಹೇಳಿಕೊಳ್ಳುತ್ತೀರಿ. ಇದಲ್ಲದೆ ನೀವು ಬಹು ಗುಂಪಾಗಿದ್ದೀರಿ. ಯಾರೊಬ್ಬಾಮನು ದೇವರುಗಳಾಗಿ ನಿಮಗೆ ಮಾಡಿದ ಬಂಗಾರದ ಕರುಗಳು ನಿಮ್ಮಲ್ಲಿ ಉಂಟು. ನೀವು ಯೆಹೋವ ದೇವರ ಯಾಜಕರಾದ ಆರೋನನ ವಂಶದವರಾದ ಲೇವಿಯರನ್ನೂ ತಳ್ಳಿ ಹಾಕಿ, ಅನ್ಯದೇಶಗಳ ಜನರಂತೆ ನಿಮಗೆ ಯಾಜಕರನ್ನು ಮಾಡಿಕೊಳ್ಳಲಿಲ್ಲವೋ? ಯಾವನಾದರೂ ದನದ ಮರಿಯಾದ ಹೋರಿಯನ್ನೂ, ಏಳು ಟಗರುಗಳನ್ನೂ ತೆಗೆದುಕೊಂಡು ಬಂದು, ತನ್ನನ್ನು ಪ್ರತಿಷ್ಠೆ ಮಾಡಿದರೆ ಅವನು ದೇವರಲ್ಲದವುಗಳಿಗೆ ಯಾಜಕನಾಗಿರುವನಷ್ಟೇ.

“ನಮಗಾದರೋ ಯೆಹೋವ ದೇವರು ದೇವರಾಗಿದ್ದಾರೆ. ನಾವು ಅವರನ್ನು ಬಿಡಲಿಲ್ಲ. ಇದಲ್ಲದೆ ಯೆಹೋವ ದೇವರಿಗೆ ಸೇವೆ ಮಾಡುವ ಯಾಜಕರು ಆರೋನನ ಮಕ್ಕಳು. ಲೇವಿಯರು ಅವರಿಗೆ ಕೆಲಸದಲ್ಲಿ ಸಹಾಯ ಮಾಡುತ್ತಿದ್ದರು. ಅವರು ಪ್ರತಿ ಉದಯದಲ್ಲಿಯೂ, ಪ್ರತಿ ಸಾಯಂಕಾಲದಲ್ಲಿಯೂ ಯೆಹೋವ ದೇವರಿಗೆ ದಹನಬಲಿಗಳನ್ನೂ, ಸುಗಂಧ ಧೂಪವನ್ನೂ ಸುಡುತ್ತಾರೆ. ಇದಲ್ಲದೆ ಪರಿಶುದ್ಧ ಮೇಜಿನ ಮೇಲೆ ರೊಟ್ಟಿಗಳನ್ನು ಇಡುತ್ತಾ, ಪ್ರತಿ ಸಾಯಂಕಾಲದಲ್ಲಿ ಬಂಗಾರದ ದೀಪಸ್ತಂಭವನ್ನೂ, ಅದರ ದೀಪಗಳನ್ನೂ ಸಿದ್ಧಮಾಡಿ ಹಚ್ಚುತ್ತಾ ಇರುತ್ತಾರೆ. ನಾವು ನಮ್ಮ ದೇವರಾದ ಯೆಹೋವ ದೇವರ ಕಟ್ಟಳೆಯನ್ನು ಕೈಗೊಳ್ಳುತ್ತೇವೆ, ಆದರೆ ನೀವು ಅವರನ್ನು ಬಿಟ್ಟಿದ್ದೀರಿ. ದೇವರು ತಾವೇ ಅಧಿಪತಿಯಾಗಿ ನಮ್ಮ ಸಂಗಡ ಇದ್ದಾರೆ. ಇದಲ್ಲದೆ ನಿಮಗೆ ವಿರೋಧವಾಗಿ ಜಯಧ್ವನಿ ಮಾಡುವ ತುತೂರಿಗಳನ್ನು ಹಿಡಿದುಕೊಂಡ ಅವರ ಯಾಜಕರು ನಮಗಿದ್ದಾರೆ. ಇಸ್ರಾಯೇಲರೇ, ನೀವು ನಿಮ್ಮ ಪಿತೃಗಳ ದೇವರಾದ ಯೆಹೋವ ದೇವರಿಗೆ ವಿರೋಧವಾಗಿ ಯುದ್ಧಮಾಡಬೇಡಿರಿ. ನೀವು ಜಯಹೊಂದುವುದಿಲ್ಲ,” ಎಂದನು.

ಆದರೆ ಯಾರೊಬ್ಬಾಮನು ಅಡಗಿಕೊಂಡವರನ್ನು ಸುತ್ತಲೂ ಅವರ ಹಿಂದೆ ಬರಮಾಡಿದನು. ಆದ್ದರಿಂದ ಇಸ್ರಾಯೇಲರು ಯೆಹೂದದವರ ಮುಂದೆಯೂ, ಅವರ ಹಿಂದೆಯೂ ಬಂದರು. ಯೆಹೂದದವರು ಹಿಂದಕ್ಕೆ ನೋಡಿದಾಗ, ಯುದ್ಧವು ಅವರ ಮುಂದೆಯೂ ಹಿಂದೆಯೂ ಇತ್ತು. ಆಗ ಯೆಹೋವ ದೇವರಿಗೆ ಅವರು ಮೊರೆಯಿಟ್ಟರು. ಯಾಜಕರು ತುತೂರಿಗಳನ್ನು ಊದಿದರು. ಆಗ ಯೆಹೂದ್ಯರು ಆರ್ಭಟಿಸಿದರು. ಯೆಹೂದ್ಯರು ಆರ್ಭಟಿಸಿದಾಗ, ದೇವರು ಅಬೀಯನ ಮತ್ತು ಯೆಹೂದದವರ ಮುಂದೆ ಯಾರೊಬ್ಬಾಮನನ್ನೂ, ಸಮಸ್ತ ಇಸ್ರಾಯೇಲರನ್ನೂ ಅಪಜಯಗೊಳಿಸಿದರು. ಇಸ್ರಾಯೇಲರು ಯೆಹೂದದವರ ಎದುರಿನಿಂದ ಓಡಿಹೋದರು. ಹೀಗೆ ದೇವರು ಇಸ್ರಾಯೇಲರನ್ನು ಯೆಹೂದದವರ ಕೈಯಲ್ಲಿ ಒಪ್ಪಿಸಿದರು. ಅಬೀಯನೂ, ಅವನ ಜನರೂ ಅವರಲ್ಲಿ ಬಹಳ ಮಂದಿಯನ್ನು ಹತಮಾಡಿದರು. ಇಸ್ರಾಯೇಲರಲ್ಲಿ ಐದು ಲಕ್ಷಮಂದಿ ಬಲಶಾಲಿಗಳಾದ ಸೈನಿಕರು ಹತರಾದರು. ಹೀಗೆ ಆ ಕಾಲದಲ್ಲಿ ಇಸ್ರಾಯೇಲರು ತಗ್ಗಿಹೋದರು. ಆದರೆ ಯೆಹೂದದವರು ತಮ್ಮ ಪಿತೃಗಳ ದೇವರಾದ ಯೆಹೋವ ದೇವರ ಮೇಲೆ ಆತುಕೊಂಡದ್ದರಿಂದ ಜಯ ಹೊಂದಿದರು.

ಅಬೀಯನು ಯಾರೊಬ್ಬಾಮನನ್ನು ಹಿಂದಟ್ಟಿ ಅವನಿಂದ ಬೇತೇಲ್, ಯೆಷಾನಾ, ಎಫ್ರೋನ್ ಎಂಬ ಪಟ್ಟಣಗಳನ್ನೂ, ಅವುಗಳ ಗ್ರಾಮಗಳನ್ನೂ ವಶಪಡಿಸಿಕೊಂಡನು. ಯಾರೊಬ್ಬಾಮನು ಅಬೀಯನ ಜೀವಮಾನದಲ್ಲಿ ತಿರುಗಿ ಬಲಗೊಳ್ಳಲಿಲ್ಲ. ಯೆಹೋವ ದೇವರ ಶಿಕ್ಷೆಯಿಂದ ಯಾರೊಬ್ಬಾಮನು ಸತ್ತನು.

ಅಬೀಯನು ಪ್ರಬಲನಾದನು. ಅವನಿಗೆ ಹದಿನಾಲ್ಕು ಮಂದಿ ಹೆಂಡತಿಯರೂ, ಇಪ್ಪತ್ತೆರಡು ಮಂದಿ ಪುತ್ರರೂ, ಹದಿನಾರು ಮಂದಿ ಪುತ್ರಿಯರೂ ಇದ್ದರು.

ಅಬೀಯನ ಮಿಕ್ಕಾದ ಕ್ರಿಯೆಗಳೂ, ಅವನ ನಡೆನುಡಿಗಳ ಮಾತುಗಳೂ ಪ್ರವಾದಿಯಾದ ಇದ್ದೋವನ ವರ್ತಮಾನಗಳಲ್ಲಿ ಬರೆದಿರುತ್ತವೆ.

Source notes (1)
  1. Footnote ಅಥವಾ ಮೊಮ್ಮಗಳು

Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ. Copyright © 1999, 2020, 2022 Biblica, Inc. Licensed under CC BY-SA 4.0. “Biblica” is a trademark registered in the United States Patent and Trademark Office by Biblica, Inc. Source: eBible.org. Typeset from the source files; no intended changes to scripture wording. BibleKenya is not endorsed by the rights holder.

Full source notice & licence · CC BY-SA 4.0 · SourceEdition imported 2026-10-25.

BibleKenya

Reader settings

Theme
Font
Alignment
Reading width

Saved in this browser and used offline too. Press ? for keyboard shortcuts.